ನಾಳೆಯಿಂದ ಅಮರನಾಥ ಯಾತ್ರೆ ಶುರು
- ಉಗ್ರ ದಾಳಿ ಭೀತಿ ಕಾರಣ ಭಾರಿ ಬಿಗಿ ಬಂದೋಬಸ್ತ್- ಭಕ್ತರಿಗೆ, ಸಾಧುಗಳಿಗೆ ಪ್ರತ್ಯೇಕ ನೋಂದಣಿ ವ್ಯವಸ್ಥೆ
ಜಮ್ಮು: ದಕ್ಷಿಣ ಕಾಶ್ಮೀರದ ಹಿಮಾಯಲದಲ್ಲಿರುವ ಅಮರನಾಥದ ಯಾತ್ರೆ ಗುರುವಾರದಿಂದ ಶುರುವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಬುಧವಾರ ಕಾಶ್ಮೀರ ಉಪರಾಜ್ಯಪಾಲ ಮನೋಜ್ ಸಿನ್ಹಾ, ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ 38 ದಿನದ ಯಾತ್ರೆಯ ನೋಂದಣಿಗಾಗಿ ದೇಶದ ವಿವಿಧ ಭಾಗಗಳಿಂದ ಭಕ್ತರ ಹರಿದುದಂಡು ಬರಲು ಶುರುವಾಗಿದೆ.
ಅಮರನಾಥ ಯಾತ್ರೆಗೆ ತೆರಳುವ ಭಕ್ತಾದಿಗಳು ನೋಂದಣಿ ಮಾಡಿಸಿಕೊಳ್ಳಬೇಕು. ಶಾಲಿಮಾರ್ ಪ್ರದೇಶದ ವೈಷ್ಣವಿ ಧಾಮ, ಪಂಚಾಯತ್ ಭವನ ಮತ್ತು ಮಹಾಜನ ಸಭಾದಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಸರಸ್ವತಿ ಧಾಮದಲ್ಲಿ ಮಾತ್ರವೇ ಟೋಕನ್ ವಿತರಿಸಲಾಗುತ್ತಿದೆ. 1600ಕ್ಕೂ ಅಧಿಕ ಭಕ್ತರು ಭಗವತಿ ನಗರ ಬೇಸ್ ಕ್ಯಾಂಪ್‌ನಲ್ಲಿ ತಂಗಿದ್ದಾರೆ. ಅತ್ತ ಸಾಧುಗಳಿಗಾಗಿ ಪುರಾನಿ ಮಂಡಿಯಲ್ಲಿರುವ ರಾಮ ದೇಗುಲದ ಸಂಕೀರ್ಣದಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅವರಿಗೆ ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆಗಳನ್ನೂ ಮಾಡಲಾಗಿದ್ದು, ಈಗಾಗಲೇ 300ಕ್ಕೂ ಅಧಿಕ ಸಾಧುಗಳು ಆಗಮಿಸಿದ್ದಾರೆ.