ದ್ವೇಷ ಭಾಷಣ ತಡೆಯಲು ಹೊಸ ಮಾರ್ಗಸೂಚಿ ಬೇಕಿಲ್ಲ : ಸುಪ್ರೀಂ

KannadaprabhaNewsNetwork |  
Published : Apr 30, 2026, 01:45 AM ISTUpdated : Apr 30, 2026, 04:57 AM IST
Supreme Court

ಸಾರಾಂಶ

ಹಾಲಿ ಇರುವ ಕ್ರಿಮಿನಲ್‌ ಕಾನೂನುಗಳು ದ್ವೇಷ ಭಾಷಣ ತಡೆಯಲು ಸಕ್ಷಮವಾಗಿವೆ. ಸಮಸ್ಯೆಯಿರುವುದು ಕಾನೂನಿನಲ್ಲಲ್ಲ, ಬದಲಾಗಿ ಅದರ ಸರಿಯಾದ ಅನುಷ್ಠಾನದಲ್ಲಿ. ಹಾಲಿ ಇರುವ ಕಾನೂನಿನ ವಿಚಾರದಲ್ಲಿ ಹಸ್ತಕ್ಷೇಪದ ಅಗತ್ಯವಿಲ್ಲ, ದ್ವೇಷ ಭಾಷಣ ತಡೆಗೆ ಹೊಸದಾಗಿ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌

 ನವದೆಹಲಿ: ಹಾಲಿ ಇರುವ ಕ್ರಿಮಿನಲ್‌ ಕಾನೂನುಗಳು ದ್ವೇಷ ಭಾಷಣ ತಡೆಯಲು ಸಕ್ಷಮವಾಗಿವೆ. ಸಮಸ್ಯೆಯಿರುವುದು ಕಾನೂನಿನಲ್ಲಲ್ಲ, ಬದಲಾಗಿ ಅದರ ಸರಿಯಾದ ಅನುಷ್ಠಾನದಲ್ಲಿ. ಹೀಗಾಗಿ ಹಾಲಿ ಇರುವ ಕಾನೂನಿನ ವಿಚಾರದಲ್ಲಿ ಹಸ್ತಕ್ಷೇಪದ ಅಗತ್ಯವಿಲ್ಲ, ದ್ವೇಷ ಭಾಷಣ ತಡೆಗೆ ಹೊಸದಾಗಿ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ದ್ವೇಷ ಭಾಷಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಬಳಿಕ ನ್ಯಾ.ವಿಕ್ರಂನಾಥ್‌ ಮತ್ತು ನ್ಯಾ. ಸಂದೀಪ್‌ ಮೆಹ್ತಾ ಅವರಿದ್ದ ಪೀಠವು ಈ ರೀತಿಯ ಅಪರಾಧಗಳನ್ನು ತಡೆಯಲು ಹೊಸದಾಗಿ ನಿರ್ದೇಶನ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿತು.

ಕ್ಷೆಯನ್ನು ನಿಗದಿಪಡಿಸುವ ಅಧಿಕಾರ ಶಾಸಕಾಂಗದ ವ್ಯಾಪ್ತಿಯಲ್ಲಿ

ಶಿಕ್ಷೆಯನ್ನು ನಿಗದಿಪಡಿಸುವ ಅಧಿಕಾರ ಪೂರ್ಣವಾಗಿ ಶಾಸಕಾಂಗದ ವ್ಯಾಪ್ತಿಯಲ್ಲಿದೆ. ಸಾಂವಿಧಾನಿಕ ವ್ಯವಸ್ಥೆಯಡಿ ಅಧಿಕಾರದ ಪ್ರತ್ಯೇಕೀಕರಣವು ನ್ಯಾಯಾಂಗಕ್ಕೆ ಹೊಸ ಕಾನೂನುಗಳನ್ನು ಸೃಷ್ಟಿಸಲು ಅನುಮತಿ ನೀಡುವುದಿಲ್ಲ. ಶಿಕ್ಷಿಸಬಹುದಾ ಅಪರಾಧ ಕೃತ್ಯಗಳಿಗೆ ಶಿಕ್ಷೆ ಮತ್ತು ಅದಕ್ಕೆ ಶಿಕ್ಷೆ ನಿಗದಿಪಡಿಸುವುದು ಶಾಸಕಾಂಗದ ಕೆಲಸ.

ನ್ಯಾಯಾಲಯಗಳು ಕಾನೂನಿನ ವ್ಯಾಖ್ಯಾನ ಮಾಡಬಹುದು ಅಥವಾ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ನಿರ್ದೇಶನ ನೀಡಬಹುದೇ ಹೊರತು ಯಾವುದೇ ಹೊಸ ಕಾನೂನು ರೂಪಿಸುವಂತಿಲ್ಲ ಮತ್ತು ಸರ್ಕಾರಕ್ಕೆ ಕಾನೂನು ಮಾಡಲು ಬಲವಂತಪಡಿಸುವಂತಿಲ್ಲ ಎಂದು ಪೀಠ ತಿಳಿಸಿತು.

ಹಾಲಿ ಇರುವ ಕಾನೂನಿನಲ್ಲಿ ಯಾವುದೇ ನಿರ್ವಾತ ಇಲ್ಲ

ಜತೆಗೆ, ದ್ವೇಷ ಭಾಷಣವನ್ನು ತಡೆಯುವ ಸಂಬಂಧ ಹಾಲಿ ಇರುವ ಕಾನೂನಿನಲ್ಲಿ ಯಾವುದೇ ನಿರ್ವಾತ ಇಲ್ಲ. ಹೀಗಾಗಿ ಈ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ಕಾನೂನುಬದ್ಧ ಅಪರಾಧ ಎಂದು ಸ್ಪಷ್ಟವಾದರೆ ಎಫ್‌ಐಆರ್‌ ದಾಖಲಿಸುವುದು ಪೊಲೀಸರ ಕರ್ತವ್ಯ. ಲಲಿತಾ ಕುಮಾರಿ-ಉತ್ತರಪ್ರದೇಶ ಸರ್ಕಾರದ ನಡುವಿನ ಪ್ರಕರಣದ ತೀರ್ಪಿನಲ್ಲಿ ಇದು ಸ್ಪಷ್ಟವಾಗಿದೆ. ದ್ವೇಷ ಭಾಷಣದ ವಿಚಾರದಲ್ಲಿ ಪೊಲೀಸರು ಕಡ್ಡಾಯವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ಒಂದು ವೇಳೆ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದರೆ ಯಾರೇ ಆದರೂ ನ್ಯಾಯಾಲಯದ ಕದ ಬಡಿಯಬಹುದಾಗಿದೆ.

ಒಂದು ವೇಳೆ ಪೊಲೀಸರು ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕಿದರೆ ನಾಗರಿಕರ ಮುಂದೆ ಹಲವು ಆಯ್ಕೆಗಳಿವೆ. ಅವರು ಮೇಲಧಿಕಾರಿ ಅಂದರೆ ಎಸ್ಪಿ ಅವರ ಮುಂದೆ ಹೋಗಬಹುದು. ಮ್ಯಾಜಿಸ್ಟ್ರೇಟ್‌ರ ಮುಂದೆಯೂ ಹೋಗಬಹುದು ಅಥವಾ ಕೋರ್ಟ್‌ ಮುಂದೆ ಖಾಸಗಿ ದೂರು ಸಲ್ಲಿಸಬಹುದಾಗಿದೆ.

ಪೂರ್ವಾನುಮತಿ ಎಂಬುದು ಕಾಗ್ನಿಜೆನ್ಸ್‌ ಹಂತದಲ್ಲೇ ಅನ್ವಯವಾಗುತ್ತದೆ. ಪೂರ್ವ ಕಾಗ್ನಿಜೆನ್ಸ್‌ ಹಂತ ಅಥವಾ ಎಫ್‌ಐಆರ್‌ ದಾಖಲಿಸುವ ಅಥವಾ ಬಿಎನ್‌ಎಸ್‌ಎಸ್‌ 175(3) ಅಡಿ ತನಿಖೆ ಮಾಡುವ ಹಂತದಲ್ಲಿ ಪೂರ್ವಾನುಮತಿ ಅನ್ವಯಿಸುವುದಿಲ್ಲ ಎಂದು ಇದೇ ವೇಳೆ ಕೋರ್ಟ್‌ ತಿಳಿಸಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರೀತಿಗೆ ಅಡ್ಡಿ: ಟ್ರೆಕ್‌ಗೆ ಹೋದಾಗ 400 ಅಡಿ ಕಂದಕಕ್ಕೆ ತಳ್ಳಿ ಭಾವಿ ಪತಿ ಕೊಲೆ
ಸಿಂದೂರದಲ್ಲಿ ಪಾಕ್‌ ಬಳಸಿದ್ದಚೀನಾ ನಿರ್ಮಿತ ಜೆ-10 ಜೆಟ್‌ಗೆಖರೀದಿಗೆ ಬಾಂಗ್ಲಾ ನಿರ್ಧಾರ