ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ‘ನಮ್ಮ ಹೋರಾಟ ಶಕ್ತಿಯ (ಸರ್ಕಾರದ ಬಲಪ್ರಯೋಗ) ವಿರುದ್ಧ’ ಎಂದು ನೀಡಿದ ಹೇಳಿಕೆ ಬಿಜೆಪಿ-ಕಾಂಗ್ರೆಸ್ ನಡುವೆ ಘೋರ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ಶಕ್ತಿಯ ಸಂಹಾರಕರು ಹಾಗೂ ಶಕ್ತಿಯ ಆರಾಧಕರ ನಡುವಿನ ಯುದ್ಧವಾಗಲಿದೆ’ ಎಂದಿದ್ದಾರೆ.
ಇದಕ್ಕೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ತಿರುಗೇಟು ನೀಡಿ, ‘ಈ ದೇಶವನ್ನು ಅಸುರೀ ಶಕ್ತಿ ಆಳಲಿದೆಯೋ ಅಥವಾ ದೈವೀ ಶಕ್ತಿ ಆಳಲಿದೆಯೋ ಎಂಬುದನ್ನು ಜನರು ಚುನಾವಣೆಯಲ್ಲಿ ನಿರ್ಧರಿಸಲಿದ್ದಾರೆ’ ಎಂದಿದ್ದಾರೆ.
ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ‘ನಾನು ಹೇಳಿದ ಶಕ್ತಿ ಎಂಬ ಪದದ ಅರ್ಥ ಹಿಂದೂ ದೇವರಿಗೆ ಸಂಬಂಧಿಸಿದ್ದಲ್ಲ. ಆದರೆ ಅಧರ್ಮ, ಭ್ರಷ್ಟಾಚಾರ, ಅಸತ್ಯದ ಶಕ್ತಿಯ ವಿರುದ್ಧ. ಮೋದಿ ಹಾಗೂ ಬಿಜೆಪಿಗರು ಪದೇ ಪದೇ ಹೇಳಿಕೆ ತಿರುಚುವ ಚಾಳಿ ಹೊಂದಿದ್ದಾರೆ.
ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಮಾಡುತ್ತಿರುವ ಬಲಪ್ರಯೋಗ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ‘ಬಿಜೆಪಿ ನಾಯಕ ಹಾಗೂ ಕುಸ್ತಿ ಸಂಘದ ಅಧ್ಯಕ್ಷ ಬೃಜ್ ಭೂಷಣ್ ಸಿಂಗ್ ಮೇಲೆ ಮಹಿಳಾ ಕುಸ್ತಿ ಪಟುಗಳು ಅತ್ಯಾಚಾರ ಆರೋಪ ಮಾಡಿದರು. ಆಗ ಮೋದಿ ಅವರ ‘ಶಕ್ತಿ’ ಆರಾಧನೆ ಎಲ್ಲಿ ಹೋಗಿತ್ತು?’ ಎಂದು ಪವನ್ ಖೇರಾ ಪ್ರಶ್ನಿಸಿದ್ದಾರೆ.