ಬಲಿಷ್ಠ ಭಾರತದಿಂದ ಸಮೃದ್ಧ ಜಗತ್ತಿಗೆ ಕೊಡುಗೆ : ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork | Updated : Jul 04 2025, 04:29 AM IST
ಘಾನಾ | Kannada Prabha

ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

 ಅಕ್ರಾ (ಘಾನಾ): ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.2 ದಿನಗಳ ಘಾನಾ ದೇಶದ ಪ್ರವಾಸದಲ್ಲಿರುವ ಅವರು, ಗುರುವಾರ ಘಾನಾ ಸಂಸತ್ತನ್ನುದ್ದೇಶಿಸಿ ಮಾತನಾಡಿದರು.

‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತವು ಜಗತ್ತಿನ ಶಕ್ತಿ ಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ. ಸ್ಥಿರ ರಾಜಕೀಯ ಮತ್ತು ಆಡಳಿತದ ಅಡಿಪಾಯದ ಮೇಲೆ, ಭಾರತವು ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2ನೇ ಮಹಾಯುದ್ಧದ ಬಳಿಕ ವಿಶ್ವದಲ್ಲಾಗುತ್ತಿರುವ ಬದಲಾವಣೆಗಳ ಕುರಿತು ಗಮನ ಸೆಳೆದ ಅವರು, ‘ತಂತ್ರಜ್ಞಾನದಲ್ಲಿನ ಕ್ರಾಂತಿ, ಜಾಗತಿಕ ದಕ್ಷಿಣದ ಉದಯ ಮತ್ತು ಬದಲಾಗುತ್ತಿರುವ ಜನಸಂಖ್ಯಾಕ್ರಮವು ಜಗತ್ತಿನ ವೇಗ ಮತ್ತು ಪ್ರಮಾಣಕ್ಕೆ ಕೊಡುಗೆ ನೀಡುತ್ತಿದೆ. ಬದಲಾಗುತ್ತಿರುವ ಸನ್ನಿವೇಶಗಳು ಜಾಗತಿಕ ಆಡಳಿತದಲ್ಲಿ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸುಧಾರಣೆಗಳನ್ನು ಬಯಸುತ್ತವೆ’ ಎಂದರು.

ಮೋದಿಗೆ ಘಾನಾದ ಅತ್ಯುಚ್ಚ ಪ್ರಶಸ್ತಿ ಪ್ರದಾನ 

2 ದಿನಗಳ ಘಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುಚ್ಚ ಗೌರವ ನೀಡಿ ಗೌರವಿಸಲಾಗಿದೆ. ಅಧ್ಯಕ್ಷ ಜಾನ್‌ ಡ್ರಾಮಾನಿ ಮಹಮಾ ಅವರು ಘಾನಾದ ರಾಷ್ಟ್ರೀಯ ಗೌರವವಾದ ‘ದ ಆಫಿಸರ್‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ ಘಾನಾ’ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಿದ್ದಾರೆ.

ಇದು ಮೋದಿ ಅವರಿಗೆ ಸಂದಿರುವ 24ನೇ ದೇಶದ ಅತ್ಯುಚ್ಚ ಗೌರವವಾಗಿದೆ.

ತಮ್ಮ ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವಕ್ಕಾಗಿ ಸಂದ ಗೌರವವನ್ನು ಸ್ವೀಕರಿಸಿದ ಮೋದಿ, ಅದನ್ನು ಎರಡೂ ರಾಷ್ಟ್ರಗಳ ಯುವಕರ ಉಜ್ವಲ ಭವಿಷ್ಯ, ಭಾರತ ಮತ್ತು ಘಾನಾ ನಡುವಿನ ಐತಿಹಾಸಿಕ ನಂಟು ಹಾಗೂ ಶ್ರೀಮಂತ ಸಂಸ್ಕೃತಿ ಮತ್ತು ವಿವಿಧತೆಗೆ ಅರ್ಪಿಸಿದ್ದಾರೆ. ಬಳಿಕ ಮಾತನಾಡಿದ ಅವರು, ‘ನಾನು 140 ಕೋಟಿ ಭಾರತೀಯರ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ಈ ಗೌರವದಿಂದಾಗಿ, ಭಾರತ ಮತ್ತು ಘಾನಾದ ಸ್ನೇಹವನ್ನು ಮತ್ತಷ್ಟು ಬಲಪಡಿಸಯುವ ನಿಟ್ಟಿನಲ್ಲಿ ಕೆಲಸ ಮಾಡುವ ಜವಾಬ್ದಾರಿಯೂ ನನ್ನ ಹೆಗಲೇರಿದೆ. ಭಾರತ ಯಾವಾಗಲೂ ಘಾನಾ ಜನರೊಂದಿಗೆ ನಿಲ್ಲುತ್ತದೆ ಮತ್ತು ವಿಶ್ವಾಸಾರ್ಹ ಸ್ನೇಹಿತ ಮತ್ತು ಅಭಿವೃದ್ಧಿ ಪಾಲುದಾರನಾಗಿ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ’ ಎಂಬ ಭರವಸೆ ನೀಡಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಇದು ಭಾರತ-ಘಾನಾ ನಡುವಿನ ಆಳವಾದ ಮತ್ತು ದೀರ್ಘಕಾಲೀನ ಸಂಬಂಧಗಳಿಗೆ ಸಾಕ್ಷಿ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 3 ದಶಕಗಳ ಬಳಿಕ ಆಫ್ರಿಕಾ ದೇಶವಾದ ಘಾನಾಗೆ ಹೋದ ಮೊದಲ ಭಾರತೀಯ ಪ್ರಧಾನಿ ಮೋದಿ ಆಗಿದ್ದಾರೆ.

 ಘಾನಾ ಅಧ್ಯಕ್ಷಗೆ ಮೋದಿ ಬೀದರ್‌ನ ಬಿದರಿ ಹೂದಾನಿ ಗಿಫ್ಟ್‌

ಅಕ್ರಾ: ಪ್ರಧಾನಿ ನರೇಂದ್ರ ಮೋದಿ ಅವರು ಘಾನಾ ಅಧ್ಯಕ್ಷ ಜಾನ್ ಮಹಾಮ ಅವರಿಗೆ ಬಿದ್ರಿ ಕಲಾಕೃತಿ ಹೂದಾನಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ಪ.ಬಂಗಾಳ ಕುಶಲಕರ್ಮಿಗಳಿಂದ ತಯಾರಾದ ಮೈಸೂರು ದಸರಾ ವೇಳೆ ಅಂಬಾರಿ ಹೊತ್ತ ಆನೆಯ ರೀತಿಯ ಕಲಾಕೃತಿಯನ್ನೂ ಗಿಫ್ಟ್ ಆಗಿ ನೀಡಿದ್ದಾರೆ.ಇನ್ನೊಂದೆಡೆ ಕಾಶ್ಮೀರದ ಪಶ್ಮೀನಾ ಶಾಲು, ಒಡಿಶಾದ ಕಟಕ್‌ನಿಂದ ಬಂದ ಸೊಗಸಾದ ಬೆಳ್ಳಿಯ ಫಿಲಿಗ್ರೀ ವರ್ಕ್ ಪರ್ಸ್ ಅನ್ನು ಮಹಾಮ ಅವರ ಪತ್ನಿಗೆ ಮೋದಿ ಕಾಣಿಕೆ ನೀಡಿದ್ದಾರೆ.

ವಿಶಿಷ್ಟ ಬಿದರಿ ಕಲೆ :ಕರ್ನಾಟಕದ ಬೀದರ್‌ನಿಂದ ಬಂದ ಈ ಸೊಗಸಾದ ಬಿದ್ರಿವೇರ್ ಹೂದಾನಿಗಳು ಭಾರತದ ಪ್ರಸಿದ್ಧ ಲೋಹದ ಕರಕುಶಲತೆಯನ್ನು ಪ್ರದರ್ಶಿಸುತ್ತವೆ. ಶತಮಾನಗಳಷ್ಟು ಹಳೆಯ ತಂತ್ರವನ್ನು ಬಳಸಿಕೊಂಡು ನುರಿತ ಕುಶಲಕರ್ಮಿಗಳಿಂದ ಕೈಯಿಂದ ರಚಿಸಲಾದ ಈ ಹೂದಾನಿಗಳನ್ನು ಸತು-ತಾಮ್ರದ ಮಿಶ್ರಲೋಹದಿಂದ ತಯಾರಿಸಲಾಗುತ್ತದೆ.

ಮದುವೆಗಳು, ವಾರ್ಷಿಕೋತ್ಸವಗಳು, ಹಬ್ಬಗಳು ಅಥವಾ ಇತರ ಸಮಾರಂಭಗಳಲ್ಲಿ ಇವು ಗಮನ ಸೆಳೆಯುತ್ತವೆ.

Read more Articles on