5 ವರ್ಷದ ಹಿಂದಿನ ಆಸ್ತಿಗೆ ಹೋಲಿಸಿದರೆ 51 ಲಕ್ಷ ರು. ಹೆಚ್ಚಳವಾಗಿದ್ದು ಯಾವುದೇ ಸ್ಥಿರಾಸ್ತಿ ಇಲ್ಲ. 2.85 ಕೋಟಿ ರು. ಸ್ಥಿರ ಠೇವಣಿ, 52 ಸಾವಿರ ರು. ನಗದು, 2.67 ಲಕ್ಷ ರು. ಮೌಲ್ಯದ 4 ಚಿನ್ನದ ಉಂಗುರಗಳಿಗೆ ಪ್ರಧಾನಿ ಮೋದಿ ಒಡೆಯರಾಗಿದ್ದಾರೆ.
ವಾರಾಣಸಿ: ಲೋಕಸಭೆ ಚುನಾವಣೆಗೆ 3ನೇ ಬಾರಿ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ವೇಳೆ 3.02 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಅವರು 2.51 ಕೋಟಿ ರು. ಆಸ್ತಿ ಪ್ರಕಟಿಸಿದ್ದರು. ಹೀಗಾಗಿ 5 ವರ್ಷದಲ್ಲಿ ಅವರ ಆಸ್ತಿ ಮೌಲ್ಯ 51 ಲಕ್ಷ ರು. ಏರಿದಂತಾಗಿದೆ.
ಚುನಾವಣಾ ಅಫಿಡವಿಟ್ ಪ್ರಕಾರ, ಪ್ರಧಾನಿ ಅವರ ಬಳಿ 52,920 ರು. ನಗದು ಮತ್ತು ರೂ 2,85,60,338 ರು. ಮೌಲ್ಯದ ಸ್ಥಿರ ಠೇವಣಿಗಳು ಇವೆ. ಇದರ ಹೊರತಾಗಿ ಮೋದಿ ಅವರು ಯಾವುದೇ ಸ್ಥಿರ ಆಸ್ತಿಯನ್ನು ಘೋಷಿಸಿಲ್ಲ. ಆದರೆ ಚರ ಆಸ್ತಿಗಳ ಒಟ್ಟು ಮೌಲ್ಯ 3,02,06,889 ರು. ಆಗಿದೆ.
ಇದೇ ವೇಳೆ ಅವರ ಬಳಿ ಯಾವುದೇ ಕಾರು, ಮನೆ ಹಾಗೂ ಭೂಮಿ ಇಲ್ಲ.
2018-19 ರ ಆರ್ಥಿಕ ವರ್ಷದಲ್ಲಿ 11 ಲಕ್ಷ ರು. ಇದ್ದ ತೆರಿಗೆ ಆದಾಯವು 2022-23 ರಲ್ಲಿ 23.5 ಲಕ್ಷ ರು.ಗಳಿಗೆ ದ್ವಿಗುಣಗೊಂಡಿದೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2 ಖಾತೆಗಳನ್ನು ಹೊಂದಿದ್ದಾರೆ.
ಎಸ್‌ಬಿಐನ ಗಾಂಧಿನಗರ ಶಾಖೆಯಲ್ಲಿ 73,304 ರು.ಗಳನ್ನು ಠೇವಣಿ ಇರಿಸಿದ್ದರೆ, ಎಸ್‌ಬಿಐನ ವಾರಾಣಸಿ ಶಾಖೆಯಲ್ಲಿ ಕೇವಲ 7,000 ರು. ಹೊಂದಿದ್ದಾರೆ. ಇನ್ನು ಎಸ್‌ಬಿಐನಲ್ಲಿ 2,85,60,338 ರು. ಮೌಲ್ಯದ ಸ್ಥಿರ ಠೇವಣಿಯನ್ನೂ ಹೊಂದಿದ್ದಾರೆ. ಮೋದಿ ಬಳಿ 2,67,750 ರು. ಮೌಲ್ಯದ 4 ಚಿನ್ನದ ಉಂಗುರಗಳಿವೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.