ಪಿಟಿಐ ವಾರಾಣಸಿ
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು, ಅವರು ಮೂರನೇ ಬಾರಿಗೆ ಆಯ್ಕೆ ಆಗಲು ಯತ್ನ ನಡೆಸುತ್ತಿರುವ ಕಾರಣ ನಾಮಪತ್ರ ಸಲ್ಲಿಕೆ ವೇಳೆ ಭರ್ಜರಿ ಶಕ್ತಿ ಪ್ರದರ್ಶನ ನಡೆದಿದ್ದು, ಕೇಂದ್ರ ಸಚಿವರು, ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎನ್‌ಡಿಎ ಅಂಗಪಕ್ಷಗಳ ನಾಯಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಬೆಳಗ್ಗೆ ಇಲ್ಲಿನ ದಶಾಶ್ವಮೇಧ ಘಾಟ್‌ನಲ್ಲಿ ಮೊದಲು ಮೋದಿ ಅವರು ವೇದ ಮಂತ್ರಗಳ ಪಠಣದ ನಡುವೆ ಗಂಗಾ ಆರತಿ ಮಾಡಿದರು ಮತ್ತು ನಂತರ ನಮೋ ಘಾಟ್‌ಗೆ ದೋಣಿ ವಿಹಾರ ನಡೆಸಿದರು, ಅಲ್ಲಿಂದ ಕಾಲ ಭೈರವ ದೇವಾಲಯಕ್ಕೆ ಆಗಮಿಸಿದರು. ಕಾಲಭೈರವ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ವಾರಾಣಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.
ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಗೆ ಮುಹೂರ್ತ ಬರೆದಿದ್ದ ಕಾಶಿಯ ವೇದ ಪಂಡಿತ ಗಣೇಶ್ವರ ಶಾಸ್ತ್ರಿ ದ್ರಾವಿಡ್, ಹಿಂದುಳಿದ ವರ್ಗದ ನಾಯಕ ಹಾಗೂ ಆರೆಸ್ಸೆಸ್ ಮುಖಂಡ ಬೈಜನಾಥ್ ಪಟೇಲ್, ದಲಿತ ವರ್ಗದ ಮುಖಂಡ ಹಾಗೂ ವಾರಾಣಸಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ ಸೋನಕರ್, ಹಿಂದುಳಿದ ವರ್ಗದ ಲಾಲ್ ಚಂದ್ ಕುಶ್ವಾಹಾ ಅವರು ಮೋದಿ ನಾಮಪತ್ರಕ್ಕೆ ಸೂಚಕರಾದರು.ಆದರೆ ನಾಮಪತ್ರ ಸಲ್ಲಿಕೆ ವೇಳೆ ಗಣೇಶ್ವರ ಶಾಸ್ತ್ರಿಗಳು, ಬೈಜನಾಥ ಪಟೇಲ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಉಪಸ್ಥಿತರಿದ್ದರು. ಈ ವೇಳೆ ಮೋದಿ ಬಿಳಿ ಕುರ್ತಾ-ಪೈಜಾಮ ಮತ್ತು ನೀಲಿ ಜಾಕೆಟ್ ಧರಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನರತ್ತ ಕೈಬೀಸಿದರು.ವಾರಾಣಸಿಯಲ್ಲಿ ಜೂ.1 ರಂದು 7ನೇ ಹಂತದಲ್ಲಿ ಮತದಾನ ನಡೆಯಲಿದೆ. ಮೋದಿ ಇಲ್ಲಿ ಹ್ಯಾಟ್ರಿಕ್ ಜಯ ಬಯಸಿದ್ದು, ಅವರ ವಿರುದ್ಧ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ ರಾಯ್ ಕೂಡ 3ನೇ ಬಾರಿ ಸ್ಪರ್ಧಿಸಿದ್ದಾರೆ.
ಎನ್‌ಡಿಎ ಶಕ್ತಿ ಪ್ರದರ್ಶನವಾದ ನಾಮಪತ್ರ:ಮೋದಿ ನಾಮಪತ್ರ ಸಲ್ಲಿಕೆಯು ಎನ್‌ಡಿಎ ನಾಯರ ಬಲಪ್ರದರ್ಶನಕ್ಕೆ ವೇದಿಕೆ ಆಯಿತು.
ಪ್ರಧಾನಿ ನಾಮಪತ್ರ ಸಲ್ಲಿಕೆಗೆ ಆಗಮಿಸುವಾಗ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಅನುಪ್ರಿಯಾ ಪಟೇಲ್ ಮತ್ತು ರಾಮದಾಸ್ ಅಠಾವಳೆ ಸೇರಿದಂತೆ ಹಲವು ನಾಯಕರಿದ್ದರು.ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ಹಿಂದೂಸ್ತಾನಿ ಅವಾಮ್ ಮೋರ್ಚಾ-ಸೆಕ್ಯುಲರ್ ಸಂಸ್ಥಾಪಕ ಜಿತನ್ ರಾಮ್ ಮಾಂಝಿ, ರಾಷ್ಟ್ರೀಯ ಲೋಕ ಮೋರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹ, ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂಪ್ರಕಾಶ್ ರಾಜ್‌ಭರ್, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ, ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್, ಅನ್ಬುಮಣಿ ರಾಮದಾಸ್, ಜಿಕೆ ವಾಸನ್, ದೇವನಾಥನ್ ಯಾದವ್, ತುಷಾರ್ ವೆಲ್ಲಪ್ಪಲ್ಲಿ ಮತ್ತು ಅತುಲ್ ಬೋರಾ ಅವರೂ ಹಾಜರಿದ್ದರು.
ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಆರೋಗ್ಯದ ಕಾರಣ ನೀಡಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.