ಅಕ್ರಾ (ಘಾನಾ): ಎಂಟು ದಿನ 5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಭೇಟಿಯಾಗಿ ಬುಧವಾರ ಘಾನಾಗೆ ಬಂದಿಳಿದರು. 2 ದಿನ ಮೋದಿ ಘಾನಾದಲ್ಲಿರಲಿದ್ದು, ಉಭಯ ದೇಶಗಳ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಮಹಮಾ ಆಹ್ವಾನದ ಮೇರೆಗೆ ಘಾನಾಗೆ ತೆರಳಿರುವ ಮೋದಿಗೆ ಅಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಗುರುವಾರತನಕ ಘಾನಾದಲ್ಲಿರುವ ಮೋದಿ ಆ ಬಳಿಕ ಟ್ರಿನಿಡಾಡ್ ಮತ್ತು ಟೊಬಾಗೋ, ಅರ್ಜೇಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ಪ್ರವಾಸ ಕೈಗೊಳ್ಳಲಿದ್ದು, 9 ರಂದು ಅವರ ಪ್ರವಾಸ ಅಂತ್ಯಗೊಳಲಿದೆ.
ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 6 ತಿಂಗಳು ಜೈಲು
ಢಾಕಾ: ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ ಹಸೀನಾ ಅವರಿಗೆ ಅಲ್ಲಿನ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ(ಐಸಿಟಿ) ನ್ಯಾಯಾಂಗ ನಿಂದನೆ ಪ್ರಕರಣದಡಿ 6 ತಿಂಗಳು ಸೆರೆವಾಸದ ಶಿಕ್ಷೆಯನ್ನು ವಿಧಿಸಿದೆ.ಈ ಮೂಲಕ, ದೇಶ ತೊರೆದ ಬಳಿಕ ಮೊದಲ ಬಾರಿ ಹಸೀನಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ನಿಷೇಧಿತ ಬಾಂಗ್ಲಾದೇಶ ಛಾತ್ರ ಲೀಗ್(ಬಿಸಿಎಲ್)ನ ನಾಯಕ ಶಕೀಲ್ ಅಕಂಡ್ ಬುಲ್‌ಬುಲ್ ಜತೆಗಿನ ಹಸೀನಾ ಅವರ ಸಂಭಾಷಣೆಯ ತುಣುಕೊಂದು ಸೋರಿಕೆಯಾಗಿದ್ದು, ಅದರಲ್ಲಿ ಹಸೀನಾ, ‘ನನ್ನ ವಿರುದ್ಧ 227 ಪ್ರಕರಣಗಳು ದಾಖಲಾಗಿದ್ದು, ನನಗೆ 227 ಜನರನ್ನು ಕೊಲ್ಲುವ ಪರವಾನಗಿ ಇವೆ’ ಎಂದಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ। ಮೊಹಮ್ಮದ್ ಗೊಲಾಂ ಮರ್ತುಜಾ ಮೊಜುಂದರ್ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ. ಬುಲ್‌ಬುಲ್ ಅವರಿಗೂ 2 ತಿಂಗಳು ಜೈಲುವಾಸದ ಶಿಕ್ಷೆ ನೀಡಲಾಗಿದೆ.
ಮರಾಠಿ ಮಾತಾಡದಕ್ಕೆ ರಾಜ್ ಠಾಕ್ರೆ ಬೆಂಬಲಿಗರಿಂದ ವ್ಯಾಪಾರಿಗೆ ಥಳಿತ
ಥಾಣೆ: ಮರಾಠಿಯಲ್ಲಿ ಮಾತನಾಡಿಲ್ಲ ಎನ್ನುವ ಕಾರಣಕ್ಕೆ ಆಹಾರ ಮಳಿಗೆಯ ವ್ಯಾಪಾರಿಗೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಪಕ್ಷದ ಕಾರ್ಯಕರ್ತರು ಥಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಭಯಂದರ್‌ನಲ್ಲಿ ನಡೆದಿದೆ.ಎಂಎನ್‌ಎಸ್ ಚಿಹ್ನೆಯಿರುವ ಶಾಲು ಧರಿಸಿದ್ದ ಗುಂಪೊಂದು ಆಹಾರವನ್ನು ಖರೀದಿಸಿದ ಬಳಿಕ ಮಾಲೀಕನಿಗೆ ಮರಾಠಿಯಲ್ಲಿ ಮಾತನಾಡುವುದಕ್ಕೆ ಹೇಳಿದೆ. ಅದಕ್ಕೆ ವ್ಯಾಪಾರಿ ಮರುಪ್ರಶ್ನೆ ಹಾಕಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಕಾರ್ಯಕರ್ತರು ಕೂಗಾಡಿ, ಮಾಲೀಕನಿಗೆ ಮನ ಬಂದಂತೆ ಥಳಿಸಿದ್ದಾರೆ. ಈ ಸಂಬಂಧ ಮಾಲೀಕ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸ್ಟಾರ್ ಹೋಟೆಲಲ್ಲಿ ವಿದ್ಯಾರ್ಥಿ ಮೇಲೆ ರೇಪ್: ಶಿಕ್ಷಕಿ ಬಂಧನ
ಮುಂಬೈನ ಪ್ರತಿಷ್ಠಿತ ಶಾಲೆಯ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನು ಪಂಚತಾರಾ ಹೋಟೆಲ್‌ಗೆ ಕರೆದುಕೊಂಡು ಹೋಗಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಹೀನ ಕೃತ್ಯ ನಡೆದಿದೆ. ಈ ಸಂಬಂಧ ಶಿಕ್ಷಕಿಯನ್ನು ಬಂಧಿಸಲಾಗಿದೆ.40 ವರ್ಷದ ಆಂಗ್ಲಭಾಷಾ ಶಿಕ್ಷಕಿ 16 ವರ್ಷದ ವಿದ್ಯಾರ್ಥಿಯ ಮೇಲೆ ಈ ಕೃತ್ಯ ಎಸಗಿದ್ದಾಳೆ. ವಿವಾಹಿತೆಯಾಗಿದ್ದ ಈಕೆ ವಿದ್ಯಾರ್ಥಿಗೆ ಅನೈತಿಕ ಸಂಬಂಧ ಹೊಂದಲು ಪ್ರಚೋದಿಸಿದ್ದಳು, ಆತ 10ನೇ ಕ್ಲಾಸ್ ಉತ್ತೀರ್ಣನಾಗಿ ಶಾಲೆ ಬಿಟ್ಟ ಬಳಿಕವೂ ಸಂಪರ್ಕಿಸಲು ಯತ್ನಿಸಿದ್ದಳು. 2024ರಲ್ಲಿ ಮೊದಲ ಸಲ ಲೈಂಗಿಕವಾಗಿ ಬಳಸಿಕೊಂಡಿದ್ದಳು.
ಒಮ್ಮೆ ಶಿಕ್ಷಕಿ ಬಾಲಕನನ್ನು ಫೈವ್ ಸ್ಟಾರ್ ಹೋಟೆಲ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಳು. ಈ ವೇಳೆ ಬಾಲಕ ಉದ್ವೇಗಕ್ಕೆ ಒಳಗಾಗಿದ್ದ. ಅದನ್ನು ಕಡಿಮೆ ಮಾಡಲು ಶಿಕ್ಷಕಿ ಮಾತ್ರೆ ಕೂಡ ನೀಡಿದ್ದಳು. ಈ ನಡುವೆ ಇತ್ತೀಚೆಗೆ ಈ ವಿಷಯವನ್ನು ಬಾಲಕ ಹೆತ್ತವರಿಗೆ ವಿಷಯ ತಿಳಿಸಿದ್ದನು. ಈ ಸಂಬಂಧ ಶಿಕ್ಷಕಿ ವಿರುದ್ಧ ಬಿಎನ್‌ಎಸ್ ಮತ್ತು ಪೋಕ್ಸೋ, ಬಾಲಾಪರಾಧಿ ಕಾನೂನಿನಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಸಿಕ್ಕಿಂ ಭಾರತದ ನೆರೆಯ ದೇಶ: ಕಾಂಗ್ರೆಸಿಗ ಅಜಯ್ ವಿವಾದ
ಗ್ಯಾಂಗ್ಟಕ್: ‘ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಸಿಕ್ಕಿಂ ಭಾರತದ ನೆರೆಯ ದೇಶಗಳು’ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಂಸದ ಅಜಯ್ ಕುಮಾರ್ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಭಾರತದ ನೆರೆಯ ದೇಶಗಳಾದ ಬಾಂಗ್ಲಾ, ನೇಪಾಳ ಹಾಗೂ ಶ್ರೀಲಂಕಾ ಸಾಲಿನಲ್ಲಿ ಸಿಕ್ಕಿಂ ಹೆಸರನ್ನೂ ಉಲ್ಲೇಖಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.ವಿವಾದ ಭುಗಿಲೇಳುತ್ತಿದ್ದಂತೆ ಕ್ಷಮೆ ಯಾಚಿಸಿರುವ ಅಜಯ್ ಕುಮಾರ್, ‘ನಮ್ಮ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳು ಹದಗೆಡುತ್ತಿರುವ ಬಗ್ಗೆ ಮಾತನಾಡುತ್ತಿದ್ದಾಗ, ಆಕಸ್ಮಿಕವಾಗಿ ಸಿಕ್ಕಿಂ ಹೆಸರನ್ನು ತೆಗೆದುಕೊಂಡೆ. ಅದು ಬಾಯಿ ತಪ್ಪಿ ಹೇಳಿದ ಮಾತು. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.ಬಿಜೆಪಿ ಆಕ್ರೋಶ:ಅಜಯ್ ಕುಮಾರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ‘ಸಂಸದ ಹಾಗೂ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವವರು ಇಂಥ ವಿಭಜನಕಾರಿ ಮಾತುಗಳನ್ನಾಡುವುದು ಆಘಾತಕಾರಿ. ಇದು ನಮ್ಮ ಸಾಂವಿಧಾನಿಕ ಏಕೀಕರಣದ ಬಗ್ಗೆ ಅವರಿಗಿರುವ ಅಜ್ಞಾನವನ್ನು ಪ್ರತಿಬಿಂಬಿಸುತ್ತವೆ’ ಎಂದು ಕಿಡಿಕಾರಿದೆ.