ವಿಮಾನ ದುರಂತ ಸ್ಥಳಕ್ಕೆ ಪಿಎಂ ಮೋದಿ ಭೇಟಿ, ಸ್ಥಳ ಪರಿಶೀಲನೆ

KannadaprabhaNewsNetwork |  
Published : Jun 14, 2025, 02:22 AM ISTUpdated : Jun 14, 2025, 04:27 AM IST
ಮೋದಿ | Kannada Prabha

ಸಾರಾಂಶ

ಪ್ರಧಾನಿ ಮೋದಿ ಅವರು ಶುಕ್ರವಾರ ಅಹಮದಾಬಾದ್‌ಗೆ ಭೇಟಿ ನೀಡಿ 265 ಮಂದಿಯನ್ನು ಬಲಿಪಡೆದ ಏರ್‌ ಇಂಡಿಯಾ ವಿಮಾನ ದುರಂತಕ್ಕೀಡಾದ ಸ್ಥಳ ಪರಿಶೀಲಿಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು.

ಅಹಮದಾಬಾದ್‌: ಪ್ರಧಾನಿ ಮೋದಿ ಅವರು ಶುಕ್ರವಾರ ಅಹಮದಾಬಾದ್‌ಗೆ ಭೇಟಿ ನೀಡಿ 265 ಮಂದಿಯನ್ನು ಬಲಿಪಡೆದ ಏರ್‌ ಇಂಡಿಯಾ ವಿಮಾನ ದುರಂತಕ್ಕೀಡಾದ ಸ್ಥಳ ಪರಿಶೀಲಿಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಘಟನೆ ಕುರಿತು ಮಾಹಿತಿ ಪಡೆದು ಕೆಲ ಸಲಹೆ-ಸೂಚನೆಗಳನ್ನು ನೀಡಿದರು. ಅಲ್ಲದೆ ದುರಂತದಲ್ಲಿ ಬಲಿಯಾದ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಮನೆಗೂ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಇದಕ್ಕೂ ಮೊದಲು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಏರ್‌ಪೋರ್ಟ್‌ಗೆ ಬೆಳಗ್ಗೆ ವಿಮಾನದಲ್ಲಿ ಬಂದಿಳಿದ ಮೋದಿ ನೇರವಾಗಿ ದುರಂತ ಸ್ಥಳಕ್ಕೆ ತೆರಳಿದರು. ಸುಮಾರು 20 ನಿಮಿಷ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು, ಗುಜರಾತ್‌ನ ಗೃಹ ಸಚಿವ ಹರ್ಷ್‌ ಸಂಘ್ವಿ ಅವರು ವಿಮಾನ ಟೇಕ್‌ ಆಫ್‌ ಆದ ಬಳಿಕ ಇಲ್ಲಿನ ಬಿ.ಜೆ.ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ ಮೇಲೆ ಹೇಗೆ ಪತನವಾಯಿತು ಎಂಬುದನ್ನು ವಿವರಿಸಿದರು.

ತರುವಾಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ನಗರದ ಆಸ್ಪತ್ರೆಗೆ ತೆರಳಿದ ಮೋದಿ, ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್‌ ಕುಮಾರ್‌ ರಮೇಶ್‌ ಅವರ ಆರೋಗ್ಯ ವಿಚಾರಿಸಿದರು. ಬಳಿಕ ವೈದ್ಯರನ್ನು ಭೇಟಿಯಾಗಿ ಉಳಿದ 25 ಗಾಯಾಳುಗಳ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದರು. ಸುಮಾರು 10 ನಿಮಿಷ ಆಸ್ಪತ್ರೆಯಲ್ಲಿ ಕಳೆದ ಪ್ರಧಾನಿ, ಆ ನಂತರ ಏರ್‌ಪೋರ್ಟ್ ಸಮೀಪದ ಗುಜ್‌ ಸೈಲ್‌ ಕಟ್ಟಡಕ್ಕೆ ತೆರಳಿ ಗುಜರಾತ್‌ನ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದರು. ಇದೇ ವೇಳೆ ನಾಗರಿಕ ವಿಮಾನಯಾನ ಅಧಿಕಾರಿಗಳ ಘಟನೆ ಕುರಿತು ಪ್ರಧಾನಿಗೆ ವಿವರಣೆ ನೀಡಿದರು.

ಗುಜರಾತ್‌ ಸಿಎಂ ಭುಪೇಂದ್ರ ಪಟೇಲ್‌, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ ಮತ್ತು ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್‌ ಮೋಹನ್‌ ನಾಯ್ಡು ಈ ವೇಳೆ ಉಪಸ್ಥಿತರಿದ್ದರು.

ಇದೇ ವೇಳೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಮೋದಿ, ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ. ದಿಢೀರ್‌ ಈ ಪ್ರಮಾಣ0 ಸಾವು ನೋವಿನಿಂ ತೀವ್ರ ನೋವಾಗಿದೆ. ಮೃತಪಟ್ಟ ಎಲ್ಲರ ಕುಟುಂಬಕ್ಕೆ ಸಂತಾಪಗಳು. ನಾವು ಅವರ ನೋವು ಅರ್ಥ ಮಾಡಿಕೊಳ್ಳುತ್ತೇವೆ. ತಮ್ಮವರನ್ನು ಕಳೆದುಕೊಂಡ ನೋವು ಹಲವು ವರ್ಷಗಳ ಕಾಲ ಕಾಡಲಿದೆ. ಓಂ ಶಾಂತಿ... ಎಂದು ಬರೆದುಕೊಂಡಿದ್ದಾರೆ.

PREV
Read more Articles on

Recommended Stories

ಜಾತಿಗಣತಿ ‘ಧರ್ಮಕಾಲಂ’ನಲ್ಲಿ ಹಿಂದು ಎಂದೇ ಬರೆಸಲು ಕರೆ
ಮಾಲೂರು ಶಾಸಕ ನಂಜೇಗೌಡಆಯ್ಕೆ ರದ್ದತಿಗೆ ಹೈಕೋರ್ಟ್‌ ಆದೇಶ