ತೂತ್ತುಕುಡಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ 2ನೇ ಉಪಗ್ರಹ ಉಡ್ಡಯನ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ಈ ಕೇಂದ್ರವನ್ನು ಸುಮಾರು 986 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಹೊಸ ಕೇಂದ್ರವು ಮೊಬೈಲ್ ಲಾಂಚ್ ಸ್ಟ್ರಕ್ಚರ್ ಮತ್ತು ಇತರೆ 35 ಬಾಹ್ಯಾಕಾಶ ಸೌಕರ್ಯಗಳನ್ನು ಹೊಂದಿರಲಿದೆ. ಹಾಲಿ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರವು ದೇಶದ ಮೊದಲ ಮತ್ತು ಏಕೈಕ ಉಡ್ಡಯನ ಕೇಂದ್ರವಾಗಿದೆ.
1971ರಲ್ಲಿ ಇದು ಉದ್ಘಾಟನೆಗೊಂಡಿದ್ದು, ಇಲ್ಲಿ ಎಲ್ಲಾ ರೀತಿಯ ಉಪಗ್ರಹಗಳನ್ನು ಹಾರಿಬಿಡಲಾಗುತ್ತಿದೆ. ಆದರೆ ಬಾಹ್ಯಾಕಾಶ ಕ್ಷೇತ್ರ ಮತ್ತು ಉಪಗ್ರಹ ಉಡ್ಡಯನ ಕ್ಷೇತ್ರದಲ್ಲಿ ಇಸ್ರೋ ವಾಣಿಜ್ಯ ಸೇವೆಯನ್ನೂ ಆರಂಭಿಸಿರುವ ಕಾರಣ ಏಕೈಕ ಉಡ್ಡಯನ ಕೇಂದ್ರ ಅಗತ್ಯ ಬೇಡಿಕೆ ಈಡೇರಿಸಲು ಸಾಕಾಗುತ್ತಿಲ್ಲ.
ಹೀಗಾಗಿ ಲಘು ಉಪಗ್ರಹಗಳ ಉಡ್ಡಯನಕ್ಕೆ 2350 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಕುಲಶೇಖರಪಟ್ಟಿಣಂ ಉಡ್ಡಯನ ಕೇಂದ್ರವನ್ನು ಬಳಸಿಕೊಳ್ಳುವ ಉದ್ದೇಶವನ್ನು ಇಸ್ರೋ ಹಾಕಿಕೊಂಡಿದೆ.
2026ರಲ್ಲಿ ಇದು ಕಾರ್ಯಾರಂಭವಾಗುವ ನಿರೀಕ್ಷೆ ಇದೆ.ಇಸ್ರೋ ಘಟಕಕ್ಕೆ ಶಂಕುಸ್ಥಾಪನೆ ಜೊತೆಗೆ ಒಟ್ಟಾರೆ 17000 ಕೋಟಿ ರು. ಮೊತ್ತದ ವಿವಿಧ ಯೋಜನೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.