‘ಇಂಡಿಯಾ’ ನಾಯಕರು ಗಾಂಧೀಜಿಯ 3 ಮಂಗಗಳಂತೆ: ನರೇಂದ್ರ ಮೋದಿ

KannadaprabhaNewsNetwork |  
Published : Mar 02, 2024, 01:47 AM ISTUpdated : Mar 02, 2024, 09:32 AM IST
ಮೋದಿ | Kannada Prabha

ಸಾರಾಂಶ

ಸಂದೇಶ್‌ಖಾಲಿ ದೌರ್ಜನ್ಯದ ಬಗ್ಗೆ ಇಂಡಿಯಾ ನಾಯಕರು ಏಕೆ ಮಾತಾಡುತ್ತಿಲ್ಲ? ಹಾಗೆಯೇ ಟಿಎಂಸಿ ವಿರುದ್ಧವೂ ಬಂಗಾಳದಲ್ಲಿ ಪ್ರಧಾನಿ ತೀವ್ರ ಕಿಡಿಕಾರಿದ್ದಾರೆ.

ಆರಂಬಾಘ್‌ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಹಾಗೂ ಜನಸಾಮಾನ್ಯರ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ‘ಇಂಡಿಯಾ ಕೂಟದ ನಾಯಕರು ಗಾಂಧೀಜಿಯ ಮೂರು ಮಂಗಗಳಿದ್ದಂತೆ’ ಎಂದು ಕಿಡಿಕಾರಿದ್ದಾರೆ.

‘ಸಂದೇಶ್‌ಖಾಲಿ ಘಟನೆ ಬಗ್ಗೆ ಇಂಡಿಯಾ ಕೂಟದ ನಾಯಕರು ಮೌನವಾಗಿದ್ದಾರೆ. ಅವರು ಗಾಂಧೀಜಿಯ ಮೂರು ಮಂಗಗಳಿದ್ದಂತೆ. ಸಂದೇಶ್‌ಖಾಲಿಯ ಬಗ್ಗೆ ಕೇಳಿದಾಗ ಕಾಂಗ್ರೆಸ್‌ ಅಧ್ಯಕ್ಷರು ‘ಬಂಗಾಳದಲ್ಲಿ ಇದೆಲ್ಲ ಆಗುತ್ತಿರುತ್ತದೆ ಬಿಟ್ಹಾಕಿ’ ಎಂದು ಹೇಳಿದರಂತೆ’ ಎಂದೂ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೂಗ್ಲಿ ಜಿಲ್ಲೆಯಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ‘ಇಡೀ ದೇಶ ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದರೆ ಬಂಗಾಳ ಸರ್ಕಾರ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನೋಡಿಕೊಂಡು ಸುಮ್ಮನೆ ಕುಳಿತಿದೆ. 

ತೃಣಮೂಲ ಕಾಂಗ್ರೆಸ್‌ನ ಕೃತ್ಯಗಳನ್ನು ನೋಡಿ ಇಡೀ ದೇಶದ ಜನರು ಕ್ರುದ್ಧರಾಗಿದ್ದಾರೆ. ಮಾ, ಮಾಟಿ, ಮಾನುಷ್‌ ಎಂದು ಜಪ ಮಾಡುವ ಟಿಎಂಸಿ ಪಕ್ಷ ಸಂದೇಶ್‌ಖಾಲಿಯ ಅಕ್ಕತಂಗಿಯರಿಗೆ ಏನು ಮಾಡಿದೆ ನೋಡಿ. ಇದು ನಾಚಿಕೆಗೇಡಿನ ಸಂಗತಿ’ ಎಂದು ವಾಗ್ದಾಳಿ ನಡೆಸಿದರು. 

ಟಿಎಂಸಿ ನಾಯಕ ಶಾಜಹಾನ್‌ ಶೇಖ್‌ ಹಾಗೂ ಆತನ ಬೆಂಬಲಿಗರು ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಹಾಗೂ ಜನರ ಭೂಮಿಯನ್ನು ಕಬಳಿಸಿ ದೌರ್ಜನ್ಯ ಎಸಗಿರುವ ವಿಚಾರ ತೀವ್ರ ವಿವಾದಕ್ಕೀಡಾಗಿದೆ. 

ಗುರುವಾರವಷ್ಟೇ ಶಾಜಹಾನ್‌ನನ್ನು ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಂಗಾಳಕ್ಕೆ ಶುಕ್ರವಾರ ನೀಡಿದ ಭೇಟಿ ಕಳೆದ ಮೂರು ವರ್ಷಗಳಲ್ಲೇ ಮೊದಲನೆಯದ್ದಾಗಿತ್ತು.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ