ಕಾಂಗ್ರೆಸ್‌ ಗೆದ್ರೆ 15% ಬಜೆಟ್‌ ಮುಸ್ಲಿಂಗೆ ಮೀಸಲು: ಮೋದಿ

KannadaprabhaNewsNetwork |  
Published : May 16, 2024, 01:53 AM ISTUpdated : May 16, 2024, 06:20 AM IST
ಮೋದಿ | Kannada Prabha

ಸಾರಾಂಶ

ಯುಪಿಎ ಸರ್ಕಾರ ಇದಕ್ಕೆ ಯತ್ನಿಸಿತ್ತು. ಈಗ ‘ಇಂಡಿಯಾ’ದಿಂದ ಮತ್ತದೇ ಯತ್ನ ಮುಂದುವರೆದಿದೆ. ಕರ್ನಾಟಕದಲ್ಲಿ ರಾತ್ರೋರಾತ್ರಿ ಓಬಿಸಿ ಕೋಟಾದ ಮೀಸಲು ಮುಸ್ಲಿಮರಿಗೆ ಕೊಟ್ಟರು ಎಂಬುದಾಗಿ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

 ನಾಸಿಕ್‌/ಕಲ್ಯಾಣ್‌ : ಕಾಂಗ್ರೆಸ್‌ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂಬ ತಮ್ಮ ಸರಣಿ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರ ಬಜೆಟ್‌ನಲ್ಲಿ ಶೇ.15ರಷ್ಟು ಪಾಲನ್ನು ಅಲ್ಪಸಂಖ್ಯಾತರಿಗೆ ಮೀಸಲಿಡಲು ಬಯಸಿತ್ತು. 

ಈಗ ಅಧಿಕಾರಕ್ಕೆ ಬಂದರೆ ಆ ಪ್ರಸ್ತಾವಕ್ಕೆ ಮರುಜೀವ ತುಂಬಲು ಅದು ತೀರ್ಮಾನಿಸಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ‘ಬಜೆಟ್ ಅಥವಾ ಉದ್ಯೋಗ ಮತ್ತು ಶಿಕ್ಷಣದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ವಿಭಜಿಸಲು ನಾನು ಅವಕಾಶ ನೀಡುವುದಿಲ್ಲ’ ಎಂದು ಮೋದಿ ಗುಡುಗಿದ್ದಾರೆ.ಜೊತೆಗೆ ಇಂಡಿಯಾ ಮೈತ್ರಿಕೂಟ ಮತ್ತು ಶೆಹಜಾದಾ (ರಾಹುಲ್‌ ಗಾಂಧಿ) ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಕರ್ನಾಟಕವೇ ಪ್ರಯೋಗಶಾಲೆ. ಕರ್ನಾಟಕದಲ್ಲಿ ಒಬಿಸಿ ಕೋಟಾದಲ್ಲಿ ಮುಸ್ಲಿಮರಿಗೂ ರಾತ್ರೋರಾತ್ರಿ ಮೀಸಲು ನೀಡಲಾಯಿತು. ಇದೇ ಯೋಜನೆಯನ್ನು ಅವರು ದೇಶವ್ಯಾಪಿ ವಿಸ್ತರಣೆಗೆ ನಿರ್ಧರಿಸಿದ್ದಾರೆ ಎಂದು ಮೋದಿ ಆರೋಪಿಸಿದರು.

ಇದೇ ವೇಳೆ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಲು ಯತ್ನಿಸುತ್ತಿರುವ ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟದ ಯೋಜನೆಯನ್ನು ತಾವು ಬಯಲಿಗೆಳೆಯುತ್ತಿರುವುದಾಗಿ ಹೇಳಿದ ಮೋದಿ, ನನಗೆ ವೈಯಕ್ತಿಕ ಇಮೇಜ್‌ಗಿಂತ ದೇಶದ ಐಕ್ಯತೆ ಮುಖ್ಯ ಎಂದು ಪ್ರತಿಪಾದಿಸಿದರು.

ಹಿಂದೂ- ಮುಸ್ಲಿಂ ಬಜೆಟ್‌:

ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪಿಂಪಲ್‌ಗಾಂವ್ ಬಸವಂತ್‌ ಮತ್ತು ಕಲ್ಯಾಣ್‌ನಲ್ಲಿ ಬುಧವಾರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಧರ್ಮದ ಆಧಾರದ ಮೇಲೆ ಬಜೆಟ್ ವಿಭಜಿಸುವುದು ಅಪಾಯಕಾರಿ. ಸಂವಿಧಾನ ಮುಖ್ಯ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಉದ್ಯೋಗ ಮತ್ತು ಶಿಕ್ಷಣದಲ್ಲಿ ಧರ್ಮ ಆಧಾರಿತ ಮೀಸಲಾತಿಯನ್ನು ದೃಢವಾಗಿ ವಿರೋಧಿಸಿದ್ದರು’ ಎಂದರು.

‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಟ್ಟು ಬಜೆಟ್‌ನಲ್ಲಿ ಶೇ.15ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಿಡಲು ಯೋಜನೆ ರೂಪಿಸಿತ್ತು. ನಾನು (ಗುಜರಾತ್‌ನ) ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಈ ಪ್ರಸ್ತಾಪವನ್ನು ತಂದಿತ್ತು. ದೇಶವನ್ನು ಮುಸ್ಲಿಂ ಬಜೆಟ್‌ ಮತ್ತು ಹಿಂದೂ ಬಜೆಟ್‌ ಎಂದು ಧರ್ಮದ ಆಧಾರದಲ್ಲಿ ವಿಭಜಿಸಲು ಕಾಂಗ್ರೆಸ್‌ ಬಯಸಿತ್ತು. ಆದರೆ ಬಿಜೆಪಿ ಈ ಕ್ರಮವನ್ನು ಬಲವಾಗಿ ವಿರೋಧಿಸಿತು. ಆದ್ದರಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್ ಈ ಪ್ರಸ್ತಾಪವನ್ನು ಮತ್ತೆ ತರಲು ಬಯಸಿದೆ’ ಎಂದು ಆರೋಪಿಸಿದರು.

‘ಅಂಬೇಡ್ಕರ್‌ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ/ಒಬಿಸಿಗಳ ಮೀಸಲಾತಿ ಹಕ್ಕುಗಳನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡಲು ಬಯಸುತ್ತದೆ. ಆದರೆ ಈ ಮೋದಿ ಸಮಾಜದ ವಂಚಿತ ವರ್ಗಗಳ ಹಕ್ಕುಗಳ ಚೌಕಿದಾರ (ಕಾವಲುಗಾರ). ಅವರ ಹಕ್ಕುಗಳನ್ನು ಕಾಂಗ್ರೆಸ್ ಎಂದಿಗೂ ಕಸಿದುಕೊಳ್ಳಲು ನಾನು ಬಿಡುವುದಿಲ್ಲ’ ಎಂದು ಶಪಥ ಮಾಡಿದರು.

ಹಿಂದು-ಮುಸ್ಲಿಂ ಬಿಟ್ಟು ಮೋದಿಗೆ ಬೇರೆ ಅಜೆಂಡಾ ಇಲ್ಲ: ಕಾಂಗ್ರೆಸ್‌

‘ನಾನು ಎಂದೂ ಹಿಂದು-ಮುಸ್ಲಿಂ ರಾಜಕೀಯ ಮಾಡಿಲ್ಲ. ಯಾವತ್ತು ಹಾಗೆ ಮಾಡುತ್ತೇನೋ ಅದೇ ದಿನ ನಾನು ಸಾರ್ವಜನಿಕ ಜೀವದಲ್ಲಿ ಇರಲು ಅರ್ಹನಲ್ಲ. ಇದು ನನ್ನ ಸಂಕಲ್ಪ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ‘ಅವರಿಗೆ ಹಿಂದು-ಮುಸ್ಲಿಂ ಬಿಟ್ಟರೆ ಬೇರೆ ಅಜೆಂಡಾ ಇಲ್ಲವೇ ಇಲ್ಲ, ಅವರ ಹೇಳಿಕೆ ಕೇವಲ ಕಣ್ಣೊರೆಸುವ ತಂತ್ರ’ ಎಂದು ಕಾಂಗ್ರೆಸ್‌ ಹಾಗೂ ಇತರ ಪ್ರತಿಪಕ್ಷಗಳು ಟೀಕಿಸಿವೆ.‘ಮೋದಿ ಸುಳ್ಳುಗಾರ. ತಾನೆಂದೂ ಹಿಂದೂ-ಮುಸ್ಲಿಂ ರಾಜಕೀಯ ಮಾಡಲ್ಲ ಎಂಬ ಅವರ ಹೇಳಿಕೆ ಅವರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂಬದನ್ನು ತೋರಿಸುತ್ತದೆ’ ಎಂದು ಜೈರಾಂ ರಮೇಶ್‌ ಹೇಳಿದ್ದಾರೆ.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ