ವಾರ್ಸಾ: ಇಂದಿನಿಂದ (ಆ.21ರಿಂದ) ಮೂರು ದಿನಗಳ ಕಾಲ ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಈ ಭೇಟಿಯ ಮೂಲಕ ಹಲವು ದಾಖಲೆಗಳಿಗೆ ಕಾರಣವಾಗುವ ಜೊತೆಗೆ ವಿಶೇಷವೊಂದಕ್ಕೂ ಸಾಕ್ಷಿಯಾಗಲಿದ್ದಾರೆ. ಮೊದಲಿಗೆ ಪೋಲೆಂಡ್‌ಗೆ ತೆರಳಲಿರುವ ಮೋದಿ, ಅಲ್ಲಿಂದ ಉಕ್ರೇನ್‌ಗೆ ತೆರಳಲು ಮತ್ತು ಉಕ್ರೇನ್‌ನಿಂದ ಪೋಲೆಂಡ್ ಮರಳಲು ವಿಶೇಷ ರೈಲು ಬಳಸಲಿದ್ದಾರೆ.
ಹೌದು. ಹಾಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ನಿತ್ಯವೂ ಪರಸ್ಪರರ ವಿರುದ್ಧ ವೈಮಾನಿಕ ದಾಳಿ ನಡೆಯುತ್ತಲೇ ಇದೆ. ಇಂಥ ಹೊತ್ತಿನಲ್ಲಿ ದೇಶವೊಂದರ ಪ್ರಧಾನಿ ಉಕ್ರೇನ್‌ಗೆ ವಿಮಾನದಲ್ಲಿ ಪ್ರಯಾಣ ಕೈಗೊಳ್ಳುವುದು ಅಪಾಯಕರ ಸಂಗತಿ. ಹೀಗಾಗಿಯೇ ಪೋಲೆಂಡ್‌ನಿಂದ ಉಕ್ರೇನ್ ರಾಜಧಾನಿ ಕೀವ್‌ಗೆ ಪ್ರಧಾನಿ ಮೋದಿ ವಿಶೇಷ ‘ಟ್ರೇನ್ ಪೋರ್ಸ್ ಒನ್’ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ.ಹೀಗೆ ಒಂದು ಕಡೆಯ ಸಂಚಾರಕ್ಕೆ 10 ಗಂಟೆಗಳ ಸಮಯ ಬೇಕು. ಅಂದರೆ ಒಟ್ಟಾರೆ 20 ಗಂಟೆಗಳ ಕಾಲ ಮೋದಿ ರೈಲಿನಲ್ಲಿ ಪ್ರಯಾಣ ಮಾಡಬೇಕಿದೆ.
ವಿದೇಶವೊಂದರ ಭೇಟಿ ವೇಳೆ ಸಂಚಾರದ ಕಾರಣಕ್ಕೆಂದೇ ಮೋದಿ ರೈಲು ಹತ್ತುತ್ತಿರುವುದು ಇದೇ ಮೊದಲು. ಈ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ವೇಳೆ ಗಾಂಧೀಜಿ ಪ್ರಯಾಣಿಸಿದ್ದ ಮಾರ್ಗದಲ್ಲಿ ಅದೇ ರೈಲಿನಲ್ಲಿ ಮೋದಿ ಸಂಚಾರ ನಡೆಸಿದ್ದರು.ಸುರಕ್ಷಿತ, ಐಷಾರಾಮಿ:
ಮೊದಲಿಗೆ ಈ ರೈಲನ್ನು ಕ್ರೆಮಿಯಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆಂದು ಸಿದ್ಧಪಡಿಸಲಾಗಿತ್ತು. ಆದರೆ ರಷ್ಯಾ ಕ್ರೆಮಿಯಾ ಆಕ್ರಮಿಸಿದ ಬಳಿಕ ಈ ರೈಲನ್ನು ಉಕ್ರೇನ್‌ಗೆ ಆಗಮಿಸುವ ಗಣ್ಯರ ಸಂಚಾರಕ್ಕೆ ಮೀಸಲಿಡಲಾಗಿದೆ. ಈ ರೈಲು ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳ ಜೊತೆಗೆ ಐಷಾರಾಮಿ ಸೇವೆಗಳನ್ನೂ ಹೊಂದಿದೆ.ಕೆಲ ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್, ಜರ್ಮನ್ ಚಾನ್ಸಲರ್ ಒಲಾಫ್ ಸ್ಕೋಲ್ಜ್ ಸೇರಿದಂತೆ 200ಕ್ಕೂ ಹೆಚ್ಚು ವಿದೇಶಿ ಗಣ್ಯರು ಉಕ್ರೇನ್‌ಗೆ ಭೇಟಿ ನೀಡಲು ಇದೇ ರೈಲಿನ ಸೇವೆ ಬಳಸಿದ್ದರು.
ಇಂದಿನಿಂದ ಮೋದಿ ಪೋಲೆಂಡ್, ಉಕ್ರೇನ್ ಪ್ರವಾಸನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆ 21ರಿಂದ ಮೂರು ದಿನಗಳ ಕಾಲ ಪೋಲೆಂಡ್ ಹಾಗೂ ಉಕ್ರೇನ್ ಪ್ರವಾಸ ಕೈಗಳ್ಳಲಿದ್ದಾರೆ. ಆ.21ರಂದು ಪೋಲೆಂಡ್‌ಗೆ ಭೇಟಿ ನೀಡಲಿರುವ ಮೋದಿ ಆ.23 ಯುದ್ಧಪೀಡಿತ ಉಕ್ರೇನ್ ದೇಶಕ್ಕೆ ಭೇಟಿ ನೀಡಲಿದ್ದಾರೆ. 1979ರಲ್ಲಿ ಮೊರಾರ್ಜಿ ದೇಸಾಯಿ ಪೋಲೆಂಡ್‌ಗೆ ಭೇಟಿ ನೀಡಿದ್ದರು. ಆ ಬಳಿಕ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಇನ್ನು 1991ರಲ್ಲಿ ಉಕ್ರೇನ್ ಸ್ವತಂತ್ರ ದೇಶವಾಗಿ ಹೊರಹೊಮ್ಮಿದ ಬಳಿಕ ಅಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹಿರಿಮೆಗೂ ಮೋದಿ ಪಾತ್ರರಾಗಲಿದ್ದಾರೆ.ಎರಡೂ ದೇಶಗಳ ಆಹ್ವಾನದ ಮೇರೆಗೆ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಅಲ್ಲಿನ ಪ್ರಮುಖ ನಾಯಕರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಪ್ರಯತ್ನಿಸಲಿದ್ದಾರೆ.