ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಜೂ.13-18ರವರೆಗೆ ಫ್ರಾನ್ಸ್ ಮತ್ತು ಸ್ಲೊವೋಕಿಯಾ ದೇಶಗಳಿಗೆ 6 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಜಿ7, ವಿವಾಟೆಕ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಜೂ.13, 14ರಂದು ಫ್ರಾನ್ಸ್‌ನ ನೈಸ್‌ಗೆ ಭೇಟಿ ನೀಡಲಿದ್ದಾರೆ. ಆ ಬಳಿಕ ಜೂ.14-16ಕ್ಕೆ ಸ್ಲೊವೋಕಿಯಾ, ನಂತರ 16-18ಕ್ಕೆ ಫ್ರಾನ್ಸ್‌ನ ಎವಿಯನ್ ಮತ್ತು ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ. ಫ್ರಾನ್ಸ್ ಭೇಟಿ ವೇಳೆ ಮೋದಿ, ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್ ಅವರನ್ನ ಭೇಟಿಯಾಗಲಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಜೂ.14ಕ್ಕೆ ಸ್ಲೊವೋಕಿಯಾ ತೆರಳಲಿರುವ ಮೋದಿ ಅಲ್ಲಿನ ಪ್ರಧಾನಿ ರಾಬರ್ಟ್ ಫಿಕೊ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದು 1993ರ ಬಳಿಕ ಭಾರತದ ಪ್ರಧಾನಿಯೊಬ್ಬರು ನೀಡುತ್ತಿರುವ ಮೊದಲ ಭೇಟಿ ಎನಿಸಿಕೊಳ್ಳಲಿದೆ. ಆ ಬಳಿಕ ಜೂ.16, 17 ರಂದು ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೊನೆಯ ದಿನ ನವೋದ್ಯಮಕ್ಕೆ ಸಂಬಂಧಪಟ್ಟ ವಿವಾಟೆಕ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಭಾರತವು ಫ್ರಾನ್ಸ್‌ನಿಂದ 3.25 ಲಕ್ಷ ಕೋಟಿ ರು. ವೆಚ್ಚದಲ್ಲಿ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿತ್ತು. ಇದೀಗ ಮೋದಿ ಭೇಟಿ ವೇಳೆ ಉಭಯ ದೇಶಗಳ ನಡುವೆ ಅದಕ್ಕೆ ಸಂಬಂಧಪಟ್ಟ ಒಪ್ಪಂದ ನಡೆಯುವ ಸಾಧ್ಯತೆಯಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ದೆಹಲಿಯಲ್ಲಿ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವರ್ಷದ ಸಭೆಯು ‘ಸಮಗ್ರ ಮಾನವ ಅಭಿವೃದ್ಧಿ’ ಮೇಲೆ ಕೇಂದ್ರೀಕೃತವಾಗಿರುತ್ತದೆ. ಸಭೆಯಲ್ಲಿ ಅಭಿವೃದ್ಧಿ ವಿಚಾರ, ನೀತಿ ನಿರೂಪಣೆ, ಮೂಲಸೌಕರ್ಯ ಅಭಿವೃದ್ಧಿ, ಸಹಕಾರ ಒಕ್ಕೂಟ ವ್ಯವಸ್ಥೆ, ಅನುದಾನ, ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದೆ. ಜತೆಗೆ, ರಾಜ್ಯಗಳ ಅಭಿವೃದ್ಧಿ ಯೋಜನೆಗಳು, ಅನುದಾನದ ಅಗತ್ಯತೆ, ಕೇಂದ್ರದ ನೆರವಿನ ಬಗ್ಗೆ ರಾಜ್ಯಗಳು ಬೇಡಿಕೆ ಇಡುತ್ತವೆ.