ಕೊಲಂಬೋ: ಶ್ರೀಲಂಕಾದ ಆದಾಯದ ಪ್ರಮುಖ ಮೂಲವಾಗಿದ್ದ ಪ್ರವಾಸೋದ್ಯಮದ ಅಧೋಗತಿಗೆ ಕಾರಣವಾಗಿದ್ದ, 279 ಜನರನ್ನು ಬಲಿ ಪಡೆದ 2019ರ ಉಗ್ರದಾಳಿಯನ್ನು ಮಾಡಿಸಿದ್ದು ಮಾಜಿ ಗುಪ್ತಚರ ಮುಖ್ಯಸ್ಥ ಜ.ಮೇ. ಸುರೇಶ್ ಸಲ್ಲಾಯ್ ಎಂಬ ಸ್ಫೋಟಕ ಮಾಹಿತಿಯನ್ನು ಲಂಕಾದ ಸಾರ್ವಜನಿಕ ಭದ್ರತಾ ಮಂತ್ರಿ ಆನಂದ ವಿಜೆಪಾಲ ಸಂಸತ್ತಿಗೆ ನೀಡಿದ್ದಾರೆ.
ವಿಧ್ವಂಸಕ್ಕೆ ಕುಮ್ಮಕ್ಕು ನೀಡಿದ ಹಾಗೂ ಸಹಕರಿಸಿದ ಆರೋಪದಲ್ಲಿ ಫೆಬ್ರವರಿಯಲ್ಲಿ ಸಲ್ಲಾಯ್‌ನನ್ನು ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ, ಶ್ರೀಲಂಕಾದ ಏಕೈಕ ಉಗ್ರದಾಳಿ ಎನಿಸಿಕೊಂಡಿರುವ ಇದರಲ್ಲಿ ಸಲ್ಲಾಯ್ ಪಾತ್ರದ ಬಗ್ಗೆ ವಿಜೆಪಾಲ ಮೊದಲ ಬಾರಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಆದರೆ ಅತ್ತ ಸಲ್ಲಾಯ್, ತಮ್ಮ ಮೇಲಿನ ಆರೋಪಗಳನ್ನೆಲ್ಲ ಅಲ್ಲಗಳೆದಿದ್ದಾರೆ.
2019ರ ಏ.21ರ ಈಸ್ಟರ್ ಸಂಡೆಯಂದು ಕೊಲಂಬೋದ 3 ಹೊಟೆಲ್‌ಗಳು ಹಾಗೂ 3 ಚರ್ಚ್‌ಗಳ ಮೇಲೆ ಆತ್ಮಾಹುತಿ ದಾಳಿಗಳಾಗಿದ್ದವು. ಇದಕ್ಕೂ 3 ವಾರಗಳ ಮೊದಲಷ್ಟೇ ಸಲ್ಲಾಯ್ ಕೆಲ ಮುಸಲ್ಮಾನ ಯುವಕರನ್ನು ಭೇಟಿಯಾಗಿ, ದಾಳಿ ನಡೆಯಬೇಕಿದ್ದ ಜಾಗಗಳ ಬಗ್ಗೆ ಮಾಹಿತಿ ಪಡೆದಿದ್ದರು. ಬಳಿಕ ಇಸ್ಲಾಮಿಕ್ ತೀವ್ರವಾದಿಗಳಿಗೆ ಕುಮ್ಮಕ್ಕು ನೀಡಿ ಆತ್ಮಹತ್ಯಾ ಬಾಂಬರ್‌ಗಳ ಕೈಲಿ ದಾಳಿ ಮಾಡಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಹೀಗೆ ಮಾಡುವ ಹಿಂದೆ ಸಲ್ಲಾಯ್‌ನ ಉದ್ದೇಶ, ಸೇನಾ ಗುಪ್ತಚರ ಮುಖ್ಯಸ್ಥನಾಗಿದ್ದ ತನ್ನನ್ನು 2019ರಲ್ಲಿ ದೇಶದ ಗುಪ್ತಚರ ಇಲಾಖೆಯ ಮುಖ್ಯಸ್ಥನನ್ನಾಗಿ ನೇಮಿಸಿದ ಅಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸೆ ಗೆಲುವನ್ನು ಮುಂಬರುವ ಚುನಾವಣೆಯಲ್ಲಿ ಖಚಿತಪಡಿಸುವುದಾಗಿತ್ತು ಎನ್ನಲಾಗಿದೆ. ಈ ವಾದಕ್ಕೆ ಪುಷ್ಠಿ ನೀಡುವಂತೆ, ದಾಳಿ ನಡೆದ 2 ದಿನಗಳ ಬಳಿಕ ಇಸ್ಲಾಮಿಕ್ ಉಗ್ರವಾದವನ್ನು ತೊಡೆದುಹಾಕುವ ಭರವಸೆಯೊಂದಿಗೆ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ರಾಜಪಕ್ಸ, ಭರ್ಜರಿ ಗೆಲುವು ದಾಖಲಿಸಿ ಮತ್ತೆ ಅಧಿಕಾರ ಹಿಡಿದಿದ್ದರು.
ಸದ್ಯ ಈ ಉಗ್ರದಾಳಿಯಲ್ಲಿ ರಾಜಪಕ್ಸರನ್ನು ಆರೋಪಿಯೆಂದು ಹೆಸರಿಸಿಲ್ಲವಾದರೂ ಅವರ ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಈಗಾಗಲೇ ದೇಶ ಬಿಟ್ಟು ಹೋಗದಂತೆ ಕೋರ್ಟ್ ಆದೇಶಿಸಿದೆ.