ಹಡಗು ಬಂದರೆ ತೆರೆದುಕೊಳ್ಳುವ ರಾಮೇಶ್ವರದ ಪಾಂಬನ್‌ ರೈಲು ಸೇತುವೆಗೆ ಮೋದಿ ಚಾಲನೆ

KannadaprabhaNewsNetwork | Updated : Apr 07 2025, 05:15 AM IST

ಸಾರಾಂಶ

ರಾಮೇಶ್ವರಂ ದ್ವೀಪ ಮತ್ತು ಮುಖ್ಯ ಭೂಭಾಗದ ನಡುವೆ ರೈಲು ಸಂಪರ್ಕವನ್ನು ಒದಗಿಸುವ ಪಾಂಬನ್ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು ಮತ್ತು ಹೊಸ ರಾಮೇಶ್ವರಂ-ತಾಂಬರಂ (ಚೆನ್ನೈ) ರೈಲು ಸೇವೆಗೆ ಹಸಿರು ನಿಶಾನೆ ತೋರಿದರು.

 ರಾಮೇಶ್ವರಂ (ತಮಿಳುನಾಡು): ರಾಮೇಶ್ವರಂ ದ್ವೀಪ ಮತ್ತು ಮುಖ್ಯ ಭೂಭಾಗದ ನಡುವೆ ರೈಲು ಸಂಪರ್ಕವನ್ನು ಒದಗಿಸುವ ಪಾಂಬನ್ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು ಮತ್ತು ಹೊಸ ರಾಮೇಶ್ವರಂ-ತಾಂಬರಂ (ಚೆನ್ನೈ) ರೈಲು ಸೇವೆಗೆ ಹಸಿರು ನಿಶಾನೆ ತೋರಿದರು.

ಇದೇ ವೇಳೆ, ಸೇತುವೆಯ ಕೆಳಗೆ ಹಾದುಹೋದ ಕರಾವಳಿ ರಕ್ಷಣಾ ಪಡೆ ಹಡಗೊಂದಕ್ಕೂ ಪ್ರಧಾನಿ ಹಸಿರು ನಿಶಾನೆ ತೋರಿದರು.

2.08 ಕಿ.ಮೀ. ದೂರದ ಈ ಬ್ರಿಡ್ಜ್‌ ಇದು ಭಾರತದ ಮೊದಲ ವರ್ಟಿಕಲ್‌ ರೈಲ್ವೆ ಬ್ರಿಡ್ಜ್‌ ಆಗಿದೆ. ಸಮುದ್ರಮಾರ್ಗದಲ್ಲಿ ಹಡಗುಗಳ ಸಂಚಾರ ವೇಳೆ ಸೇತುವೆಯು ಮೇಲಕ್ಕೆತ್ತಲ್ಪಟ್ಟು, ಬಳಿಕ ಅದು ಸ್ವಸ್ಥಾನಕ್ಕೆ ಮರಳಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆ ಇದೆ. ಇದರಿಂದಾಗಿ 2022ರಿಂದ ಹಳೇ ಸೇತುವೆ ಶಿಥಿಲವಾಗಿದ್ದ ಕಾರಣ ರಾಮೇಶ್ವರಕ್ಕೆ ಸ್ಥಗಿತವಾಗಿದ್ದ ರೈಲು ಸಂಚಾರ ಪುನಾರಂಭ ಆದಂತಾಗಿದೆ.

ಇದೇ ವೇಳೆ, 8300 ಕೋಟಿ ರು. ಮೌಲ್ಯದ ತಮಿಳುನಾಡಿನ ಇತರ ರೈಲು-ರಸ್ತೆ ಯೋಜನೆಗಳಿಗೂ ಮೋದಿ ಚಾಲನೆ ನೀಡಿದರು.

ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ:

ಬಳಿಕ ಮಾತನಾಡಿದ ಮೋದಿ, ‘ಪಾಂಬನ್ ಸೇತುವೆ ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಒಟ್ಟಿಗೆ ತರುತ್ತದೆ ಮತ್ತು ಪ್ರಯಾಣಿಕರು ಮತ್ತು ಯಾತ್ರಾರ್ಥಿಗಳಿಗೆ ಸಂಪರ್ಕವನ್ನು ಸುಗಮಗೊಳಿಸುತ್ತದೆ. ಇದು ಭಾರತದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು’ ಎಂದು ಹರ್ಷಿಸಿದರು.

‘ಈ ಸೇತುವೆ ಭಾರತದ ಮೊದಲ ವರ್ಟಿಕಲ್‌ ಲಿಫ್ಟ್ ಸಮುದ್ರ ಸೇತುವೆಯಾಗಿದೆ. ದೊಡ್ಡ ಹಡಗುಗಳು ಇದರ ಮೂಲಕ ಹಾದುಹೋಗಲು ಸಾಧ್ಯವಾಗುತ್ತದೆ. ರೈಲುಗಳು ಸಹ ಇದರ ಮೂಲಕ ಹಾದುಹೋಗಲು ಸಾಧ್ಯವಾಗುತ್ತದೆ’ ಎಂದರು.‘ಇಂದು ರಾಮನಾಥ ಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. 

ಈ ವಿಶೇಷ ದಿನದಂದು, 8300 ಕೋಟಿ ರು. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಹಸ್ತಾಂತರಿಸಲು ನನಗೆ ಪುಣ್ಯ ಸಿಕ್ಕಿದೆ. ಈ ರೈಲು ಮತ್ತು ರಸ್ತೆ ಯೋಜನೆಗಳು ತಮಿಳುನಾಡಿನಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತವೆ’ ಎಂದು ಹೇಳಿದರು.‘ಇದು ಭಾರತ ರತ್ನ ಡಾ. ಕಲಾಂ ಅವರ ನಾಡು. ಅವರ ಜೀವನವು ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಪರಸ್ಪರ ಪೂರಕವಾಗಿತ್ತು. 

ಅದೇ ರೀತಿ, ರಾಮೇಶ್ವರಂಗೆ ಹೋಗುವ ಈ ಪಾಂಬನ್ ಸೇತುವೆ ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಒಟ್ಟಿಗೆ ತರುತ್ತದೆ’ ಎಂದು ಬಣ್ಣಿಸಿದರು.ಸೇತುವೆ ನಿರ್ಮಿಸಿದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, 1000 ವರ್ಷಗಳಷ್ಟು ಹಳೆಯದಾದ ಸ್ಥಳವನ್ನು 21 ನೇ ಶತಮಾನದ ಎಂಜಿನಿಯರಿಂಗ್ ಅದ್ಭುತದ ಮೂಲಕ ಸಂಪರ್ಕಿಸಲಾಗುತ್ತಿದೆ. ‘ಪಾಂಬನ್ ಸೇತುವೆಯ ನಿರ್ಮಾಣವು ಜನರ ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸುತ್ತದೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉದ್ಯೋಗಗಳು ಮತ್ತು ಅವಕಾಶಗಳನ್ನು ಸೃಷ್ಟಿಸುತ್ತದೆ’ ಎಂದು ಪ್ರಧಾನಿ ಹೇಳಿದರು.

ರಾಮೇಶ್ವರಂ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಮನವಮಿ ಪ್ರಯುಕ್ತ ತಮಿಳುನಾಡಿನ ರಾಮೇಶ್ವರಂನ ಪ್ರಸಿದ್ಧ ರಾಮನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಕಳೆದ ವರ್ಷ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಪೂರ್ವದಲ್ಲಿ ಮೋದಿ ರಾಮನಾಥ ದೇಗುಲಕ್ಕೆ ಭೇಟಿ ದೇವರ ಆಶೀರ್ವಾದ ಪಡೆದಿದ್ದರು. ಅದಾದ ವರ್ಷದ ಬಳಿಕ ಮತ್ತೆ ಭೇಟಿ ನೀಡಿದ್ದಾರೆ.

ಬಿಳಿ ಪಂಚೆ, ಅಂಗಿ ಮತ್ತು ಅಂಗವಸ್ತ್ರವನ್ನು ತೊಟ್ಟು ಸಾಂಪ್ರದಾಯಿಕ ಪೋಷಾಕಿನಲ್ಲಿ ಬಂದ ಪ್ರಧಾನಿಯವರನ್ನು ದೇವಸ್ಥಾನದ ಅರ್ಚಕರು ಧಾರ್ಮಿಕ ರೀತ್ಯಾ ಸ್ವಾಗತಿಸಿದರು. ಆ ಬಳಿಕ ಪ್ರಧಾನಿ ದೇವರನ್ನು ದರ್ಶಿಸಿ ಪ್ರಾರ್ಥನೆ ಸಲ್ಲಿಸಿದರು.ತಮಿಳುನಾಡು ರಾಜ್ಯಪಾಲ ಆರ್.ಎನ್‌. ರವಿ, ಕೇಂದ್ರ ಸಚಿವ ಎಲ್. ಮುರುಗನ್ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಉಪಸ್ಥಿತರಿದ್ದರು.

Share this article