ನವದೆಹಲಿ: ಭಾರತದ ಸರ್ಕಾರಿ ಕಚೇರಿಗಳು, ಸೇನಾ ಕಚೇರಿಗಳನ್ನು ಗುರಿಯಾಗಿಸಿ ಸದಾ ದಾಳಿ ನಡೆಸುವ ಚೀನಾ ಸರ್ಕಾರದ ಬೆಂಬಲಿತ ಹ್ಯಾಕರ್‌ಗಳು ಇದೀಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮತ್ತು ಖಾಸಗಿ ವಲಯದ ರಿಲಯನ್ಸ್, ಏರ್ ಇಂಡಿಯಾ ಸಂಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ಕುರಿತು ಇದುವರೆಗೆ ಪ್ರಧಾನಿ ಕಚೇರಿಯಾಗಲೀ, ಖಾಸಗಿ ವಲಯದ ಕಂಪನಿಗಳಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹ್ಯಾಕ್ ಮಾಡಲಾದ ಮಾಹಿತಿ ಸೋರಿಕೆಯಾಗಿ ಆನ್‌ಲೈನ್ ಮುಕ್ತ ವೇದಿಕೆಯೊಂದರಲ್ಲಿ ಬಿಡುಗಡೆಯಾಗಿದೆ. ಈ ಕುರಿತ ಮಾಹಿತಿ ತನಗೆ ಲಭ್ಯವಾಗಿದೆ ಎಂದು ಆಂಗ್ಲ ವೆಬ್‌ಸೈಟೊಂದು ವರದಿ ಮಾಡಿದೆ.ಜೊತೆಗೆ ಹೀಗೆ ರಹಸ್ಯ ಮಾಹಿತಿ ಸೋರಿಕೆಯಾದದ್ದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ ಎನ್ನಲಾಗಿದೆ.ಹ್ಯಾಕರ್ ದಾಳಿ:ಚೀನಾ ಸಾರ್ವಜನಿಕ ಭದ್ರತಾ ಸಚಿವಾಲಯವು ಐ-ಸೂನ್ ಎಂಬ ಎಂಬ ಸೈಬರ್ ಸೆಕ್ಯುರಿಟಿ ಕಂಪನಿಯ ಸೇವೆಯನ್ನು ಗುತ್ತಿಗೆ ಪಡೆದುಕೊಂಡಿದೆ. ಐ-ಸೂನ್ ತಂತ್ರಜ್ಞರು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ದತ್ತಾಂಶಗಳನ್ನು ಹ್ಯಾಕ್ ಮಾಡಿ ಚೀನಾ ಸರ್ಕಾರಕ್ಕೆ ನೀಡಿದ್ದಾರೆ ಎನ್ನಲಾಗಿದೆ.ಆದರೆ ಹೀಗೆ ಹ್ಯಾಕ್ ಮಾಡಲಾದ ಭಾರೀ ಪ್ರಮಾಣದ ಮಾಹಿತಿಗಳನ್ನು ಇದೀಗ ಗಿಟ್ ಹಬ್ ಎಂಬ ‘ಡೆವಲಪರ್ ಪ್ಲಾಟ್‌ಫಾರಂ’ನಲ್ಲಿ ಅನಾಮಧೇಯ ಹ್ಯಾಕರ್‌ಗಳು ಹ್ಯಾಕ್ ಮಾಡಿ ಸೋರಿಕೆ ಮಾಡಿದ್ದಾರೆ.
ಇದು ಚೀನಾ ಸರ್ಕಾರವನ್ನೇ ಬೆಚ್ಚಿ ಬೀಳಿಸಿದೆ. ಹೀಗಾಗಿ ಇವನ್ನು ಸೋರಿಕೆ ಮಾಡಿದವರು ಯಾರು ಎಂದು ಚೀನಾ ಪೊಲೀಸರು ಹಾಗೂ ಐ-ಸೂನ್ ತನಿಖೆ ಆರಂಭಿಸಿವೆ.ಭಾರತದ ಯಾವ ದತ್ತಾಂಶ ಸೋರಿಕೆ?:ಪಿಎಂಒ (ಪ್ರಧಾನಿ ಕಚೇರಿ), ಹಣಕಾಸು ಸಚಿವಾಲಯ, ವಿದೇಶಾಂಗ ಸಚಿವಾಲಯ, ಆಂತರಿಕ ಸಚಿವಾಲಯ (ಬಹುಶಃ ಗೃಹ ಸಚಿವಾಲಯ)ದ ಮಾಹಿತಿಗಳು ಇದರಲ್ಲಿವೆ. 2021ರ ಮಾಹಿತಿಗಳು ಇವಾಗಿವೆ. ಹೀಗಾಗಿ ಭಾರತ-ಚೀನಾ ನಡುವಿನ ಗಲ್ವಾನ್ ಸಂಘರ್ಷದ ಅವಧಿಯ ದತ್ತಾಂಶ ಇವಾಗಿರಬಹುದು ಎಂದು ಹೇಳಲಾಗಿದೆ. ರಿಲಯನ್ಸ್ ಹಾಗೂ ಏರ್ ಇಂಡಿಯಾ ದತ್ತಾಂಶಗಳೂ ಇವೆ.ವಿದೇಶಗಳ ದತ್ತಾಂಶವೂ ಸೋರಿಕೆ:ಪಾಕಿಸ್ತಾನ, ನೇಪಾಳ, ಮ್ಯಾನ್ಮಾರ್, ಮಂಗೋಲಿಯಾ, ಮಲೇಷ್ಯಾ, ಅಫ್ಘಾನಿಸ್ತಾನ, ಫ್ರಾನ್ಸ್, ಥಾಯ್ಲೆಂಡ್, ಕಜಕಿಸ್ತಾನ, ಟರ್ಕಿ, ಕಾಂಬೋಡಿಯಾ ಹಾಗೂ ಫಿಲಿಪ್ಪೀನ್ಸ್ ದತ್ತಾಂಶಗಳೂ ಸೋರಿಕೆ ಪಟ್ಟಿಯಲ್ಲಿವೆ.
ಏನೇನು ಲೀಕ್?ಪ್ರಧಾನಿ ಕಚೇರಿ, ವಿತ್ತ- ವಿದೇಶಾಂಗ- ಗೃಹ ಸಚಿವಾಲಯದ ಮಾಹಿತಿಗಳು ಸೋರಿಕೆ. 2021ರ ಮಾಹಿತಿಗಳು ಇವು. ಅದೇ ಸಮಯಕ್ಕೆ ಭಾರತ- ಚೀನಾ ನಡುವೆ ಗಲ್ವಾನ್ ಸಂಘರ್ಷ ನಡೆಯುತ್ತಿತ್ತು. ಆ ಮಾಹಿತಿಯನ್ನೇ ಕದ್ದಿರುವ ಗುಮಾನಿ. ಇದರ ಜತೆಗೆ ರಿಲಯನ್ಸ್, ಏರ್ ಇಂಡಿಯಾ ಮಾಹಿತಿಯೂ ಹ್ಯಾಕ್.