ಅಪ್‌ಲೋಡ್ ಮಾಡಿದ ಫೋಟೋ ಎಐ ತರಬೇತಿಗೆ ಬಳಕೆ
ನವದೆಹಲಿ: ತಮ್ಮದೊಂದು ಫೋಟೋ ಕೊಟ್ಟರೆ ಅದಕ್ಕೆ ಚಂದದ ಸೀರೆ ಉಡಿಸಿ, ಆಭರಣ ತೊಡಿಸಿ, ಹೂ ಮುಡಿಸಿ ಸಿಂಗರಿಸುವ ಜಿಮಿನಿ ಎಐ ಅನ್ನು ಬಳಸದ ಸ್ತ್ರೀಯರೇ ಇಲ್ಲ ಎಂಬಂತಾಗಿರುವ ಹೊತ್ತಿನಲ್ಲಿ, ಹಾಗೆ ಮಾಡುವುದು ಅಪಾಯಕಾರಿಯಾದೀತು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ತಾವು ರೆಟ್ರೋ ಲುಕ್‌ನಲ್ಲಿ ನೋಡಬಯಸುವ ಹುಡುಗರಿಗೂ ಇದು ಅನ್ವಯಿಸಲಿದೆ.
ಜಿಮಿನಿಯಲ್ಲಿ ಫೋಟೋ ಸೃಷ್ಟಿಸುವ ಬಗ್ಗೆ ಎಚ್ಚರಿಕೆ ನೀಡಿರುವ ಸೈಬರ್ ಅಧಿಕಾರಿಗಳು, ‘ಜೆಮಿನಿ ಆ್ಯಪ್‌ನ ನಿಯಮಗಳ ಪ್ರಕಾರ, ಅಪ್‌ಲೋಡ್ ಮಾಡಲಾಗುವ ಎಲ್ಲಾ ಫೋಟೋಗಳನ್ನು ಅದು ಎಐ ತರಬೇತಿಗೆ ಬಳಸಿಕೊಳ್ಳಲಿದೆ. ಇದು ಗೌಪ್ಯತೆಗೆ ಧಕ್ಕೆ, ಗುರುತು ಕಳವು, ಸೈಬರ್ ವಂಚನೆಗಳಿಗೆ ಎಡೆ ಮಾಡಿಕೊಡಲಿದೆ’ ಎಂದು ಹೇಳಿದ್ದಾರೆ.‘ನಾವು ಖುಷಿಗೆಂದು ಫೋಟೋ ಅಪ್‌ಲೋಡ್ ಮಾಡುತ್ತಿದ್ದರೆ, ಜೆಮಿನಿ ಆ ಬಯೋಮೆಟ್ರಿಕ್ ಡೇಟಾ ಬಳಸಿಕೊಂಡು ಮುಖಚರ್ಯೆಗಳನ್ನು ಅಧ್ಯಯನ ಮಾಡುತ್ತಿರುತ್ತದೆ. ಇದನ್ನು ಬಳಸಿಕೊಂಡು ವಂಚನೆ ಅಥವಾ ಅಪರಾಧಗಳೂ ಆಗುವ ಸಾಧ್ಯತೆ ಹೆಚ್ಚು’ ಎಂದು ಜಲಂಧರ್‌ನ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಒಂದು ಫೋಟೋ ಹಾಕಿ ನಿರ್ದೇಶನ ಕೊಟ್ಟರೆ, ಜೆಮಿನಿ ಅದಕ್ಕನುಸಾರವಾಗಿ ಚಿತ್ರವನ್ನು ಸೃಷ್ಟಿಸಿ ಕೊಡುತ್ತದೆ. ಇದನ್ನು ಬಳಸಿಕೊಂಡು ಹುಡುಗಿಯರು ಸೀರೆ ಉಟ್ಟು ಸಂಭ್ರಮಿಸುತ್ತಿದ್ದರೆ, ಹುಡುಗರು ಹಿಂದಿನ ಕಾಲದ ಹೀರೋಗಳಂತೆ ತಮ್ಮನ್ನು ತಾವು ಕಂಡು ಖುಷಿಪಡುತ್ತಿದ್ದಾರೆ.