ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಆರೋಪ : ಬಾಂಗ್ಲಾ ಬ್ಲೂಫಿಲಂ ಥಾರೆ ರಿಯಾ ಬಾರ್ಡೆ ಬಂಧನ

KannadaprabhaNewsNetwork | Updated : Sep 28 2024, 05:15 AM IST

ಸಾರಾಂಶ

ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶದ ಪೋರ್ನ್‌ ತಾರೆ ರಿಯಾ ಬಾರ್ಡೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಉಲ್ಲಾಸ್‌ನಗರದಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ: ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಆರೋಪದ ಮೇಲೆ ಬಾಂಗ್ಲಾದೇಶದ ಪೋರ್ನ್‌ ತಾರೆ ರಿಯಾ ಬಾರ್ಡೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ರಿಯಾ ಬಾರ್ಡೆ ಪ್ರಮುಖವಾಗಿ ನಕಲಿ ದಾಖಲೆಗಳನ್ನು ತೋರಿಸಿ ತನ್ನ ಕುಟುಂಬದೊಂದಿಗೆ ಇಲ್ಲಿನ ಉಲ್ಲಾಸ್‌ನಗರದಲ್ಲಿ ನೆಲೆಸಿದ್ದರು. ಸದ್ಯಕ್ಕೆ ಅವರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ ಜತೆ ತಂಗಿದ್ದ ತನ್ನ ಕುಟುಂಬಸ್ಥರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ರಿಯಾ ಬಾರ್ಡೆ ತಾಯಿ ಮೂಲತಃ ಬಾಂಗ್ಲಾದೇಶದವರು, ಮಹಾರಾಷ್ಟ್ರದ ಅಮರಾವತಿಗೆ  ಸೇರಿದ ಅರವಿಂದ ಬಾರ್ಡೆ ಅವರನ್ನು ವಿವಾಹವಾಗಿದ್ದರು. ಅಂದಿನಿಂದ ನಕಲಿ ದಾಖಲೆ ತೋರಿಸಿ ಇಲ್ಲಿಯೇ ವಾಸವಿದ್ದರು.

ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಿಯಾ ಬಾರ್ಡೆ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.

==

ಕಾಂಪ್ಲಾನ್ ವಿರುದ್ಧದ ಪೋಸ್ಟ್‌ ಅಳಿಸಲು ಹೈಕೋರ್ಟ್‌ ಸೂಚನೆ

ನವದೆಹಲಿ: ಪೌಷ್ಟಿಕಾಂಶ ಪಾನೀಯ ಕಾಂಪ್ಲಾನ್‌ನಲ್ಲಿ ಅಧಿಕ ಸಕ್ಕರೆ ಪ್ರಮಾಣದ ಅಂಶವಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಅಪ್ಲೋಡ್‌ ಮಾಡಿದ್ದ ಇನ್‌ಫ್ಲುಯೆನ್ಸರ್‌ಗೆ ಪೋಸ್ಟ್‌ ಡಿಲೀಟ್‌ ಮಾಡಲು ದೆಹಲಿ ಹೈಕೋರ್ಟ್‌ ಆದೇಶಿಸಿದೆ. ಪ್ರಶಾಂತ್‌ ದೇಸಾಯಿ ಎನ್ನುವ ಇನ್‌ಫ್ಲುಯೆನ್ಸರ್‌, ‘ಕಾಂಪ್ಲಾನ್‌ನಲ್ಲಿ ಅಧಿಕ ಸಕ್ಕರೆ ಅಂಶವಿದೆ. ಮಕ್ಕಳು ನಿತ್ಯ ಅಧಿಕ ಪ್ರಮಾಣದ ಸಕ್ಕರೆ ಸೇವಿಸುತ್ತಿದ್ದಾರೆ’ ಎಂದು ವಿಡಿಯೋ ಮಾಡಿ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದ. ಇದರ ವಿರುದ್ಧ ಕಂಪನಿ ಕೋರ್ಟ್‌ ಮೊರೆಹೋಗಿತ್ತು.ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್‌ ‘ಈ ಬಗ್ಗೆ ಮಾತನಾಡಲು ದೇಸಾಯಿ ವೈದ್ಯರು, ಆರೋಗ್ಯ ತಜ್ಞ, ಪೌಷ್ಠಿಕಾಂಶ ತಜ್ಞರಲ್ಲ’ ಎಂದಿದೆ ಹಾಗೂ ಉತ್ಪನ್ನಗಳ ಅವಹೇಳನ ಮಾಡುವ ಯಾವುದೇ ವಿಡಿಯೋಗಳನ್ನು ಪ್ರಕಟಿಸದಂತೆ ಸೂಚಿಸಿದೆ. ಅಲ್ಲದೆ, 2 ವಾರಗಳೊಳಗೆ ಎಲ್ಲ ಪೋಸ್ಟ್‌ಗಳನ್ನು ಅಳಿಸಿ ಹಾಕಬೇಕೆಂದು ಆದೇಶಿಸಿದೆ.

==

ಎಟಿಎಂನಲ್ಲಿ ₹70 ಲಕ್ಷ ದರೋಡೆ: ಪೊಲೀಸರ ಗುಂಡಿಗೆ ಡಕಾಯಿತ ಬಲಿ

ತ್ರಿಶೂರ್‌/ ನಮಕ್ಕಲ್‌( ತಮಿಳುನಾಡು): ಖದೀಮರ ಗುಂಪೊಂದು ಶುಕ್ರವಾರ ಬೆಳಿಗ್ಗೆ ಕೇರಳದಲ್ಲಿ ಮೂರು ಎಟಿಎಂಗಳಿಗೆ ನುಗ್ಗಿ 70 ಲಕ್ಷ ರು. ದರೋಡೆ ಮಾಡಿದೆ. ಬಳಿಕ ಪರಾರಿಯಾದ ಡಕಾಯಿತರ ಪೈಕಿ ಒಬ್ಬ, ತಮಿಳುನಾಡಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ,ಡಕಾಯಿತರು ಗ್ಯಾಸ್‌ ಕಟ್ಟರ್‌ ಬಳಸಿ ಮಾಪ್ರಾಣಂ, ತ್ರಿಶೂರ್‌ ಪೂರ್ವ, ಕೊಲಾಜಿ ಪ್ರದೇಶಗಳಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಟಿಎಂ ಒಡೆದು 70 ಲಕ್ಷ ರು. ನಗದು ಕದ್ದೊಯ್ಯದ್ದಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಆರೋಪಿಗಳ ಸುಳಿವು ಸಿಕ್ಕಿದ್ದು, ಕಂಟೈನರ್ ವಾಹನವನ್ನು ಪೊಲೀಸರು ಹಿಂಬಾಲಿಸಿ ವಾಹನ ನಿಲ್ಲಿಸಲು ಸೂಚಿಸಿದ್ದರೂ ಆರೋಪಿಗಳು ನಿಲ್ಲಿಸಿರಲಿಲ್ಲ. ಹೀಗಾಗಿ ಪೊಲೀಸರು ಗುಂಡು ಹಾರಿಸಿದ್ದು, ಗುಂಡೇಟಿಗೆ ಒಬ್ಬ ಬಲಿಯಾಗಿದ್ದಾನೆ. ಘಟನೆ ಸಂಬಂಧ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ.

==

ರೇಪಿಸ್ಟ್‌ ಹೆಣ ಹೂಳಲೂ ಸ್ಮಶಾನವಿಲ್ಲ!

ಮುಂಬೈ: ಮಹಾರಾಷ್ಟ್ರದ ಬದ್ಲಾಪುರ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಅಕ್ಷಯ್ ಶಿಂಧೆಯ ಮೃತದೇಹವನ್ನು ಹೂಳಲು ಯಾವುದೇ ಸ್ಮಶಾನಗಳಲ್ಲಿ ಸ್ಮಶಾನದ ಆಡಳಿತ ಮಂಡಳಿಯವರು ಅನುಮತಿ ನೀಡುತ್ತಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.ಹೀಗಾಗಿ ಮಗನ ಶವವನ್ನು ಹೂಳಲು ಆತನ ತಂದೆ, ಜಾಗ ಗುರುತಿಸಿಕೊಡಬೇಕೆಂದು ಬಾಂಬೆ ಹೈ ಕೋರ್ಟ್‌ ಮೊರೆಹೋಗಿದ್ದಾರೆ. ಇದಕ್ಕೆ ಸ್ಪಂದಿಸಿದ ಕೋರ್ಟ್‌, ಶವ ಹೂಳಲು ಜಾಗ ಗುರುತಿಸಿ ಎಂದು ಪೊಲೀಸರಿಗೆ ಆದೇಶಿಸಿದೆ.

ಇದರ ನಡುವೆ ಶಿಂಧೆ ಹೆಣವನ್ನು ಹೂಳಲು ಮಹಾರಾಷ್ಟ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಶಿಂಧೆ ಅವರ ಜಾತಿಯಲ್ಲಿ ಹೆಣ ಹೂಳುವ ಪದ್ಧತಿಯಿಲ್ಲ, ಬದಲಾಗಿ ಸುಡುವ ಪದ್ಧತಿಯಿದೆ ಎಂದು ತಿಳಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್‌, ‘ಹೂಳುವುದೋ, ಸುಡುವುದೋ ಅದು ಅವರಿಗೆ ಬಿಟ್ಟಿದ್ದು. ನೀವು ಜಾಗವನ್ನು ಗುರುತಿಸಿಕೊಡಿ’ ಎಂದು ಸೂಚಿಸಿದೆ.

==

ಅಕ್ಟೋಬರ್‌ನಲ್ಲಿ ಭಾರತಕ್ಕ ಮಾಲ್ಡೀವ್ಸ್‌ ಅಧ್ಯಕ್ಷ 

ನವದೆಹಲಿ: ಸತತವಾಗಿ ಭಾರತ ವಿರೋಧಿ ನಿಲುವು ಕೈಗೊಂಡು ಕೊನೆಗೆ ಪಾಠ ಕಲಿತಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಸಂಬಂಧ ಸುಧಾರಣೆಗಾಗಿ ಅಕ್ಟೋಬರ್‌ 2ನೇ ವಾರದಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.ಅಧ್ಯಕ್ಷೀಯ ಚುನಾವಣೆ ವೇಳೆ ತನ್ನ ದೇಶದಲ್ಲಿ ಭಾರತೀಯ ಸೇನೆಯನ್ನು ಪೂರ್ಣ ಹಿಂದಕ್ಕೆ ಕಳುಹಿಸುವ ಭರವಸೆ ನೀಡಿದ್ದ ಮುಯಿಜು, ಗೆದ್ದ ಮೇಲೂ ಮೊದಲು ಭಾರತ ವಿರೋಧ ಚೀನಾಕ್ಕೆ ಮೊದಲ ಭೇಟಿ ನೀಡಿದ್ದರು. ಜೊತೆಗೆ ಅವರ ಪಕ್ಷದ ನಾಯಕರು ಕೂಡಾ ಭಾರತದ ವಿರುದ್ಧ ಮತ್ತು ಭಾರತದ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುವ ಮೂಲಕ ಭಾರತದ ಕೆಂಗಣ್ಣಿಗೆ ಸಿಲುಕಿದ್ದರು.

ಅದರ ಬೆನ್ನಲ್ಲೇ ಭಾರತೀಯರು ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಅರಂಭಿಸಿದ್ದರು. ಇದು ಪ್ರವಾಸೋದ್ಯಮ ನಂಬಿದ್ದ ಮಾಲ್ಡೀವ್ಸ್‌ಗೆ ಹೊಡೆತ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಮುಯಿಜು, ಭಾರತ ಮತ್ತು ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಸಚಿವರನ್ನು ಕಿತ್ತುಹಾಕಿದ್ದರು. ಜೊತೆಗೆ ಭಾರತದೊಂದಿಗೆ ಮರಳಿ ಸಂಬಂಧ ಸುಧಾರಣೆಯ ಮಾತುಗಳನ್ನು ಆಡಿದ್ದರು.ಅದರ ಬೆನ್ನಲ್ಲೇ ಇದೀಗ ಅವರ ಭಾರತ ಭೇಟಿ ನಿಗದಿಯಾಗಿದೆ. ಸಮುದ್ರದಿಂದ ಸುತ್ತುವರೆದಿರುವ ಮಾಲ್ಡೀವ್ಸ್‌ ತನ್ನ ಬಹುತೇಕ ಅಗತ್ಯಕ್ಕೆ ಭಾರತವನ್ನೇ ಅವಲಂಬಿಸಿದೆ.

 ಈ ನಡುವೆ ಅಮೆರಿಕದಲ್ಲಿ ಮಾತನಾಡಿರುವ ಮುಯಿಜು, ‘ನಮಗೆ ಯಾವುದೇ ಭಾರತ ವಿರೋಧಿ ಮನಸ್ಥಿತಿ ಇಲ್ಲ. ಅದನ್ನು ನಾವು ಬೆಂಬಲಿಸುವುದೂ ಇಲ್ಲ. ನಮ್ಮ ದೇಶದಲ್ಲಿ ವಿದೇಶಿ ಸೇನೆ (ಭಾರತ ಸೇನೆ) ಇರುವುದನ್ನು ದೇಶದ ಜನತೆ ಒಪ್ಪುವುದಿಲ್ಲ ಅಷ್ಟೇ’ ಎಂದು ಹೇಳಿದ್ದಾರೆ.

Share this article