10 ದಿನದ ಅಧಿವೇಶನದಲ್ಲಿ 12 ಮಸೂದೆ ಪಾಸ್‌: ಪ್ರಹ್ಲಾದ್‌ ಜೋಶಿ

KannadaprabhaNewsNetwork | Updated : Feb 11 2024, 08:09 AM IST

ಸಾರಾಂಶ

ಹದಿನೇಳನೇ ಲೋಕಸಭೆಯ ಕಡೆಯ ಬಜೆಟ್‌ ಅಧಿವೇಶನದ 10 ದಿನದ ಅವಧಿಯಲ್ಲಿ ಒಟ್ಟು 12 ಮಸೂದೆಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

ನವದೆಹಲಿ: ಹದಿನೇಳನೇ ಲೋಕಸಭೆಯ ಕಡೆಯ ಬಜೆಟ್‌ ಅಧಿವೇಶನದ 10 ದಿನದ ಅವಧಿಯಲ್ಲಿ ಒಟ್ಟು 12 ಮಸೂದೆಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಹದಿನೇಳನೇ ಲೋಕಸಭೆಯ ಐದು ವರ್ಷಗಳ ಅವಧಿಯಲ್ಲಿ 221 ಮಸೂದೆಗಳನ್ನು ಅಂಗೀಕರಿಸಲಾಗಿದೆ. 

ಪ್ರಮುಖವಾಗಿ 370ನೇ ವಿಧಿ ರದ್ದು, ಹೊಸ ಕ್ರಿಮಿನಲ್‌ ಮಸೂದೆಗಳು, ನಾರಿಶಕ್ತಿ, ತ್ರಿವಳಿ ತಲಾಖ್‌ ನಿಷೇಧದಂತಹ ಮಹತ್ವದ ಮಸೂದೆಗಳು ಸದನದಲ್ಲಿ ಅಂಗೀಕಾರವಾಗಿದೆ. 

ಜೊತೆಗೆ ಕಡೆಯ ಬಜೆಟ್‌ ಅಧಿವೇಶನದಲ್ಲಿ ಯುಪಿಎ ಸರ್ಕಾರದ ಆರ್ಥಿಕತೆಯ ಕುರಿತು ಶ್ವೇತಪತ್ರ ಹೊರತಂದಿದ್ದೇವೆ’ ಎಂದು ತಿಳಿಸಿದರು.

ನೂತನ ಸಂಸತ್‌ ಭವನ: ಇದೇ ವೇಳೆ ‘17ನೇ ಲೋಕಸಭೆ ಅಧಿವೇಶನವನ್ನು ಹಳೆಯ ಮತ್ತು ಹೊಸ ಸಂಸತ್‌ ಭವನದಲ್ಲಿ ನಡೆಸಲಾಗಿದೆ. 

ಹೊಸ ಸಂಸತ್‌ ಭವನವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಉದ್ಘಾಟಿಸಲಾಗಿದೆ. ಜೊತೆಗೆ 12 ವಿಧಾನಸಭೆಗಳನ್ನು ಕಾಗದ ರಹಿತ ಸದನಗಳನ್ನಾಗಿ ಮಾಡಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.

Share this article