250 ಜನರನ್ನು ಬಲಿ ಪಡೆದ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಈಗ ರಾಷ್ಟ್ರಪತಿ ಆಡಳಿತ

KannadaprabhaNewsNetwork |  
Published : Feb 14, 2025, 12:35 AM ISTUpdated : Feb 14, 2025, 04:34 AM IST
ಮಣಿಪುರ | Kannada Prabha

ಸಾರಾಂಶ

250 ಜನರನ್ನು ಬಲಿ ಪಡೆದ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಗುರುವಾರ ಸಂಜೆ ರಾಷ್ಟ್ರಪತಿ ಆಳ್ವಿಕೆ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ 4 ದಿನ ತರುವಾಯ ಈ ಘೋಷಣೆ ಹೊರಬಿದ್ದಿದೆ.

 ನವದೆಹಲಿ/ಇಂಫಾಲ್‌ : 250 ಜನರನ್ನು ಬಲಿ ಪಡೆದ ಜನಾಂಗೀಯ ಸಂಘರ್ಷಪೀಡಿತ ಮಣಿಪುರದಲ್ಲಿ ಗುರುವಾರ ಸಂಜೆ ರಾಷ್ಟ್ರಪತಿ ಆಳ್ವಿಕೆ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ 4 ದಿನ ತರುವಾಯ ಈ ಘೋಷಣೆ ಹೊರಬಿದ್ದಿದೆ.

ಇದೇ ವೇಳೆ 2027ರವರೆಗೆ ಅವಧಿ ಹೊಂದಿರುವ ಮಣಿಪುರ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ರಾಜ್ಯದಲ್ಲಿ 1951ರ ನಂತರ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತಿರುವುದು 11ನೇ ಸಲ.

21 ತಿಂಗಳ ಹಿಂದೆ ರಾಜ್ಯದಲ್ಲಿ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವೆ ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಜನಾಂಗೀಯ ಸಂಘರ್ಷ ಆರಂಭವಾಗಿತ್ತು. ಇದು ಇಂದೂ ನಿಂತಿಲ್ಲ ಹಾಗೂ 250 ಜನರ ಬಲಿಪಡೆದಿದೆ. ಲಕ್ಷಾಂತರ ಜನರನ್ನು ನಿರ್ವಸಿತರನ್ನಾಗಿ ಮಾಡಿದೆ. ಹೀಗಾಗಿ ಸ್ಥಿತಿ ನಿಭಾಯಿಸಲು ಆಗದೇ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಬಿಜೆಪಿ ನಾಯಕ ಬಿರೇನ್‌ ಸಿಂಗ್‌ ಫೆ.9ರಂದ ಸಿಎಂ ಪದವಿ ತ್ಯಜಿಸಿದ್ದರು. ಕಾಂಗ್ರೆಸ್‌ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸುವ ಬೆದರಿಕೆ ಹಾಕಿದ ಬೆನ್ನಲ್ಲೇ ರಾಜೀನಾಮೆ ನೀಡಿದ್ದರು.

ಬಳಿಕ ಅವರ ಸ್ಥಾನಕ್ಕೆ ಯಾರನ್ನೂ ಬಿಜೆಪಿ ಹೆಸರಿಸಿರಲಿಲ್ಲ. ಏಕೆಂದರೆ ಮುಂದಿನ ಸಿಎಂ ಯಾರೆಂದು ಒಮ್ಮತ ಮೂಡಿರಲಿಲ್ಲ. ಹೀಗಾಗಿ ರಾಜ್ಯದಲ್ಲಿ ರಾಜ್ಯಪಾಲರ ವರದಿ ಆಧರಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿದೆ.

ಕಾಂಗ್ರೆಸ್‌ ಆಕ್ರೋಶ:

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿದೆ. ಇದು ಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ವಿಫಲವಾಗಿರುವ ಸಂಕೇತ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

- ಸಿಎಂ ರಾಜೀನಾಮೆ ಬೆನ್ನಲ್ಲೇ ಜಾರಿ- ಹಿಂಸಾಚಾರದಿಂದ ನಲುಗಿರುವ ರಾಜ್ಯ

- 21 ತಿಂಗಳ ಹಿಂದೆ ಮಣಿಪುರದಲ್ಲಿ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವೆ ಆರಂಭವಾಗಿದ್ದ ಹಿಂಸಾಚಾರ- ಈವರೆಗೆ 250 ಜನರನ್ನು ಬಲಿ ಪಡೆದಿರುವ ಜನಾಂಗೀಯ ಹಿಂಸಾಚಾರ. ಮಣಿಪುರದ ಲಕ್ಷಾಂತರ ಮಂದಿ ನಿರಾಶ್ರಿತ- ಪರಿಸ್ಥಿತಿ ನಿಭಾಯಿಸಲಾಗದೆ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸಿಎಂ ಬೀರೇನ್‌ ಸಿಂಗ್‌ ಫೆ.9ರಂದು ರಾಜೀನಾಮೆ- ಹೊಸ ಸಿಎಂ ಆಯ್ಕೆಗೆ ಬಿಜೆಪಿಯಿಂದ ಕಸರತ್ತು. ಒಮ್ಮತ ಮೂಡದ ಹಿನ್ನೆಲೆಯಲ್ಲಿ ಈಗ ರಾಷ್ಟ್ರಪತಿ ಆಳ್ವಿಕೆ ಜಾರಿ

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ