ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೂತನ ಮತದಾರರ ಚೀಟಿಯನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ. ಮುರ್ಮು ಅವರು ರಾಷ್ಟ್ರಪತಿ ಪದವಿಗೆ ಏರಿದ ಬಳಿಕ ಅವರ ಮತ ಹಕ್ಕನ್ನು ದೆಹಲಿಗೆ ಬದಲಿಸಲಾಗುತ್ತದೆ. ಈ ಕಾರಣವಾಗಿ ಪ್ರಸ್ತುತ ಒಡಿಶಾದಲ್ಲಿನ ಮಯೂರ್‌ಗಂಜ್ ಕ್ಷೇತ್ರದಲ್ಲಿನ ಅವರ ಮತ ಅಧಿಕಾರವನ್ನು ದೆಹಲಿಗೆ ಬದಲಾಯಿಸಲು ಮುಖ್ಯಚುನಾವಣಾಧಿಕಾರಿಗಳು ಶುಕ್ರವಾರ ರಾಷ್ಟ್ರಪತಿ ನಿವಾಸಕ್ಕೆ ತೆರಳಿದ್ದರು. ಅಲ್ಲಿ ರಾಷ್ಟ್ರಪತಿ ಮುರ್ಮು ತಾವೇ ಫಾರಂ 8 ಭರ್ತಿ ಮಾಡಿ ಸಲ್ಲಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ನೂತನ ಮತಚೀಟಿಯನ್ನು ವಿತರಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ಅವರು ದೆಹಲಿಯಲ್ಲಿ ಮತಚಲಾವಣೆ ಮಾಡಬಹುದಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.