ಭಾರತ - ಅಮೆರಿಕ ವ್ಯಾಪಾರ ಒಪ್ಪಂದ ಪ್ರಕಟಕ್ಕೆ ಕ್ಷಣಗಣನೆ

KannadaprabhaNewsNetwork |  
Published : Jul 07, 2025, 11:48 PM ISTUpdated : Jul 08, 2025, 05:06 AM IST
ಟ್ರಂಪ್ | Kannada Prabha

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಸೇರಿ ಅನ್ಯ ದೇಶಗಳು ತಮ್ಮ ಮೇಲೆ ವಿಧಿಸುತ್ತಿರುವ ತೆರಿಗೆಗಳಿಗೆ ಪ್ರತಿಯಾಗಿ ಆ ರಾಷ್ಟ್ರಗಳ ಮೇಲೂ ಹೇರಿದ್ದ ಭಾರೀ ತೆರಿಗೆ ಜಾರಿಯ ದಿನಾಂಕ ಸಮೀಪಿಸಿದೆ. ಇದು ಭಾರತೀಯ ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಸೇರಿ ಅನ್ಯ ದೇಶಗಳು ತಮ್ಮ ಮೇಲೆ ವಿಧಿಸುತ್ತಿರುವ ತೆರಿಗೆಗಳಿಗೆ ಪ್ರತಿಯಾಗಿ ಆ ರಾಷ್ಟ್ರಗಳ ಮೇಲೂ ಹೇರಿದ್ದ ಭಾರೀ ತೆರಿಗೆ ಜಾರಿಯ ದಿನಾಂಕ ಸಮೀಪಿಸಿದೆ. ಇದು ಭಾರತೀಯ ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.

ಒಂದು ಕಡೆ ಅಮೆರಿಕದ ಅಧಿಕಾರಿಗಳು, ತೆರಿಗೆ ಹೇರಿಕೆಗೆ ಸಂಬಂಧಿಸಿದ ಪತ್ರಗಳನ್ನು ರವಾನಿಸಲು ಉತ್ಸುಕರಾಗಿದ್ದು, ಈ ಸಂಬಂಧ ತಮ್ಮೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳ ಮೇಲೆ ಒತ್ತಡ ಹೇರುತ್ತಿದ್ದರೆ, ಆ ರಾಷ್ಟ್ರಗಳ ಉತ್ಪಾದಕರು, ಉದ್ಯಮಿಗಳು, ಗ್ರಾಹಕರು ತಮ್ಮ ಮೇಲಾಗಬಹುದಾದ ಪರಿಣಾಮವನ್ನು ನೆನೆದು ದಿಗಿಲುಗೊಂಡಿದ್ದಾರೆ. ತೆರಿಗೆಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳಲು ಟ್ರಂಪ್‌ ಜು.9ರ ಗಡುವು ನೀಡಿದ್ದಾರೆ.

ಭಾರತಕ್ಕೆ ಶೇ.10ರಷ್ಟು ತೆರಿಗೆ?:

ಈಗಾಗಲೇ ಅಮೆರಿಕದ ಜತೆ ಭಾರತದ ಮಾತುಕತೆ ಆರಂಭವಾಗಿದ್ದು, ಇನ್ನೆರಡು ದಿನಗಳಲ್ಲಿ ವೇಗ ಪಡೆದುಕೊಂಡು, ಮಿನಿ ಒಪ್ಪಂದವಾಗುವ ನಿರೀಕ್ಷೆಯಿದೆ. ಕೆಲ ಮೂಲಗಳ ಪ್ರಕಾರ ಭಾರತ ತನ್ನ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದ್ದು, ಅಂತಿಮ ನಿರ್ಧಾರವನ್ನು ಕೈಗೊಂಡು ಒಪ್ಪಂದ ಅಂತಿಮಗೊಳಿಸುವ ಜವಾಬ್ದಾರಿಯೀಗ ಅಮೆರಿಕದ ಮೇಲಿದೆ.

ಗೋಧಿ, ಅಕ್ಕಿ, ಮೆಕ್ಕೆಜೋಳ, ಹೈನುಗಾರಿಕೆ, ತಳೀಯವಾಗಿ ಮಾರ್ಪಡಿಸಿದ (ಜಿಎಂ) ಬೆಳೆಗಳ ಮೇಲೆ ತೆರಿಗೆ ವಿನಾಯಿತಿ ನೀಡಲು ಭಾರತ ನಿರಾಕರಿಸಿರುವುದಾಗಿ ವರದಿಯಾಗಿದೆ. ಉಳಿದಂತೆ, ಅಮೆರಿಕದ ಪೆಕನ್ ಬೀಜ, ಬ್ಲೂಬೆರ್ರಿ ಮೇಲಿನ ತೆರಿಗೆ ತಗ್ಗಬಹುದು. ಅಮೆರಿಕ ಕೂಡ ಭಾರತದಲ್ಲಿ ಹೆಚ್ಚು ಕಾರ್ಮಿಕರ ದುಡಿತದಿಂದ ಉತ್ಪಾದನೆಯಾಗುವ ವಸ್ತುಗಳ ಮೇಲೆ ಕಡಿಮೆ ತೆರಿಗೆ ವಿಧಿಸುವ ನಿರೀಕ್ಷೆಯಿದೆ. ಉಭಯ ದೇಶಗಳ ನಡುವೆ ಪೂರ್ಣಪ್ರಮಾಣದ ಮಾತುಕತೆ ಜು.9ಕ್ಕೆ ಆರಂಭವಾಗುವ ಸಂಭವವಿದೆ.

ಎಷ್ಟೆಷ್ಟು ತೆರಿಗೆ: ಏಪ್ರಿಲ್‌ 2ರ ‘ವಿಮೋಚನಾ ದಿನ’ದಂದು ಘೋಷಣೆಯಾದ ಪ್ರಕಾರ, ಎಲ್ಲಾ ದೇಶಗಳ ಮೇಲೆ ಶೇ.10ರಷ್ಟು ತೆರಿಗೆ ಹೇರಲಾಗುವುದು. ಅದರ ಮೇಲೆ ಎಲ್ಲಾ ದೇಶಗಳಿಗೂ ಹೆಚ್ಚುವರಿಯಾಗಿ ಮತ್ತಷ್ಟು ತೆರಿಗೆ ಹಾಕವಾಗುವುದು. ಇದರಡಿಯಲ್ಲಿ ಭಾರತ ಒಟ್ಟು ಶೇ.26ರಷ್ಟು ತೆರಿಗೆಗೆ ಒಳಪಡುತ್ತದೆ.

ಟ್ಯಾರಿಫ್‌ ಪತ್ರ ಕಳಿಸುವೆ-ಟ್ರಂಪ್‌: ‘ಸೋಮವಾರ ಮಧ್ಯಾಹ್ನ 12 ಗಂಟೆಯ ಒಳಗೆ ಎಲ್ಲಾ ದೇಶಗಳಿಗೆ ತೆರಿಗೆ ಅಥವಾ ವ್ಯಾಪಾರ ಒಪ್ಪಂದ ಪತ್ರಗಳನ್ನು ಕಳಿಸಿಕೊಡಲಾಗುವುದು’ ಎಂದಿರು ಟ್ರಂಪ್‌, ಪರೋಕ್ಷವಾಗಿ ತೆರಿಗೆ ಹೇರಿಕೆಯ ದಿನ ಹತ್ತಿರವಾಗಿರುವುದನ್ನು ನೆನಪಿಸಿದ್ದಾರೆ. ಈಗಾಗಲೇ 12 ದೇಶಗಳಿಗೆ ಕಳಿಸುವ ಪತ್ರಗಳನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ತೆರಿಗೆ ಹೇರಿಕೆ ಮುಂದೂಡಿಕೆ?:

ಅನಿಶ್ಚಿತ ನಡೆಗಳಿಗೆ ಹೆಸರುವಾಸಿಯಾಗಿರುವ ಟ್ರಂಪ್‌, ಮಾತುಕತೆ ಅಥವಾ ತೆರಿಗೆ ಹೇರಿಕೆಯನ್ನು ಮುಂದೂಡುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ‘ಗಡುವು ನಿಗದಿಯಾಗಿದೆಯಾದರೂ ಅದು ಸಮೀಪಿಸುತ್ತಿರುವ ಕಾರಣ ಮುಂದೆ ಹೋಗಲೂಬಹುದು. ಅಂತಿಮ ನಿರ್ಧಾರ ಅಧ್ಯಕ್ಷರ ಕೈಲಿದೆ’ ಎಂದು ವೈಟ್‌ಹೌಸ್‌ನ ನಿರ್ದೇಶಕ ಕೆವಿನ್ ಹ್ಯಾಸೆಟ್ ಇದರ ಸಣ್ಣ ಸುಳಿವು ನೀಡಿದ್ದಾರೆ.

ವ್ಯಾಪಾರ ಒಪ್ಪಂದ ಅಂದರೇನು?ಎಲ್ಲಾ ದೇಶಗಳು ಒಂದಲ್ಲಾ ಒಂದು ಸರಕು ಅಥವಾ ಸೇವೆಗಳಿಗಾಗಿ ಅನ್ಯ ದೇಶಗಳ ಮೇಲೆ ಅವಲಂಬಿತವಾಗಿರುತ್ತವೆ. ಈ ವಿನಿಮಯಕ್ಕೆ ಸಂಬಂಧಿಸಿದಂತೆ, ವ್ಯಾಪಾರದಲ್ಲಿ ತೊಡಗಿರುವ ದೇಶಗಳು ಪರಸ್ಪರ ಕೆಲ ಒಪ್ಪಂದಗಳನ್ನು ಮಾಡಿಕೊಂಡಿರುತ್ತವೆ. ಅದು ಒಬ್ಬರ ಸರಕುಗಳ ಮೇಲೆ ಇನ್ನೊಬ್ಬರು ವಿಧಿಸಬಹುದಾದ ತೆರಿಗೆ ಮಿತಿ, ಆಮದಿನ ಪ್ರಮಾಣದ ಮೇಲೆ ಮಿತಿ ಸೇರಿದಂತೆ, ರಫ್ತು ಮತ್ತು ಆಮದಿಗೆ ಸಂಬಂಧಿಸಿದ ಎಲ್ಲಾ ನೀತಿ ನಿಯಮಗಳನ್ನು ಒಳಗೊಂಡಿರುತ್ತದೆ. ಈ ಒಡಂಬಡಿಕೆಯ ಆಧಾರದಲ್ಲೇ ಉಭಯ ರಾಷ್ಟ್ರಗಳ ನಡುವೆ ವ್ಯಾಪಾರಗಳು ನಡೆಯುತ್ತಿರುತ್ತವೆ. ವ್ಯಾಪಾರ ಒಪ್ಪಂದಗಳ ಮೇಲೆ ಎರಡೂ ದೇಶಗಳ ನಡುವೆ ಇರುವ ಸಂಬಂಧ(ಮಿತ್ರತ್ವ/ವೈರತ್ವ) ಪರಿಣಾಮ ಬೀರುತ್ತದೆ.

ಜಪಾನ್, ದ. ಕೊರಿಯಾಕ್ಕೆ ಟ್ರಂಪ್ ಶೇ.25ರಷ್ಟು ತೆರಿಗೆ ಶಾಕ್

ವಾಷಿಂಗ್‌ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸುವುದಾಗಿ ಸೋಮವಾರ ಘೋಷಿಸಿದ್ದಾರೆ. ಅಲ್ಲದೆ, ಆ.1ರಿಂದಲೇ ಇದು ಜಾರಿಗೆ ಬರುವುದಾಗಿ ತಿಳಿಸಿದ್ದಾರೆ.ಈ ಕುರಿತು ಟ್ರುತ್ ಸೋಷಿಯಲ್‌ನಲ್ಲಿ ಮಾಹಿತಿ ನೀಡಿರುವ ಅವರು, ಅಮೆರಿಕದ ಶೇ.25ರಷ್ಟು ತೆರಿಗೆಗೆ ಪ್ರತಿಯಾಗಿ ಈ ದೇಶಗಳು ಇನ್ನೂ ಹೆಚ್ಚಿನ ತೆರಿಗೆಯನ್ನು ವಿಧಿಸಿದರೆ, ಅಮೆರಿಕವು ಆಮದು ಸುಂಕವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಭಾರೀ ಪ್ರತಿತೆರಿಗೆ ಹೇರುವ ತಮ್ಮ ಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಬ್ರಿಕ್ಸ್ ದೇಶಗಳಿಗೆ ಮತ್ತೆ ಅಧ್ಯಕ್ಷ ಟ್ರಂಪ್‌ ಹೆಚ್ಚಿನ ತೆರಿಗೆ ಬೆದರಿಕೆ 

ನ್ಯೂಯಾರ್ಕ್‌/ವಾಷಿಂಗ್ಟನ್‌: ಎಲ್ಲಾ ದೇಶಗಳನ್ನು ತಮ್ಮ ತೆರಿಗೆಯಿಂದ ಕುಣಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಬ್ರಿಕ್ಸ್‌ ಕೂಟ ಅಮೆರಿಕ ವಿರೋಧಿ ನೀತಿಗಳನ್ನು ಬೆಂಬಲಿಸಿದರೆ ಸದಸ್ಯ ದೇಶಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ತೆರಿಗೆ ವಿಧಿಸುತ್ತೇನೆ’ ಎಂದು ಆರ್ಭಟಿಸಿದ್ದಾರೆ.ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ, ಟ್ರಂಪ್‌ ಅಥವಾ ಅಮೆರಿಕವನ್ನು ಹೆಸರಿಸದೆ, ಸದಸ್ಯ ರಾಷ್ಟ್ರಗಳು ತೆರಿಗೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ಕೆಂಡವಾಗಿರುವ ಟ್ರಂಪ್‌, ‘ಅಮೆರಿಕ ವಿರೋಧಿ ನೀತಿಗಳಿಗೆ ಕೈಜೋಡಿಸುವವರ ಮೇಲೆ ಇನ್ನೂ ಶೇ.10ರಷ್ಟು ಹೆಚ್ಚು ತೆರಿಗೆ ಹೇರುತ್ತೇನೆ. ಇದರಿಂದ ಯಾರಿಗೂ ವಿನಾಯಿತಿ ಇಲ್ಲ’ ಎಂದಿದ್ದಾರೆ. ಜತೆಗೆ, ‘ಈ ವಿಷಯದ ಕಡೆ ಗಮನ ಹರಿಸಿದ್ದಕ್ಕೆ ಧನ್ಯವಾದ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಮೊದಲೂ ಸಹ ಟ್ರಂಪ್‌, ಬ್ರಿಕ್ಸ್‌ ದೇಶಗಳು ಡಾಲರ್‌ಗೆ ಪರ್ಯಾಯ ಕರೆನ್ಸಿ ಸೃಷ್ಟಿಸಲು ಮುಂದಾದರೆ ಭಾರತ ಸೇರಿ ಎಲ್ಲಾ ಸದಸ್ಯ ರಾಷ್ಟ್ರಗಳ ಮೇಲೆ ಶೇ.100ರಷ್ಟು ತೆರಿಗೆ ಹಾಕುತ್ತೇನೆ ಎಂದು ಬೆದರಿಸಿದ್ದರು.ಸಂಘರ್ಷದ ಕೂಟವಲ್ಲ: ಟ್ರಂಪ್‌ ಬೆದರಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಚೀನಾ, ‘ಬ್ರಿಕ್ಸ್‌ ಕೂಟ ಇರುವುದು ಸಂಘರ್ಷ ಸೃಷ್ಟಿಸಲು ಅಥವಾ ಮೂರನೇ(ಸದಸ್ಯನಲ್ಲದ) ದೇಶವನ್ನು ಗುರಿಯಾಗಿಸಿ ಅಲ್ಲ’ ಎಂದು ಹೇಳಿದೆ.

‘ಇದು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಹಕಾರಕ್ಕೆ ಪ್ರಮುಖ ವೇದಿಕೆಯಾಗಿದೆ. ಬ್ರಿಕ್ಸ್‌ ಕೂಟವು ಮುಕ್ತತೆ, ಒಳಗೊಳ್ಳುವಿಕೆ ಮತ್ತು ಗೆಲುವಿನ ಸಹಕಾರವನ್ನು ಪ್ರತಿಪಾದಿಸುತ್ತದೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೋ ನಿಂಗ್‌ ಹೇಳಿದ್ದಾರೆ.

PREV
Read more Articles on

Recommended Stories

ಅಗ್ಗವೆಂದು ಮುಸ್ಲಿಮರು ಗೋಮಾಂಸ ತಿಂತಾರೆ: ಸಲ್ಮಾನ್‌ ಅಪ್ಪ ಸಲೀಂ!
ಪಂಜಾಬ್‌ನ 1000 ಹಳ್ಳಿಗಳಲ್ಲಿ ಪ್ರವಾಹ