ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಸ್ಟಡಿಯಲ್ಲಿರುವ ಮುಂಬೈ ದಾಳಿ ಸಂಚುಕೋರ, ಉಗ್ರ ತಹಾವುರ್ ರಾಣಾ ವಿಚಾಣಾಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ. 26/11 ದಾಳಿ ವೇಳೆ ಉಗ್ರ ಸಂಚಿನ ಭಾಗವಾಗಿ ತಾನು ಮುಂಬೈನಲ್ಲೇ ಇದ್ದೆ, ತಾನೊಬ್ಬ ಪಾಕಿಸ್ತಾನ ಸೇನೆಯ ವಿಶ್ವಾಸಾರ್ಹ ಏಜೆಂಟ್ ಎಂಬುದಾಗಿ ವಿಚಾರಣಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ರಾಣಾ ಈ ಹೇಳಿಕೆಯಿಂದ ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದೆ ಎಂಬ ವಾದಕ್ಕೆ ಮತ್ತೊಂದು ಮಹತ್ವದ ಸಾಕ್ಷ್ಯ ದೊರೆತಂತಾಗಿದೆ. ಇದಲ್ಲದೆ, ಈ ಮುಂಚೆ ರಾಣಾ ಅಮೆರಿಕದಲ್ಲಿದ್ದುಕೊಂಡು ದಾಳಿಗೆ ನೆರವು ನೀಡಿದ್ದ ಎನ್ನಲಾಗಿತ್ತು. ಆದರೆ ಈಗ ಆತ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದಾನೆ ಹಾಗೂ ದಾಳಿ ವೇಳೆ ಆತ ಮುಂಬೈನಲ್ಲಿದ್ದ ಎಂಬ ವಿಷಯ ಮೊದಲ ಬಾರಿ ಬಹಿರಂಗವಾಗಿದೆ.
ಮುಂಬೈ ದಾಳಿಗಾಗಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ನೆರವು ನೀಡಿದ ಮತ್ತು ಡೆನ್ಮಾರ್ಕ್‌ನಲ್ಲಿ ಬಾಂಬ್ ಸ್ಫೋಟದ ಸಂಚಿಗೆ ಸಂಬಂಧಿಸಿ ಪಾಕಿಸ್ತಾನ ಮೂಲದ ಕೆನಡಾ ನಾಗರಿಕನಾದ ರಾಣಾನನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಭಾರತದ ಮನವಿ ಮೇರೆಗೆ ಆತನನ್ನು ಗಡೀಪಾರು ಮಾಡಲಾಗಿತ್ತು. ಸದ್ಯ ತಿಹಾರ್ ಜೈಲಿನಲ್ಲಿರುವ ರಾಣಾನನ್ನು ಎನ್‌ಐಎ ತೀವ್ರ ವಿಚಾರಣೆ ನಡೆಸುತ್ತಿದ್ದು, ಮುಂಬೈ ದಾಳಿಗೆ ಸಂಬಂಧಿಸಿ ಮಹತ್ವದ ದಾಖಲೆಗಳನ್ನು ಕಲೆಹಾಕುತ್ತಿದೆ.
ಎಲ್‌ಇಟಿಯಿಂದ ತರಬೇತಿ:ವಿಚಾರಣೆ ವೇಳೆ ರಾಣಾ, ತಾನು ಹಾಗೂ ಮುಂಬೈ ದಾಳಿಯ ಮತ್ತೊಬ್ಬ ರೂವಾರಿ ಉಗ್ರ ಡೇವಿಡ್ ಕೋಲ್‌ಮನ್ ಹೆಡ್ಲಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯಿಂದ ಹಲವು ಬಾರಿ ತರಬೇತಿ ಪಡೆದಿರುವ ವಿಚಾರವನ್ನೂ ಬಹಿರಂಗಪಡಿಸಿದ್ದಾನೆ. ‘ಲಷ್ಕರ್ ಸಂಘಟನೆಯನ್ನು ಸೇನೆಗೆ ಗುಪ್ತಚರ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಮೊದಲು ರೂಪಿಸಲಾಗಿತ್ತು. ನಂತರ ಅದು ಉಗ್ರ ಸಂಘಟನೆಯಾಗಿ ಬದಲಾಯಿತು’ ಎಂದೂ ಇದೇ ವೇಳೆ ಆತ ಹೇಳಿಕೊಂಡಿದ್ದಾನೆ.
‘26/11 ದಾಳಿ ವೇಳೆ ನಾನು ಮುಂಬೈನಲ್ಲೇ ಇದ್ದೆ. ಆದರೆ ಇದು ಕಾಕತಾಳೀಯವಲ್ಲ, ಬದಲಾಗಿ ಉಗ್ರ ಕಾರ್ಯಾಚರಣೆಯ ಸಂಚಿನ ಯೋಜಿತ ಭಾಗ ಆಗಿತ್ತು. ಭಾರತದಲ್ಲಿ ವ್ಯವಹಾರದ ಹೆಸರಿನಲ್ಲಿ ಕಚೇರಿ ತೆರೆದು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ಸೇರಿ ಮುಂಬೈನಲ್ಲಿ ಹಲವು ಜನನಿಬಿಡ ಸ್ಥಳಗಳ ಪರಿಶೀಲನೆ ನಡೆಸಿದ್ದೆ’ ಎಂದು ತಿಳಿಸಿರುವ ಆತ, ಪಾಕಿಸ್ತಾನದ ಐಎಸ್‌ಐ ಸಹಯೋಗದಿಂದಿಗೆ 26/11 ದಾಳಿ ನಡೆಸಲಾಗಿತ್ತು ಎಂಬುದನ್ನು ಖಚಿತಪಡಿಸಿದ್ದಾನೆ.ಇದೇ ವೇಳೆ ಪಾಕ್ ಸೇನೆಯ ಜತೆ ತಾನು ಹೊಂದಿರುವ ನಿಕಟ ಸಂಬಂಧವನ್ನೂ ಸ್ಪಷ್ಟಪಡಿಸಿರುವ ಆತ, ‘ಖಲೀಜ್ ಯುದ್ಧದ ವೇಳೆ ನನ್ನನ್ನು ಸೌದಿ ಅರೇಬಿಯಾಗೂ ಪಾಕಿಸ್ತಾನ ಕಳುಹಿಸಿಕೊಟ್ಟಿತ್ತು’ ಎಂದು ತಿಳಿಸಿದ್ದಾನೆ.
2008ರ ಸೆಪ್ಟೆಂಬರ್ 26ರಂದು ಹತ್ತು ಮಂದಿ ಶಸ್ತ್ರಸಜ್ಜಿತ ಪಾಕಿಸ್ತಾನಿ ಉಗ್ರರು ಮುಂಬೈನ ಹೆಸರಾಂತ ತಾಜ್ ಪ್ಯಾಲೇಸ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಲ್, ನಾರಿಮನ್ ಹೌಸ್ ಸೆಂಟರ್ ಸೇರಿ ಹಲವು ಕಡೆ ದಾಳಿ ನಡೆಸಿದ್ದರು. ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಈ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರೆ, ಪಾಕಿಸ್ತಾನಿ ಮೂಲದ ಉಗ್ರ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದ.
ರಾಣಾ ಹೇಳಿದ್ದೇನು?
- ನಾನು ಪಾಕ್ ಸೇನೆಯ ವಿಶ್ವಾಸಾರ್ಹ ಏಜೆಂಟ್ ಆಗಿದ್ದೆ
- ಐಎಸ್‌ಐ ಬೆಂಬಲದೊಂದಿಗೇ ಮುಂಬೈ ದಾಳಿ ನಡೆದಿತ್ತು- ದಾಳಿಗೂ ಮುಂಚೆ ಮುಂಬೈನಲ್ಲಿ ಸ್ಥಳ ಸಮೀಕ್ಷೆ ಮಾಡಿದ್ದೆ
- ಲಷ್ಕರ್, ಪಾಕ್ ಸೇನೆಗಳೇ ದಾಳಿಯ ಸಂಚು ರೂಪಿಸಿವೆ
- ಈ ಮುನ್ನ ಸೌದಿಗೂ ಪಾಕ್ ಸರ್ಕಾರ ನನ್ನನ್ನು ಕಳಿಸಿತ್ತು
- ಪಾಕ್ ಮೂಲದ ಉಗ್ರನಿಂದ ಸ್ಫೋಟಕ ಮಾಹಿತಿ ಬಹಿರಂಗ