ವಯನಾಡ್ : ಕೇರಳದ ಪ್ರಸಿದ್ಧ ಪ್ರವಾಸಿ ಜಿಲ್ಲೆಯಾಗಿರುವ ವಯನಾಡಿನಲ್ಲಿ ಮುಂಬರುವ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ಭರ್ಜರಿ ರೋಡ್‌ಶೋ ನಡೆಸಿದ ಬಳಿಕ ನಾಮಪತ್ರ ಸಲ್ಲಿಸಿದರು. ತನ್ಮೂಲಕ ಗಾಂಧಿ ಕುಟುಂಬದ ಇನ್ನೊಂದು ಕುಡಿ ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು.
ತಾಯಿ ಸೋನಿಯಾ ಗಾಂಧಿ, ಸೋದರ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಖ್ಯಾತನಾಮರು ಪ್ರಿಯಾಂಕಾಗೆ ಸಾಥ್ ನೀಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡ್ ಹಾಗೂ ರಾಯ್‌ಬರೇಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಅವರು ವಯನಾಡ್ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದರಿಂದ ನ.13ರಂದು ಅಲ್ಲಿಗೆ ಉಪಚುನಾವಣೆ ನಡೆಯುತ್ತಿದೆ.ನನಗೆ 35 ವರ್ಷ ಅನುಭವವಿದೆ:
ನಾಮಪತ್ರ ಸಲ್ಲಿಕೆಗೂ ಮುನ್ನ ಕಲ್ಪೆಟ್ಟಾದಲ್ಲಿ ನಡೆಸಿದ ರೋಡ್‌ಶೋದಲ್ಲಿ ತೆರೆದ ಬಸ್ ಮೇಲೆ ತಾಯಿ, ಸೋದರ, ಪತಿ ರಾಬರ್ಟ್ ವಾದ್ರಾ, ಮಕ್ಕಳು ಹಾಗೂ ಕಾಂಗ್ರೆಸ್‌ನ ವರಿಷ್ಠ ನಾಯಕರೊಂದಿಗೆ ನಿಂತು ಮಾತನಾಡಿದ ಪ್ರಿಯಾಂಕಾ, ‘ನನಗೆ 35 ವರ್ಷಗಳ ರಾಜಕೀಯ ಅನುಭವವಿದೆ. 17 ವರ್ಷದವಳಿದ್ದಾಗಲೇ ತಂದೆ ರಾಜೀವ್ ಗಾಂಧಿಯವರಿಗೆ 1989ರಲ್ಲಿ ಚುನಾವಣಾ ಪ್ರಚಾರ ಮಾಡಿದ್ದೆ’ ಎಂದು ಹೇಳಿದರು.
ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ನವ್ಯಾ ಹರಿದಾಸ್ ಅವರು ಪ್ರಿಯಾಂಕಾಗಿಂತ ನನಗೆ ಹೆಚ್ಚು ರಾಜಕೀಯ ಅನುಭವವಿದೆ ಎಂದು ಹೇಳಿದ ಬೆನ್ನಲ್ಲೇ ಪ್ರಿಯಾಂಕಾ ಈ ತಿರುಗೇಟು ನೀಡಿದ್ದಾರೆ.ಇನ್ನು ವಯನಾಡಿಗೆ 2 ಎಂಪಿಗಳು:
ರೋಡ್‌ಶೋನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಪ್ರಿಯಾಂಕಾ ಗೆದ್ದಮೇಲೆ ವಯನಾಡಿಗೆ ಇಬ್ಬರು ಸಂಸದರಿರುತ್ತಾರೆ. ಒಬ್ಬರು ಪ್ರಿಯಾಂಕಾ, ಇನ್ನೊಬ್ಬ ನಾನು. ಇನ್ನುಮುಂದೆ ನಾನು ವಯನಾಡಿಗೆ ಅನಧಿಕೃತ ಸಂಸದನಂತೆ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.ಐಯುಎಂಎಲ್ ಬೆಂಬಲ:
ರೋಡ್‌ಶೋನಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ (ಐಯುಎಂಎಲ್) ಹಸಿರು ಧ್ವಜಗಳು ಕೂಡ ಹಾರಾಡುತ್ತಿದ್ದುದು ವಿಶೇಷವಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಸ್ಪರ್ಧಿಸಿದಾಗ ಪ್ರಚಾರಕ್ಕೆ ಐಯುಎಂಎಲ್ ಗೈರಾಗಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಐಯುಎಂಎಲ್ ಸಕ್ರಿಯವಾಗಿದ್ದಾಗ ಬಿಜೆಪಿ ನಾಯಕ ಅಮಿತ್ ಶಾ ‘ಇದು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚುನಾವಣೆಯೇ?’ ಎಂದು ವಾಗ್ದಾಳಿ ನಡೆಸಿದ್ದರು.
ಪ್ರಿಯಾಂಕಾ ಸ್ಪರ್ಧೆ ವಯನಾಡು ಜನತೆಗೆ ವಂಚನೆ ಸಂಚು: ಆರ್‌ಸಿ
ನವದೆಹಲಿ: ಕೇರಳದ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ, ಸ್ಥಳೀಯ ಜನರನ್ನು ಮತ್ತೊಮ್ಮೆ ವಂಚಿಸುವ ಸಂಚು ಎಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಟೀಕಿಸಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜೀವ್, ‘ಕಳೆದ 5 ವರ್ಷದಲ್ಲಿ ರಾಹುಲ್ ಗಾಂಧಿ ವಯನಾಡು ಜನತೆಗಾಗಿ ಏನೂ ಮಾಡಿಲ್ಲ. ಈಗ ಪ್ರಿಯಾಂಕಾ ಕೂಡ ಅದೇ ದಾರಿ ಹಿಡಿಯುವ ಸಾಧ್ಯತೆಯಿದೆ. ಆದರೆ ಈ ಬಾರಿ ಜನರು ಮೂರ್ಖರಾಗಲು ತಯಾರಿಲ್ಲ. ಎನ್‌ಡಿಎ ಶಿಕ್ಷಿತ, ಸಮರ್ಥ, ಕ್ರಿಯಾತ್ಮಕ ಹಾಗೂ ಶ್ರಮಜೀವಿಯಾದ ನವ್ಯಾ ಹರಿದಾಸ್ ಅವರನ್ನು ಕಣಕ್ಕಿಳಿಸಿದೆ. ಆಕೆ ಈಗಾಗಲೇ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ’ ಎಂದು ರಾಜೀವ್ ಹೇಳಿದ್ದಾರೆ. ಅಂತೆಯೇ, ನವ್ಯಾ ಕೇರಳದವರೇ ಆಗಿದ್ದು, ಇಲ್ಲಿನ ಜನತೆಗಾಗಿ ದುಡಿಯುತ್ತಾರೆ. ಆದರೆ ಇಲ್ಲಿಯವರಲ್ಲದ ಪ್ರಿಯಾಂಕಾಗೆ ಮಲಯಾಳಂ ಬರದ ಕಾರಣ ಜನರ ಕಷ್ಟಗಳೂ ಆಕೆಗೆ ತಿಳಿಯದು. ವಯನಾಡು ದುರಂತ ಸಂಭವಿದ್ದಾಗ ತಲೆಕೆಡಿಸಿಕೊಳ್ಳದ ರಾಹುಲ್ ಜಾಗಕ್ಕೆ ಈಕೆ ಬರುತ್ತಿರುವುದು ಅಲ್ಪಸಂಖ್ಯಾತರ ಮತವಿರುವ ಕಾರಣ ಎಂದು ಅವರ ಪ್ರಿಯಾಂಕಾರನ್ನು ತೀವ್ರವಾಗಿ ಟೀಕಿಸಿದ್ದಾರೆ.
ಪ್ರಿಯಾಂಕಾ ಆಸ್ತಿ ₹12 ಕೋಟಿ!
ವಯನಾಡು: ವಯನಾಡು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿ ತಮ್ಮ ಬಳಿ 12 ಕೋಟಿ ರು. ಆಸ್ತಿಯಿದೆ ಎಂದು ನಾಮಪತ್ರದ ಜೊತೆ ಸಲ್ಲಿಸಿದ ಜೊತೆ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.ಅಫಿಡವಿಟ್‌ನ ಅನ್ವಯ ವಿವಿಧ ಬ್ಯಾಂಕ್‌ಗಳಲ್ಲಿ ಹೊಂದಿರುವ ಠೇವಣಿ, ಮ್ಯೂಚುವಲ್ ಫಂಡ್ ಹೂಡಿಕೆ, ಪಿಪಿಎಫ್ ಖಾತೆಯ ಹಣ, ಪತಿ ರಾಬರ್ಟ್ ವಾದ್ರಾ ನೀಡಿದ ಹೊಂಡಾ ಸಿವಿಆರ್ ಕಾರು, 1.5 ಕೋಟಿ ರು.ಮೌಲ್ಯದ 4.4 ಕೆಜಿ ಚಿನ್ನ ಸೇರಿ 4.24 ಕೋಟಿ ರು. ಮೊತ್ತದ ಚರಾಸ್ತಿ ಇದೆ. ಇದರ ಜೊತೆ ದೆಹಲಿಯ ಮೆಹ್ರೌಲಿ ಬಳಿ ವಂಶಪಾರಂಪರ್ಯವಾಗಿ ಬಂದಿರುವ ಕೃಷಿ ಭೂಮಿ, ಹಿಮಾಚಲಪ್ರದೇಶದ ಶಿಮ್ಲಾದ ಮನೆ ಮೌಲ್ಯ 7.73 ಕೋಟಿ ಎಂದು ಘೋಷಿಸಿದ್ದಾರೆ. ಜೊತೆಗೆ ತಮ್ಮ ಮೇಲೆ 2 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿವೆ ಎಂದು ತಿಳಿಸಿದ್ದಾರೆ.