ಒಮರ್‌ ಬಳಿಕ ಈಗ ಮಮತಾ ಪಕ್ಷದಿಂದ ಕಾಂಗ್ರೆಸ್‌ ನಡೆಗೆ ವಿದ್ಯುನ್ಮಾನ ಮತಯಂತ್ರದ ಚಾಟಿ

KannadaprabhaNewsNetwork | Updated : Dec 17 2024, 04:46 AM IST

ಸಾರಾಂಶ

‘ಇವಿಎಂ (ವಿದ್ಯುನ್ಮಾನ ಮತಯಂತ್ರ)ಗಳನ್ನು ತಿರುಚಲಾಗುತ್ತಿದೆ. ಹೀಗಾಗಿ ಅದರ ಬದಲು ಈ ಹಿಂದಿನಂತೆ ಬ್ಯಾಲೆಟ್‌ ಪೇಪರ್‌ ಜಾರಿಗೆ ತರಬೇಕು’ ಎಂದು ಆಗ್ರಹಿಸುತ್ತಿರುವ ಕಾಂಗ್ರೆಸ್‌ ನಡೆಗೆ ಖುದ್ದು ಇಂಡಿಯಾ ಕೂಟದಲ್ಲೇ ಅಪಸ್ವರ ಹೆಚ್ಚುತ್ತಿದೆ.

 ನವದೆಹಲಿ : ‘ಇವಿಎಂ (ವಿದ್ಯುನ್ಮಾನ ಮತಯಂತ್ರ)ಗಳನ್ನು ತಿರುಚಲಾಗುತ್ತಿದೆ. ಹೀಗಾಗಿ ಅದರ ಬದಲು ಈ ಹಿಂದಿನಂತೆ ಬ್ಯಾಲೆಟ್‌ ಪೇಪರ್‌ ಜಾರಿಗೆ ತರಬೇಕು’ ಎಂದು ಆಗ್ರಹಿಸುತ್ತಿರುವ ಕಾಂಗ್ರೆಸ್‌ ನಡೆಗೆ ಖುದ್ದು ಇಂಡಿಯಾ ಕೂಟದಲ್ಲೇ ಅಪಸ್ವರ ಹೆಚ್ಚುತ್ತಿದೆ. 

ಮೊನ್ನೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಕಾಂಗ್ರೆಸ್ ನಡೆ ವಿರೋಧಿಸಿದ್ದರು. ಇದರ ಬೆನ್ನಲ್ಲೇ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿದೆ.ಸೋಮವಾರ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ‘ಇವಿಎಂಗಳ ಬಗ್ಗೆ ಪ್ರಶ್ನೆ ಎತ್ತುವವರು ಅದರ ವ್ಯತ್ಯಾಸಗಳ ಡೆಮೋವನ್ನು ಚುನಾವಣಾ ಆಯೋಗಕ್ಕೆ ತೋರಿಸಬೇಕು. ಬರೀ ಆರೋಪ ಸಾಲದು. 

ಇವಿಎಂಗಳನ್ನು ಹ್ಯಾಕ್‌ ಮಾಡಬಹುದು ಎಂದು ಯಾರಿಗಾದರೂ ಅನ್ನಿಸಿದರೆ ಅವರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಅದನ್ನು ನಿರೂಪಿಸಿಬೇಕು. ಹಾಗೆ ಮಾಡುವುದನ್ನು ಬಿಟ್ಟು ಸುಮ್ಮನೆ ಹೇಳಿಕೆ ನೀಡಿದರೆ ಸಾಲದು’ ಎಂದರು. ಈ ಮೂಲಕ ಕಾಂಗ್ರೆಸ್‌ ಆಗ್ರಹ ತರ್ಕಬದ್ಧವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಭಿಷೇಕ್‌ ಅವರನ್ನು ತೃಣಮೂಲ ಕಾಂಗ್ರೆಸ್‌ನಲ್ಲಿ ಮಮತಾ ನಂತರ ನಂ.2 ನಾಯಕ ಎಂದೇ ಕರೆಯಲಾಗುತ್ತದೆ.

ಕಾಂಗ್ರೆಸ್‌ನಲ್ಲಿ ಕೂಡ ಇವಿಎಂ ವಿರುದ್ಧ ಒಮ್ಮತ ಇದ್ದಂತಿಲ್ಲ. ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಕೂಡ ಇತ್ತೀಚೆಗೆ ‘ಇವಿಎಂ ಕ್ಷಮತೆ ಬಗ್ಗೆ ನನಗೆ ಎಳ್ಳಷ್ಟೂ ಸಂದೇಹವಿಲ್ಲ’ ಎಂದಿದ್ದರು.ಒಮರ್‌ ಅಬ್ದುಲ್ಲಾ ಮೊನ್ನೆ ಮಾತನಾಡಿ, ‘ಇವಿಎಂ ಮೇಲೆ ಸಂದೇಹ ಇದ್ದರೆ ಚುನಾವಣೆಗೇ ಸ್ಪರ್ಧಿಸಬಾರದು. ಸೋಲಿನ ಬಳಿಕ ಇವಿಎಂಗಳನ್ನು ದೂರುವುದನ್ನು ಬಿಟ್ಟು ಬಿಡಿ, ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳಿ’ ಎಂದಿದ್ದರು.

ಪ್ರಹ್ಲಾದ ಜೋಶಿ ಕಿಡಿ:

ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೋಮವಾರ ಮಾತನಾಡಿ, ‘ಇವಿಎಂ ದೂಷಿಸುವುದರಿಂದ ಯಾವುದೇ ಫಲ ಸಿಗಲ್ಲ ಎಂಬ ಅರಿವು ಈಗಲಾದರೂ ಕಾಂಗ್ರೆಸ್‌ನಲ್ಲಿ ಮೂಡಲಿ. ಕಾಂಗ್ರೆಸ್‌ ಮಿತ್ರರೇ ಈಗ ಇವಿಎಂ ಪರ ನಿಂತಿದ್ದಾರೆ’ ಎಂದು ವ್ಯಂಗ್ಯವಾಡಿದರು.ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಇವಿಎಂ ಬಗ್ಗೆ ಅಪಸ್ವರ ಹೆಚ್ಚಿದೆ.

- ಹ್ಯಾಕ್‌ ಮಾಡಲು ಸಾಧ್ಯ ಎಂದರೆ ತೋರಿಸಿ- ಬರೀ ಹೇಳಿಕೆ ನೀಡಿದರೆ ಸಾಲದು: ಟಿಎಂಸಿ

- ಇವಿಎಂ ಬದಲು ಬ್ಯಾಲೆಟ್‌ ಪೇಪರ್ ಮರುಜಾರಿಗೆ ಆಗ್ರಹಿಸುತ್ತಿರುವ ಕಾಂಗ್ರೆಸ್

- ಕಾಂಗ್ರೆಸ್ಸಿನ ಈ ಬೇಡಿಕೆಗೆ ಪ್ರತಿಪಕ್ಷಗಳ ಇಂಡಿಯಾ ಕೂಟದಲ್ಲೇ ಸಹಮತ ಇಲ್ಲ

- ಇವಿಎಂ ಬಗ್ಗೆ ಶಂಕೆ ಇದ್ದರೆ ಚುನಾವಣೆಗೇ ಸ್ಪರ್ಧಿಸಬೇಡಿ ಎಂದಿದ್ದ ಒಮರ್‌ ಅಬ್ದುಲ್ಲಾ

- ಈಗ ಮತ್ತೊಂದು ಮಿತ್ರ ಪಕ್ಷ ಟಿಎಂಸಿಯಿಂದಲೂ ಕಾಂಗ್ರೆಸ್‌ನ ಇವಿಎಂ ಕ್ಯಾತೆಗೆ ಅಪಸ್ವರ

Share this article