ಗನ್ನಿಂದ ರೈತರ ಬೆದರಿಸಿದ್ದ ಐಎಎಸ್‌ ಪೂಜಾ ತಾಯಿ ನಾಪತ್ತೆ

KannadaprabhaNewsNetwork |  
Published : Jul 16, 2024, 12:33 AM ISTUpdated : Jul 16, 2024, 05:15 AM IST
ಪೂಜಾ ತಾಯಿ | Kannada Prabha

ಸಾರಾಂಶ

ಭೂಮಿ ವಿವಾದದ ಸಂಬಂಧ ವ್ಯಕ್ತಿಯೊಬ್ಬನಿಗೆ ಪಿಸ್ತೂಲು ತೋರಿಸಿದ್ದ ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಪುಣೆ: ಭೂಮಿ ವಿವಾದದ ಸಂಬಂಧ ವ್ಯಕ್ತಿಯೊಬ್ಬನಿಗೆ ಪಿಸ್ತೂಲು ತೋರಿಸಿದ್ದ ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಆಕೆ ರೈತನಿಗೆ ಪಿಸ್ತೂಲು ತೋರಿಸಿ ಬೆದರಿಸುತ್ತಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮನೋರಮಾ, ಪತಿ ದಿಲೀಪ್ ಹಾಗೂ ಇನ್ನೂ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 323(ಅಪ್ರಾಮಾಣಿಕತೆ ಅಥವಾ ಆಸ್ತಿಯ ಮರೆಮಾಚುವಿಕೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಸಂಬಂಧ ಪುಣೆ ಗ್ರಾಮಾಂತರ ಪೊಲೀಸರು ಬಾನೇರ್‌ ರಸ್ತೆಯಲ್ಲಿರುವ ಮನೋರಮಾ ಮನೆಗೆ ಭಾನುವಾರ ಮತ್ತು ಸೋಮವಾರ ಹೋದರೂ ಪತ್ತೆಯಾಗಿಲ್ಲ. ಆಕೆಯ ಮೊಬೈಲ್ ಸ್ವಿಚ್ಆಫ್‌ ಆಗಿದೆ. ಆಕೆ ಪತ್ತೆಯಾಗುತ್ತಲೇ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ನಾನು ನಿರಪರಾಧಿ, ತನಿಖೆಯಲ್ಲಿ ಸತ್ಯ ಗೊತ್ತಾಗುತ್ತೆ: ಪೂಜಾ ಖೇಡ್ಕರ್‌

ಪುಣೆ: ನಕಲಿ ದಾಖಲೆ ನೀಡಿ ನೇಮಕ, ಅಧಿಕಾರ ದುರ್ಬಳಕೆ ವಿವಾದದಲ್ಲಿ ಸಿಲುಕಿರುವ ಪುಣೆಯ ಟ್ರೈನಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್, ‘ತನಿಖೆಯಲ್ಲಿ ದೋಷಿ ಎಂದು ಸಾಬೀತಾಗುವವರೆಗೆ ನಾನು ನಿರಪರಾಧಿ, ತನಿಖೆಯಲ್ಲಿ ಸತ್ಯ ಗೊತ್ತಾಗುತ್ತೆ’ ಎಂದಿದ್ದಾರೆ.ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿ, ‘ನಾನು ತಜ್ಞರ ಸಮಿತಿಯ ಮುಂದೆ ಸಾಕ್ಷಿ ಹೇಳುತ್ತೇನೆ ಮತ್ತು ಅದರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ನಾನು ಏನೇ ವಾದ ಮಂಡಿಸಿದರೂ ನಂತರ ಅವನ್ನು ಬಹಿರಂಗಪಡಿಸುವೆ. ನಮ್ಮ ಭಾರತೀಯ ಸಂವಿಧಾನವು ‘ತಪ್ಪಿತಸ್ಥ ಎಂದು ಸಾಬೀತುಪಡಿಸುವವರೆಗೂ ನಿರಪರಾಧಿ’ ಎಂಬ ತತ್ವವನ್ನು ಎತ್ತಿಹಿಡಿಯುತ್ತದೆ, ಹಾಗಾಗಿ ಮಾಧ್ಯಮ ವಿಚಾರಣೆಯ ಮೂಲಕ ನನ್ನನ್ನು ಅಪರಾಧಿ ಎಂದು ನಿರ್ಣಯಿಸುವುದು ತಪ್ಪ’ ಎಂದರು.

ಪೂಜಾ ರೀತಿಯಲ್ಲೇ ವಂಚನೆ ಮೂಲಕ ಐಎಎಸ್‌ ಅಭಿಷೇಕ್‌ ನೇಮಕ?

ನವದೆಹಲಿ: ನಕಲಿ ದಾಖಲೆ ತೋರಿಸಿ ದೃಷ್ಟಿ ದೋಷದ ನಾಟಕ ಮಾಡಿ ಐಎಎಸ್‌ ಅಧಿಕಾರಿಯಾಗಿ ನೇಮಕ ಆದ ಆರೋಪ ಹೊತ್ತಿರುವ ಟ್ರೈನೀ ಐಎಎಸ್‌ ಪೂಜಾ ಖೇಡ್ಕರ್‌ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

2 ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ನಟನಾಗಲು ಹೊರಟಿದ್ದ 2011ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ಅಭೀಷೇಕ್ ಸಿಂಗ್ ತನಗೆ ಲೋಕೋಮೋಟರ್ (ಕೈಕಾಲು ಚಲನೆಗೆ ಅಡ್ಡಿಮಾಡುವ) ಅಂಗವೈಕಲ್ಯ ಇದೆಯೆಂದು ಯುಪಿಎಸ್‌ಸಿ ಆಯ್ಕೆಯ ವೇಳೆ ಹೇಳಿಕೊಂಡಿದ್ದ.ಇತ್ತೀಚೆಗೆ ಅವನ ಜಿಮ್‌ ಹಾಗೂ ನರ್ತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಹೀಗಾಗಿ ಆತನ ನೇಮಕದ ಸಾಚಾತನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಯುಪಿಎಸ್‌ಸಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂಬ ಕೂಗು ಕೇಳಿಬರುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಗ್, ‘ಮೀಸಲಾತಿಯ ಪರವಾಗಿರುವುದರಿಂದ ನನ್ನನ್ನು ಗುರಿ ಮಾಡಲಾಗುತ್ತಿದೆ. ನನ್ನ ಜಾತಿ, ಕೆಲಸದ ಬಗ್ಗೆ ಪ್ರಶ್ನೆಗಳೇಳುತ್ತಿವೆ. ನಾನು ಸಾಧಿಸಿರುವುದೆಲ್ಲ ಧೈರ್ಯ ಹಾಗೂ ಪರಿಶ್ರಮದಿಂದಲೇ ಹೊರತು ಮೀಸಲಾತಿಯಿಂದ ಅಲ್ಲ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ.

PREV

Recommended Stories

ಶಬರಿಮಲೆ ಬಳಿಕ ಗುರುವಾಯೂರು ದೇಗುಲದ ಸ್ವತ್ತಿನಲ್ಲೂ ಅಕ್ರಮ ಶಂಕೆ
ದೀಪಾವಳಿಗೆ ದಾಖಲೆಯ ₹6.05 ಲಕ್ಷ ಕೋಟಿ ವಸ್ತು ಸೇಲ್‌!