;Resize=(412,232))
ಬೆಂಗಳೂರು : ಕನ್ನಡ ರಾಜ್ಯೋತ್ಸವದ ದಿನ ಕರ್ನಾಟಕ ರತ್ನ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರ, ಕನ್ನಡಪರ ಘೋಷಣೆಗಳನ್ನು ಹೊತ್ತ ನಮ್ಮ ಮೆಟ್ರೋ ರೈಲಿನ ಸಂಚಾರ ಜನಮನ ಸೆಳೆಯಿತು.
ಮೆಟ್ರೋದ ಬೋಗಿಗಳ ಮೇಲೆ ಕನ್ನಡ ಬಾವುಟ, ಪುನೀತ್ ಚಿತ್ರದ ಜತೆಗೆ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’, ‘ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ’ ಘೋಷಣೆಗಳು ರಾರಾಜಿಸಿದವು. ಸಾಮಾಜಿಕ ಜಾಲತಾಣದಲ್ಲಿ ಈ ಮೆಟ್ರೋ ರೈಲುಗಳ ಸಂಚಾರ ವೈರಲ್ ಆಗಿತ್ತು. ನೆಚ್ಚಿನ ನಟನ ಭಾವಚಿತ್ರ ಮೆಟ್ರೋ ಮೇಲೆ ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.
ಆಕರ್ಷಕವಾಗಿ ನಡೆದ ಪಥ ಸಂಚಲನ, ವಿವಿಧ ಶಾಲಾ ಮಕ್ಕಳಿಂದ ನಾಡು, ನುಡಿಯನ್ನು ಬಿಂಬಿಸುವ ನೃತ್ಯ ಪ್ರದರ್ಶನ, ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಭಿತ್ತಿ ಪತ್ರ ಪ್ರದರ್ಶನದ ಮೂಲಕ ಮಕ್ಕಳು ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರರಾದರು.
ಕಂಠೀರವ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ರೀತಿಯ ಪೋಷಾಕು, ನೃತ್ಯದ ಮೂಲಕ ನಾಡ ಪ್ರೇಮ ಪ್ರದರ್ಶಿಸಿದರು.
ಸಾರಕ್ಕಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೊಳಿಸಿರುವ ಹಲವು ಯೋಜನೆಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿ ಗಮನ ಸೆಳೆದರು. ಬಡತನದ ಕಾರಣದಿಂದ ವಿದ್ಯೆಯಿಂದ ವಂಚಿತರಾಗಬಾರದು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂಬ ಆಶಯ ಈ ನೃತ್ಯದಲ್ಲಿತ್ತು.
ನಲಿ-ಕಲಿ, ಉಚಿತ ಪುಸ್ತಕ, ಶೂ, ಮಧ್ಯಾಹ್ನದ ಬಿಸಿಯೂಟ, ವಸತಿ ಮತ್ತಿತರ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತರಾಗಬೇಕು ಎಂಬ ಸಂದೇಶವನ್ನು ಮಕ್ಕಳು ಸಾರಿದರು. ಯೋಜನೆಗಳಿಗೆ ಸಂಬಂಧಿಸಿದ ಭಿತ್ತಿಪತ್ರಗಳನ್ನೂ ಪ್ರದರ್ಶಿಸಿದ್ದು ಗಮನ ಸೆಳೆಯಿತು.
ಶ್ರೀಗಂಧದ ನಾಡು ಕರುನಾಡಿನ ಮಹತ್ವವನ್ನು ಅಗರ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನೃತ್ಯದ ಮೂಲಕ ಉತ್ತಮವಾಗಿ ಪ್ರದರ್ಶಿಸಿದರು.
ಕನ್ನಡ ಎನೆ ಕುಣಿದಾಡುವುದೆನ್ನೆದೆ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳು, ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಂತರ ಭಾವಚಿತ್ರಗಳನ್ನು ಹಿಡಿದು ಸಂಭ್ರಮಿಸಿದರು. ಕ್ರೀಡಾಂಗಣದಲ್ಲಿ ನಾಡ ಬಾವುಟಗಳು ರಾರಾಜಿಸಿದವು.
ಆಕರ್ಷಕ ಪಥಸಂಚಲನ
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರದ ಹಲವು ಇಲಾಖೆಗಳ ಸಿಬ್ಬಂದಿ ಆಕರ್ಷಕ ಪಥ ಸಂಚನ ನಡೆಸಿದರು.
ತಲಘಟ್ಟಪುರದ ಪಬ್ಲಿಕ್ ಶಾಲೆ, ಚಾಮರಾಜಪೇಟೆ ಬಾಲಕಿಯರ ಪ್ರೌಢಶಾಲೆ, ಗಂಗೊಂಡನಹಳ್ಳಿ ಸೆಂಟ್ ಆನ್ಸ್ ಶಾಲೆ, ಕಾಡುಗೋಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಹಲವು ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ವಾದ್ಯ ತಂಡ, ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆಯ ತಂಡಗಳೂ ಸಮಾರಂಭಕ್ಕೆ ಮೆರಗನ್ನು ತಂದವು.