ಚಂಡೀಗಢ: ಅಸ್ತಿತ್ವದಲ್ಲೇ ಇಲ್ಲದ ಸಚಿವಾಲಯವನ್ನು ಸಚಿವರೊಬ್ಬರಿಗೆ ಹಂಚಿಕೆ ಮಾಡಿ 21 ತಿಂಗಳ ಬಳಿಕ ತನ್ನ ತಪ್ಪು ಅರಿವಾಗುತ್ತಿದ್ದಂತೆ ಆ ಸಚಿವಾಲಯವನ್ನೇ ಗೆಜೆಟ್ ನೋಟಿಫಿಕೇಷನ್ ಮೂಲಕ ರದ್ದು ಮಾಡಿದ ಪ್ರಸಂಗ ಪಂಜಾಬ್‌ನಲ್ಲಿ ನಡೆದಿದೆ.
ಈ ರೀತಿ ಅಸ್ತಿತ್ವದಲ್ಲೇ ಇಲ್ಲದ ‘ಆಡಳಿತಾತ್ಮಕ ಸುಧಾರಣೆ ಸಚಿವಾಲಯ’ದಲ್ಲಿ 21 ತಿಂಗಳು ಕೆಲಸ ಮಾಡಿದವರು ಕುಲದೀಪ್ ಸಿಂಗ್ ಧಾಲಿವಾಲ್. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಇಂಥದ್ದೊಂದು ಎಡವಟ್ಟು ಮಾಡಿಕೊಂಡು ಪೇಚಿಗೆ ಸಿಲುಕಿದೆ.
ಆಡಳಿತಾತ್ಮಕ ಸುಧಾರಣೆ ಸಚಿವಾಲಯವನ್ನು ಎನ್‌ಆರ್‌ಐ ವ್ಯವಹಾರಗಳ ಸಚಿವರೂ ಆಗಿರುವ ಕುಲದೀಪ್ ಸಿಂಗ್ ಧಾಲಿವಾಲ್ ಅವರಿಗೆ 2023ರ ಮೇನಲ್ಲಿ ಹಂಚಿಕೆ ಮಾಡಲಾಗಿತ್ತು. ಆದರೆ ಧಾಲಿವಾಲ್ ಅವರು ಈ ಖಾತೆಗೆ ಸಂಬಂಧಿಸಿದಂತೆ ಒಂದೂ ಸಭೆಯನ್ನೂ ನಡೆಸಿರಲಿಲ್ಲ. ತಮಾಷೆಯೆಂದರೆ ಇಂಥದ್ದೊಂದು ಇಲಾಖೆಯೇ ಅಸ್ತಿತ್ವದಲ್ಲಿಲ್ಲ ಎಂಬುದು ಈಗ ಅಂದರೆ 21 ತಿಂಗಳ ಬಳಿಕ ಸರ್ಕಾರಕ್ಕೆ ಅರಿವಾಗಿದೆ. ಹೀಗಾಗಿ ಸದ್ಯ ಧಾಲಿವಾಲ್ ಅವರ ಕೈಯಲ್ಲಿ ಎನ್‌ಆರ್‌ಐ ವ್ಯವಹಾರಗಳ ಸಚಿವಾಲಯ ಮಾತ್ರ ಉಳಿದುಕೊಂಡಿದೆ. ತಾನು ಸಚಿವರೊಬ್ಬರಿಗೆ ಹಂಚಿಕೆ ಮಾಡಿದ್ದ ಖಾತೆಯೇ ಅಸ್ತಿತ್ವದಲ್ಲಿಲ್ಲ ಎಂಬುದು ಅರಿವಾಗುತ್ತಿದ್ದಂತೆ ಆಮ್ ಆದ್ಮಿ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿದೆ.
ಬಿಜೆಪಿ, ಅಕಾಲಿದಳ ವ್ಯಂಗ್ಯ:
ಭಗವಂತ್ ಮಾನ್ ಸರ್ಕಾರದ ಈ ನಡೆ ಕುರಿತು ಪ್ರತಿಪಕ್ಷ ಬಿಜೆಪಿ ವ್ಯಂಗ್ಯವಾಡಿದೆ. ಇದು ಕೇಜ್ರಿವಾಲ್ ಮಾದರಿ ಎಂದು ಕಾಲೆಳೆದಿದೆ. ಇನ್ನು ಅಕಾಲಿದಳವು, ‘ಸರ್ಕಾರದ ರಿಮೋಟ್ ಕಂಟ್ರೋಲ್ ದಿಲ್ಲಿಯಲ್ಲಿ ಇದ್ದ ಪರಿಣಾಮ ಇದು’ ಎಂದಿದೆ.
‘ಪಂಜಾಬ್ ಸರ್ಕಾರದ ಪರಿಸ್ಥಿತಿಯನ್ನು ನೀವೇ ಕಲ್ಪಿಸಿಕೊಳ್ಳಿ. ಅಲ್ಲಿ ಸರ್ಕಾರದ ಪ್ರಮುಖ ಸಚಿವರೊಬ್ಬರಿಗೆ ಹಂಚಿಕೆ ಮಾಡಲಾಗಿದ್ದ ಖಾತೆ ಅಸ್ತಿತ್ವದಲ್ಲೇ ಇಲ್ಲ ಎಂಬುದು 20 ತಿಂಗಳ ಬಳಿಕ ಅರಿವಾಗಿದೆ’ ಎಂದು ಬಿಜೆಪಿಯ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ವ್ಯಂಗ್ಯವಾಡಿದ್ದಾರೆ.
‘ಪಂಜಾಬ್‌ನಲ್ಲಿ ಆಡಳಿತಾತ್ಮಕ ಸುಧಾರಣೆ ಸಚಿವರೊಬ್ಬರು ಇದ್ದಾರೆ. ಆದರೆ ಅಂಥ ಸಚಿವಾಲಯವೇ ಇಲ್ಲ. ಆಡಳಿತಾತ್ಮಕ ಸುಧಾರಣೆಯ ಸಚಿವರ ಹುದ್ದೆ ರದ್ದಾಗುವವರೆಗೆ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಆ ಈ ಕುರಿತು ಮಾಹಿತಿಯೇ ಇರಲಿಲ್ಲ. ಇದು ಕೇಜ್ರಿವಾಲ್ ಮಾದರಿ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಂಚನ್ ಗುಪ್ತಾ ಹೇಳಿದ್ದಾರೆ.