;Resize=(412,232))
ನವದೆಹಲಿ: ಪರೀಕ್ಷೆಗೆಂದು ಮೊದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಮುದ್ರಿಸುವ ಬದಲು, ಪ್ರಶ್ನೆಗಳನ್ನು ಒಳಗೊಂಡ ಬೃಹತ್ ಕ್ವಶ್ಚನ್ ಬ್ಯಾಂಕ್ ಸಿದ್ಧಪಡಿಸಿ ಇಡುವುದು. ಪರೀಕ್ಷೆಯ ದಿನ ಈ ಬ್ಯಾಂಕ್ನಿಂದ ಎಐ ಬಳಸಿ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ನೀಡುವ ವಿನೂತನ ಪ್ರಸ್ತಾಪವೊಂದನ್ನು ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ರಚಿಸಿರುವ ಕಾರ್ಯಪಡೆಯ ಮುಖ್ಯಸ್ಥರಾಗಿರುವ ಕನ್ನಡಿಗ, ಇನ್ಫೋಸಿಸ್ನ ಸಹ-ಸ್ಥಾಪಕ ನಂದನ್ ನಿಲೇಕಣಿ ಮುಂದಿಟ್ಟಿದ್ದಾರೆ.
ಬ್ಲೂಮ್ಬರ್ಗ್ ಎಕಾನಮಿ ಫೋರಂನಲ್ಲಿ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರತಿಪಾದಿಸಿದ್ದಾರೆ.
‘ಒಂದು ಪ್ರಶ್ನೆಪತ್ರಿಕೆ ಎಂಬಂತಹದ್ದು ನಮಗೆ ಏಕೆ ಬೇಕು? ಪ್ರಶ್ನೆ ಪತ್ರಿಕೆ ಇದ್ದರಷ್ಟೇ ಅಲ್ಲವೇ ಅದು ಸೋರಿಕೆ ಆಗುವುದು. ಅದು ಇಲ್ಲದಿದ್ದರೆ ಸೋರಿಕೆ ಮಾಡುವ, ದುಡ್ಡು ಕೊಟ್ಟು ಖರೀದಿಸುವ ಪ್ರಮೇಯವೇ ಬರದು. ಆದ್ದರಿಂದ ಪ್ರಶ್ನೆಗಳ ಬೃಹತ್ ಭಂಡಾರ (ಕ್ವಶ್ಚನ್ ಬ್ಯಾಂಕ್) ಇಟ್ಟುಕೊಂಡು, ಪರೀಕ್ಷೆ ಆರಂಭವಾಗುವ ಸ್ವಲ್ಪ ಹೊತ್ತಿನ ಮುನ್ನ ಪ್ರಶ್ನೆಪತ್ರಿಕೆಯನ್ನು ತಯಾರಿಸಬೇಕು. ಇದಕ್ಕೆ ಎಐ ಬಳಸುವುದು ಸೂಕ್ತ’ ಎಂದು ನಿಲೇಕಣಿ ಸಲಹೆ ನೀಡಿದರು. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸಲಹೆಯನ್ನು ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಯೋಚಿಸುವ ಭರವಸೆ ಇದೆ ಎಂದರು.
ಇದೇ ವೇಳೆ ನಿಲೇಕಣಿ, ಎಐ ಟೆಕಿಗಳ ಕೆಲಸ ಕಸಿಯುತ್ತದೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.
- - ಪ್ರಶ್ನೆಪತ್ರಿಕೆ ಎಂಬುದು ಮೊದಲೇ ನಿಗದಿಯಾದರೆ ದುಡ್ಡಿನ ಆಸೆಗೆ ಸೋರಿಕೆಯಾಗುತ್ತದೆ
- ಅದರ ಬದಲು ಪ್ರಶ್ನೆಗಳ ಬೃಹತ್ ಭಂಡಾರ (ಕ್ವಶ್ಚನ್ ಬ್ಯಾಂಕ್)ವನ್ನು ತಯಾರಿಸುವುದು
- ಪರೀಕ್ಷೆ ಆರಂಭವಾಗುವ ಸ್ವಲ್ಪ ಹೊತ್ತಿನ ಮುಂಚೆ ಎಐ ಬಳಸಿ ಪ್ರಶ್ನೆ ಪತ್ರಿಕೆ ತಯಾರಿಸುವುದು
- ನಮ್ಮ ಈ ಸಲಹೆಯನ್ನು ಪ್ರಧಾನಿ ಮೋದಿ ಅವರು ಗಂಭೀರವಾಗಿ ಯೋಚಿಸುವ ಭರವಸೆ ಇದೆ
- ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆ ಸುಧಾರಣೆ ಕಾರ್ಯಪಡೆಯ ಮುಖ್ಯಸ್ಥ, ಕನ್ನಡಿಗ ನಿಲೇಕಣಿ ಸಲಹೆ