ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ 2025 ಬಗ್ಗೆ ವಿವಿಧ ನಾಯಕರ ಅಭಿಪ್ರಾಯ

ಸಾರಾಂಶ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ 2025 ಬಗ್ಗೆ ವಿವಿಧ ನಾಯಕರ ಅಭಿಪ್ರಾಯ

ಜನಾಧಾರಿತ ಬಜೆಟ್‌ನಿಂದ  ಅಭಿವೃದ್ಧಿ ಭಾರತದೆಡೆಗೆ

ಈ ಬಾರಿಯ ಬಜೆಟ್ ಜನಾಧಾರಿತವಾಗಿದ್ದು, ದೇಶದ ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗಗಳ ಆಶೋತ್ತರಗಳನ್ನು ಪೂರೈಸುತ್ತದೆ. 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತ ಮಾಡುವಲ್ಲಿ ಹೊಸ ದಾರಿಯನ್ನು ಹಾಕಿಕೊಡಲಿದೆ. ಈ ಮೂಲಕ ಎಲ್ಲರ ಅಭಿವೃದ್ಧಿಯನ್ನು ಈ ಬಜೆಟ್‌ ಪರಿಗಣಿಸಿದೆ.

- ಭೂಪೇಂದ್ರ ಪಟೇಲ್‌, ಗುಜರಾತ್‌ ಸಿಎಂ

ಕರ್ನಾಟಕಕ್ಕೆ ಯಾವುದೇ

ಬಜೆಟ್‌ನಲ್ಲಿ ಯೋಜನೆ ಇಲ್ಲ

ಕೇಂದ್ರ ಬಜೆಟ್‌ ಸಂಪೂರ್ಣ ನಿರಾಶಾದಾಯಕವಾಗಿದೆ. ಕರ್ನಾಟಕಕ್ಕೆ ಯಾವುದೇ ಯೋಜನೆ, ಅನುದಾನ ಘೋಷಿಸಿಲ್ಲ. ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದ್ದು, ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪವಿಲ್ಲ. ಕರ್ನಾಟಕ ದೇಶದಲ್ಲೇ 2ನೇ ಅತಿ ದೊಡ್ಡ ತೆರಿಗೆ ಪಾವತಿಸುವ ರಾಜ್ಯವಾದರೂ ಲಾಭವಿಲ್ಲ.

- ಎಸ್.ಎಸ್. ಮಲ್ಲಿಕಾರ್ಜುನ, ಸಚಿವ

ಅಸ್ಸಾಂಗೆ ಬಜೆಟ್‌ ದಿನವು

ಐತಿಹಾಸಿಕವಾಗಿದೆ

ಬಜೆಟ್‌ ದಿನವು ಅಸ್ಸಾಂ ಪಾಲಿಗೆ ಐತಿಹಾಸಿಕ ದಿನವಾಗಿದೆ. ಮುಂಗಡಪತ್ರದಲ್ಲಿ ಅಸ್ಸಾಂನ ನಾಮ್‌ರೂಪ್‌ನಲ್ಲಿ 12.5 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಸ್ಥಾವರ ತೆರೆಯುವ ಘೋಷಣೆಯಾಗಿದೆ. ಇದು ಕೇವಲ ಅಸ್ಸಾಂನನ್ನು ರಸಗೊಬ್ಬರ ಕ್ಷೇತ್ರದಲ್ಲಿ ಆತ್ಮನಿರ್ಭರ ಮಾಡುವುದಲ್ಲದೇ, ಈಶಾನ್ಯ ಭಾರತದಲ್ಲಿ ಗೇಂ ಚೇಂಜರ್ ಆಗಿರಲಿದೆ.

- ಹಿಮಂತ ಬಿಸ್ವ ಶರ್ಮಾ, ಅಸ್ಸಾಂ ಸಿಎಂ

ಬಜೆಟ್‌ ಅಂಕಿಅಂಶಗಿಂತ

ಕಾಲ್ತುಳಿತದ ಸಂಖ್ಯೆ ಹೆಚ್ಚು

ಇಂದು ಬಜೆಟ್ ಅಂಕಿಅಂಶಗಳಿಗಿಂತ ಮಹಾಕುಂಭ ಕಾಲ್ತುಳಿತದಲ್ಲಿ ಮಡಿದವರ ಸಂಖ್ಯೆಯೇ ಹೆಚ್ಚು. ಪ್ರಾಣ ಕಳೆದುಕೊಂಡವರ ಸಂಖ್ಯೆ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬಜೆಟ್‌ನಲ್ಲಿ ಉತ್ತರ ಪ್ರದೇಶಕ್ಕೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ. ಕೇವಲ ಬಿಹಾರಕ್ಕೆ ಬಜೆಟ್‌ ಪೂರಕವಾಗಿದೆ.

- ಅಖಿಲೇಶ್‌ ಯಾದವ್‌, ಎಸ್‌ಪಿ ಸಂಸದ

ಆಟಿಕೆ ತಯಾರಿಕೆಗೆ

ಉತ್ತಮ ಬಜೆಟ್‌

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆಟಿಕೆ ತಯಾರಿಕೆ ಕ್ಲಸ್ಟರ್‌ಗಳಿಗೆ ಒತ್ತು ನೀಡಲಾಗಿದೆ. ಇದರಿಂದ ಚನ್ನಪಟ್ಟಣ ಆಟಿಕೆ ತಯಾರಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ. ಆಟಿಕೆಗಳ ಕ್ರಿಯಾ ಯೋಜನೆ ಆಧರಿಸಿರುವ ಪ್ರಸ್ತಾವಿತ ಉಪಕ್ರಮ, ಆಟಿಕೆ ಉದ್ಯಮದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲಿದೆ.

- ಲೆಹರ್‌ ಸಿಂಗ್‌, ರಾಜ್ಯಸಭಾ ಸದಸ್ಯ

ಕರ್ನಾಟಕಕ್ಕೆ ಶೂನ್ಯ

ಬಿಹಾರಕ್ಕೆ ಭರಪೂರ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಶೂನ್ಯ ಕೊಡುಗೆ ನೀಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನೇ ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದೆ. ಇದು ಬಜೆಟ್ಟಾ ಅಥವಾ ಬಿಹಾರ ಚುನಾವಣಾ ಪ್ರಣಾಳಿಕೆಯೋ ಎಂಬ ಅನುಮಾನ ಹುಟ್ಟಿದೆ. ಚುನಾವಣೆ ಮುನ್ನೆಲೆಯಲ್ಲಿ ಮಂಡಿಸಿರುವ ಬಜೆಟ್ ಇದಾಗಿದೆ.

- ಎಚ್‌.ಕೆ.ಪಾಟೀಲ್‌, ಸಚಿವ

Share this article