ಕೈಹಿಡಿಯದ ಮತದಾರರ ಪಟ್ಟಿ ಪರಿಷ್ಕರಣೆ, ಮತಗಳವು ಟೀಕೆ

KannadaprabhaNewsNetwork |  
Published : Nov 15, 2025, 01:00 AM IST
ಮತಚೋರಿ  | Kannada Prabha

ಸಾರಾಂಶ

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯೋಗ ಕೈಗೊಂಡಿದ್ದ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್‌ ನೇತೃತ್ವದ ಮಹಾ ಮೈತ್ರಿಕೂಟ ಭಾರೀ ಟೀಕೆ-ಟಿಪ್ಪಣಿ ನಡೆಸಿದರೂ, ಬಿಜೆಪಿ ವಿರುದ್ಧ ಮತಗಳವು ಆರೋಪ ಮಾಡಿದ್ದರೂ ಅದು ಮತದಾರರ ಮೇಲೆ ಪರಿಣಾಮ ಬೀರುವಲ್ಲಿ ವಿಫಲವಾಗಿದೆ.

ವಿಪಕ್ಷಗಳಿಗೆ ಫಲ ನೀಡದ ಆರೋಪ । ಟೀಕೆ ಹೊರತೂ ದಾಖಲೆ ಮತದಾನ

ಪ್ರತಿಪಕ್ಷಗಳಿಗೆ ತಿರುಗುಬಾಣ, ಎನ್‌ಡಿಎ ಕೂಟಕ್ಕೆ ರಾಮಬಾಣವಾದ ವಿವಾದ==

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯೋಗ ಕೈಗೊಂಡಿದ್ದ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್‌ ನೇತೃತ್ವದ ಮಹಾ ಮೈತ್ರಿಕೂಟ ಭಾರೀ ಟೀಕೆ-ಟಿಪ್ಪಣಿ ನಡೆಸಿದರೂ, ಬಿಜೆಪಿ ವಿರುದ್ಧ ಮತಗಳವು ಆರೋಪ ಮಾಡಿದ್ದರೂ ಅದು ಮತದಾರರ ಮೇಲೆ ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ಮತಪಟ್ಟಿ ಪರಿಷ್ಕರಣೆ ಮೂಲಕ 65 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿತ್ತು. ಮತಪಟ್ಟಿ ಪರಿಷ್ಕರಣೆ ವಿರುದ್ಧ ನ್ಯಾಯಾಲಯಕ್ಕೂ ಮೊರೆ ಹೋಗಲಾಗಿತ್ತು. ಚುನಾವಣಾ ಆಯೋಗವನ್ನು ಬಳಸಿಕೊಂಡು ಬಿಜೆಪಿ ಈ ರೀತಿ ಮತಗಳವು ಮಾಡುತ್ತಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲೂ ಇದೇ ರೀತಿ ಮಾಡಿಯೇ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ ಮಹಾ ಮೈತ್ರಿಕೂಟ ಗಂಭೀರ ಆರೋಪ ಮಾಡಿತ್ತು. ಆದರೆ, ಈ ಆರೋಪಗಳೆಲ್ಲ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಮಹಾ ಮೈತ್ರಿಕೂಟಕ್ಕೇ ತಿರುಗುಬಾಣವಾದಂತೆ ಕಂಡುಬಂದಿದೆ.

ಯಾಕೆಂದರೆ ಮತಪಟ್ಟಿ ಪರಿಷ್ಕರಣೆ ಬಳಿಕ ಬಿಹಾರದಲ್ಲಿ ದಾಖಲೆಯ ಶೇ.65.40ರಷ್ಟು ಪ್ರಮಾಣದಲ್ಲಿ ಈ ಬಾರಿ ಮತದಾನವಾಗಿದೆ. ವಿಶೇಷವೆಂದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಶೇ.71ರಷ್ಟು ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಇದು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಲಾಭ ಮಾಡಿಕೊಟ್ಟಂತೆ ಕಂಡುಬಂದಿದೆ.

2005ರಲ್ಲಿ ಅಧಿಕಾರಕ್ಕೆ ಬಂದಾಗ ನಿತೀಶ್‌ ಕುಮಾರ್‌ ಅವರು ಮಹಿಳಾಸ್ನೇಹಿ ಯೋಜನೆಗಳಾದ ಪಂಚಾಯತಿಯಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿ, ಸರ್ಕಾರಿ ನೌಕರಿಯಲ್ಲಿ ಶೇ.35ರಷ್ಟು ಮೀಸಲಾತಿಯಂಥ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದರು. ಇದರ ಜತೆ ಸಾರಾಯಿ ನಿಷೇಧ ಕೂಡ ಜಾರಿ ತಂದಿದ್ದರು. ಇದು ನಿತೀಶ್‌ ಸರ್ಕಾರದ ಮೇಲೆ ಮಹಿಳೆಯರ ಒಲವು ಹೆಚ್ಚಿಸಿತ್ತು. ಇದರ ಪರಿಣಾಮ ಎನ್‌ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿತು.

ಹೈಡ್ರೋಜನ್ ಬಾಂಬ್‌ ಕೂಡ ಠುಸ್‌:

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಆಟಂ ಬಾಂಬ್‌, ಹೈಡ್ರೋಜನ್‌ ಬಾಂಬ್‌ ಆರೋಪಗಳನ್ನು ಸಿಡಿಸಿದ್ದರು. ಬಿಜೆಪಿ-ಚುನಾವಣಾ ಆಯೋಗ ವಿರುದ್ಧ ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ಮತಗಳವಿನ ಗಂಭೀರ ಆರೋಪ ಮಾಡಿದ್ದರು. ಬಿಹಾರದಲ್ಲೂ ಮತದಾರರ ವಿಶೇಷ ಪರಿಷ್ಕರಣೆ ಕೂಡ ಇದರ ಭಾಗ ಎಂದೇ ಬಿಂಬಿಸಿದ್ದರು.

ವೋಟ್‌ ಅಧಿಕಾರ್‌ ಯಾತ್ರೆ ವಿಫಲ:

ಇನ್ನು ಬಿಹಾರದಲ್ಲಿ ಚುನಾವಣಾ ಆಯೋಗ-ಬಿಜೆಪಿ ವಿರುದ್ಧ ಮತಗಳವು ಆರೋಪದ ಮೂಲಕ ಆ.7ರಂದು ರಾಹುಲ್ ಗಾಂಧಿ-ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಸೇರಿಕೊಂಡು 16 ದಿನಗಳ ವೋಟ್‌ ಅಧಿಕಾರ್ ಯಾತ್ರೆ ಕೈಗೊಂಡಿದ್ದರು. ಈ ಯಾತ್ರೆ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿದರೂ ಮತಗಳಾಗಿ ಪರಿವರ್ತನೆಯಾಗುವಲ್ಲಿ ವಿಫಲವಾಯಿತು. ವಿಶೇಷ ಮತಪರಿಷ್ಕರಣೆ ವೇಳೆ 65 ಲಕ್ಷ ಮಂದಿ ಹೆಸರು ತೆಗೆದುಹಾಕಿದ್ದು, ಮತಗಳವು ಆರೋಪ ಮತದಾರರ ಮೇಲೆ ಪರಿಣಾಮ ಬೀರಿದೆ ಎಂದೇ ಅನೇಕ ಕಾಂಗ್ರೆಸ್‌ ನಾಯಕರು ಶುಕ್ರವಾರದ ವರೆಗೆ ನಂಬಿದ್ದರು. ಆ ನಂಬಿಕೆಗಳೆಲ್ಲ ಫಲಿತಾಂಶದ ಬಳಿಕ ಉಲ್ಟಾ ಆಗಿದೆ.

PREV

Recommended Stories

‘ಅಸಾಧ್ಯ ಗ್ಯಾರಂಟಿ’ಗೆ ಬಿಹಾರ ಮತದಾರ ಶಾಕ್‌!
ಸಮೀಕ್ಷೆಗಳನ್ನೂ ಮೀರಿ ಗೆದ್ದ ಎನ್‌ಡಿಎ ಮೈತ್ರಿಕೂಟ