ಇಂಫಾಲ್ : ‘ಜನಾಂಗೀಯ ಹಿಂಸಾಚಾರದಿಂದ ಬಳಲುತ್ತಿರುವ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ಭೇಟಿ ನೀಡಬೇಕು. ಸಂತ್ರಸ್ತ ರಾಜ್ಯದ ಜನತೆಗೆ ಸಾಂತ್ವನ ಹೇಳಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಶಾಂತಿ ನೆಲೆಸಲು ಕಾಂಗ್ರೆಸ್ ಎಲ್ಲವನ್ನು ಮಾಡಲಿದೆ ಎಂದು ಹೇಳಿದ್ದಾರೆ.
1 ವರ್ಷದಿಂದ ಜನಾಂಗೀಯ ಸಂಘರ್ಷದಿಂದ ತತ್ತರಿಸಿ 200ಕ್ಕೂ ಹೆಚ್ಚು ಜನ ಅಸುನೀಗಿರುವ ಮಣಿಪುರಕ್ಕೆ ಸೋಮವಾರ ರಾಹುಲ್ ಭೇಟಿ ನೀಡಿದರು ಹಾಗೂ ಹಿಂಸಾಚಾರದಿಂದ ಸ್ಥಳಾಂತರಗೊಂಡ ಜನರಿರುವ ಪರಿಹಾರ ಶಿಬಿರಗಳಿಗೆ ತೆರಳಿ ಸಾಂತ್ವನ ಹೇಳಿದರು. ಅಲ್ಲದೆ, ರಾಜ್ಯಪಾಲೆ ಅನುಸೂಯಾ ಉಕಿ ಅವರನ್ನೂ ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಬಗ್ಗೆ ಚರ್ಚಿಸಿದರು.
ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಣಿಪುರ ಗಲಭೆಯು ಕಂಡು ಕೇಳರಿಯದಂಥದ್ದು. ಹೀಗಾಗಿ ಪ್ರಧಾನಿ ಅವರು ರಾಜ್ಯಕ್ಕೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಬೇಕು. ಮೋದಿ ಭೇಟಿಯು ಅವರಿಗೆ ಸಾಂತ್ವನ ನೀಡುತ್ತದೆ’ ಎಂದು ಹೇಳಿದರು.
‘ಹಿಂಸಾಚಾರಕ್ಕೆ ಒಳಗಾದ ಜನರ ಕಷ್ಟಗಳನ್ನು ಆಲಿಸಲು ಮತ್ತು ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ರಾಜ್ಯಕ್ಕೆ ಬಂದಿದ್ದೇನೆ. ಮಣಿಪುರದಲ್ಲಿ ಶಾಂತಿ ನೆಲೆಸಲು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ವಿರೋಧ ಪಕ್ಷದವನಾದ ನಾನು ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದೇನೆ’ ಎಂದರು.
ರಾಜ್ಯದಲ್ಲಿ ಎಸ್ಟಿ ಮೀಸಲಿಗೆ ಸಂಬಂಧಿಸಿದಂತೆ ಕುಕಿ ಹಾಗೂ ಮೈತೇಯಿ ಸಮಾಜಗಳ ನಡುವೆ ಕಳೆದ ವರ್ಷ ಮೇ ತಿಂಗಳಿನಿಂದ ಸಂಘರ್ಷ ನಡೆದಿದ್ದು, 200 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.