ಕಡಿಮೆ ದರದಲ್ಲಿ ಆಟೋ, ಟ್ಯಾಕ್ಸಿ ಸೇವೆ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತ್‌ ಟ್ಯಾಕ್ಸಿ, ಜ.1ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಸಂಚಾರ ಆರಂಭಿಸಲಿದೆ. ಓಲಾ, ಉಬರ್‌, ರ್‍ಯಾಪಿಡೋಗಳಿಗೆ ಪರ್ಯಾಯ ಆಯ್ಕೆಯಾಗಲಿದೆ.

ನವದೆಹಲಿ : ಕಡಿಮೆ ದರದಲ್ಲಿ ಆಟೋ, ಟ್ಯಾಕ್ಸಿ ಸೇವೆ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತ್‌ ಟ್ಯಾಕ್ಸಿ, ಜ.1ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಸಂಚಾರ ಆರಂಭಿಸಲಿದೆ. ಓಲಾ, ಉಬರ್‌, ರ್‍ಯಾಪಿಡೋಗಳಿಗೆ ಪರ್ಯಾಯ ಆಯ್ಕೆಯಾಗಲಿದೆ.ದೇಶದ ಮೊದಲ ಸಹಕಾರಿ ಟ್ಯಾಕ್ಸಿ ಆ್ಯಪ್‌ ಆಗಿರುವ ಭಾರತ್‌ ಟ್ಯಾಕ್ಸಿ ಕೇಂದ್ರ ಸಚಿವ ಅಮಿತ್‌ ಶಾ ಅವರ ಸಹಕಾರ ಸಚಿವಾಲಯದ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಆ್ಯಪ್‌ನ್ನು ಸಹಕಾರ ಟ್ಯಾಕ್ಸಿ ಕೋ ಅಪರೇಟಿವ್‌ ಲಿಮಿಟೆಡ್‌ ನಿರ್ವಹಣೆ ಮಾಡಲಿದೆ. ಇದು ಭಾರತದ ಮೊದಲ ಸಹಕಾರ ತತ್ವದ ಟ್ಯಾಕ್ಸಿ ಸೇವೆ ಎನ್ನಿಸಿಕೊಂಡಿದೆ.

ಕಾರ್ಯನಿರ್ವಹಣೆ ಹೇಗೆ?:

ಆಂಡ್ರಾಯ್ಡ್‌ , ಐಒಎಸ್‌ನಲ್ಲಿ ಈ ಆ್ಯಪ್‌ನಲ್ಲಿ ಭಾರತ್ ಟ್ಯಾಕ್ಸಿ ಸೇವೆ ಲಭ್ಯವಿರಲಿದೆ. ಪ್ರಯಾಣಿಕರು ತಾವಿರುವ ಜಾಗ, ತಲುಪಬೇಕಿರುವ ಜಾಗವನ್ನು ನೋಂದಾಯಿಸಿದರೆ ಚಾಲಕರು ಪ್ರಯಾಣಿಕರಿದ್ದ ಜಾಗಕ್ಕೆ ಬಂದು ಕರೆದುಕೊಂಡು ಹೋಗುತ್ತಾರೆ. ಇದರಲ್ಲಿ ಕಾರು, ಆಟೋ, ಬೈಕ್ ಸೇವೆಗಳು ಲಭ್ಯ.

ಶೇ.80 ಹಣ ಚಾಲಕರಿಗೆ: 

ಖಾಸಗಿ ಸಂಚಾರಿ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಓಲಾ, ಉಬರ್, ರ್‍ಯಾಪಿಡೋಗಳ ರೀತಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಆದರೆ ಈ ಆ್ಯಪ್‌ಗಳು ಸರ್ಜ್‌ ಪ್ರೈಸಿಂಗ್‌ ಇಡುತ್ತವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಭಾರತ್‌ ಟ್ಯಾಕ್ಸಿ ಸೇವೆ ಆರಂಭಿಸಿದ್ದು, ಸರ್ಜ್‌ ಪ್ರೈಸಿಂಗ್ ಇರುವುದಿಲ್ಲ.

ಇದರಲ್ಲಿ ಶೇ.80ರಷ್ಟು ಶುಲ್ಕ ಚಾಲಕರಿಗೆ ಸಿಗಲಿದೆ. ಈಗಾಗಲೇ ದಿಲ್ಲಿಯ 56,000ಕ್ಕೂ ಹೆಚ್ಚು ಚಾಲಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.

ಶೀಘ್ರ ಇನ್ನೂ 20 ನಗರದಲ್ಲಿ:

ದೆಹಲಿ ಬಳಿಕ ಗುಜರಾತಿನ ರಾಜ್‌ಕೋಟ್‌ನಲ್ಲಿಯೂ ಪ್ರಾಯೋಗಿಕ ಪರೀಕ್ಷೆ ನಡೆದಿದ್ದು ಫೆ.1ರಿಂದ ಆರಂಭವಾಗುವ ಸಾಧ್ಯತೆಯಿದೆ. ಮಾತ್ರವಲ್ಲದೇ. 20ಕ್ಕೂ ಹೆಚ್ಚು ನಗರಗಳಲ್ಲಿ ಆರಂಭಕ್ಕೆ ಕೇಂದ್ರ ಚಿಂತನೆ ನಡೆಸಿದೆ.