ಇಥಿಯೋಪಿಯಾ ಪ್ರವಾಸವನ್ನು ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನದ ಭೇಟಿಗಾಗಿ ಅರಬ್‌ ದೇಶವಾದ ಒಮಾನ್‌ಗೆ ಬುಧವಾರ ಸಂಜೆ ಬಂದಿಳಿದಿದ್ದಾರೆ. ಗುರುವಾರ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲಿದೆ.

 ಮಸ್ಕತ್‌: ಇಥಿಯೋಪಿಯಾ ಪ್ರವಾಸವನ್ನು ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನದ ಭೇಟಿಗಾಗಿ ಅರಬ್‌ ದೇಶವಾದ ಒಮಾನ್‌ಗೆ ಬುಧವಾರ ಸಂಜೆ ಬಂದಿಳಿದಿದ್ದಾರೆ. ಗುರುವಾರ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲಿದೆ. ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು 2023ರ ನವೆಂಬರ್‌ನಲ್ಲಿ ಆರಂಭವಾಗಿ, ಈ ವರ್ಷದಲ್ಲಿ ಅಂತ್ಯಗೊಂಡಿವೆ. ಇದಕ್ಕೆ ಗುರುವಾರ ಮೋದಿಯವರ ಸಮ್ಮುಖದಲ್ಲಿ ಅಧಿಕೃತ ಮುದ್ರೆ ಬೀಳಲಿದ್ದು, ಈ ಪ್ರಯುಕ್ತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಒಮಾನ್‌ ತಲುಪಿದ್ದಾರೆ.

ಒಮಾನ್‌ ಪ್ರಮುಖ ತೈಲ ಉತ್ಪಾದಕ ದೇಶವಾಗಿದೆ.

ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಲ್ಲಿ ಒಮಾನ್ ಭಾರತಕ್ಕೆ 3ನೇ ಅತಿದೊಡ್ಡ ರಫ್ತು ತಾಣವಾಗಿದ್ದು, ಎರಡೂ ದೇಶಗಳ ನಡುವೆ 2024-25ರಲ್ಲಿ 94 ಸಾವಿರ ಕೋಟಿ ರು .(ಭಾರತದಿಂದ 36 ಸಾವಿರ ಕೋಟಿ ರು. ರಫ್ತು, 59 ಸಾವಿರ ಕೋಟಿ ರು. ಆಮದು) ವಹಿವಾಟು ನಡೆದಿದೆ. ಭಾರತ ಒಮಾನ್‌ಗೆ ಖನಿಜ ಇಂಧನ, ರಾಸಾಯನಿಕ, ಅಮೂಲ್ಯ ಲೋಹ, ಕಬ್ಬಿಣ, ಉಕ್ಕು, ಧಾನ್ಯ, ಹಡಗು, ದೋಣಿ, ವಿದ್ಯುತ್ ಯಂತ್ರೋಪಕರಣ, ಚಹಾ, ಕಾಫಿ, ಮಸಾಲೆ, ಉಡುಪು ಮತ್ತು ಆಹಾರ ವಸ್ತುಗಳನ್ನು ರಫ್ತು ಮಾಡುತ್ತದೆ.

ದಿಲ್ಲೀಲಿನ್ನು ಬಿಎಸ್‌-4 ವಾಹನಕ್ಕೆ ಮಾತ್ರ ಅನುಮತಿ: ಸುಪ್ರೀಂ 

 ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಿನೇದಿನೇ ಕಳಪೆಯಾಗುತ್ತಿರುವ ವಾಯುಗುಣಮಟ್ಟ ಸುಧಾರಿಸುವ ಸಲುವಾಗಿ ಸುಪ್ರೀಂ ಕೋರ್ಟ್‌, ಹೆಚ್ಚು ಮಾಲಿನ್ಯಕಾರಕ ವಾಹನಗಳ ಬಳಕೆಗೆ ತಡೆ ಹಾಕಲು ಆದೇಶಿಸಿದೆ. ಇದರಡಿ, ವಾಹನ ಹೊರಸೂಸುವಿಕೆ ಮಾನದಂಡಗಳ 4ನೇ ಹಂತಕ್ಕಿಂತ (ಬಿಎಸ್‌-4) ಕೆಳಗಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿಸಿದೆ.

ಈ ಮೊದಲು, ಹೆಚ್ಚು ಹೊಗೆ ಹೊರಸೂಸುಉವ 10 ವರ್ಷ ಹಳೆಯ ಡೀಸೆಲ್‌ ವಾಹನ ಮತ್ತು 15 ವರ್ಷ ಹಳೆಯ ಪೆಟ್ರೋಲ್‌ ವಾಹನಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಅದನ್ನೀಗ ಬಿಎಸ್‌-4 (ಭಾರತ್ ಸ್ಟೇಜ್‌-4) ಮಾಲಿನ್ಯ ಮಾನದಂಡ ಹೊರತುಪಡಿಸಿ ಉಳಿದೆಲ್ಲ ಎಲ್ಲಾ ವಾಹನಗಳಿಗೆ ವಿಸ್ತರಿಸಲಾಗಿದೆ. ಇದರಿಂದ, ಬಿಎಸ್‌-3 ಮಾಲಿನ್ಯ ಮಾನದಂಡ ಹೊಂದಿರುವ ಯಾವುದೇ ವಾಹನ ಸಂಚಾರ ಕಂಡುಬಂದಲ್ಲಿ, ಅವುಗಳ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾಗಿದೆ. 

9 ಟೋಲ್‌ ನಾಕಾ ಬಂದ್‌ ಮಾಡಿ:

ಇದೇ ವೇಳೆ, ದಿಲ್ಲಿ ಹೊರವಲಯದಲ್ಲಿ 9 ಟೋಲ್‌ ಪ್ಲಾಜಾ ಇವೆ. ಇವು ಸಂಚಾರ ದಟ್ಟಣೆಗೆ ಕಾರಣವಾಗಿ ಮಾಲಿನ್ಯ ಹೆಚ್ಚುತ್ತಿದೆ. ಅವನ್ನು ಬಂದ್‌ ಮಾಡುವ ಬಗ್ಗೆ ಪರಿಶೀಲಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. 

ಶೇ.50ರಷ್ಟು ವರ್ಕ್‌ ಫ್ರಂ ಹೋಂ:

ರಸ್ತೆಗಳಲ್ಲಿ ವಾಹನ ದಟ್ಟಣೆ ತಡೆಗಟ್ಟಲು ಶೇ.50ರಷ್ಟು ನೌಕರರಿಗೆ ವರ್ಕ್‌ ಫ್ರಂ ಹೋಂಗೆ ಅವಕಾಶ ಕಲ್ಪಿಸಬೇಕು ಎಂದು ದಿಲ್ಲಿ ಸರ್ಕಾರ ಎಲ್ಲ ಖಾಸಗಿ ಕಂಪನಿಗಳಿಗೆ ಸೂಚಿಸಿದೆ. 

ಚೀನಾ ಸಲಹೆ:

ಈ ನಡುವೆ, ದಿಲ್ಲಿ ಚೀನಾ ದೂತಾವಾಸದ ವಕ್ತಾರೆ ಯು ಜಿಂಗ್‌ ಟ್ವೀಟ್‌ ಮಾಡಿ, ‘ಬೀಜಿಂಗ್‌ ಕೂಡ ದಿಲ್ಲಿ ರೀತಿ ಮಾಲಿನ್ಯ ಅನುಭವಿಸುತ್ತಿತ್ತು. ಹಳೆಯ ವಾಹನ ನಿಷೇಧ, ಪಾಳು ಬಿದ್ದ ಜಾಗದಲ್ಲಿ ಗಿಡ ನೆಡುವಿಕೆ, ಮಾಲಿನ್ಯಕಾರಕ ಕಾರ್ಖಾನೆಗಳನ್ನು ಊರಿನಿಂದ ಆಚೆ ಶಿಫ್ಟ್ ಮಾಡುವುದು, ಎಲೆಕ್ಟ್ರಿಕ್‌ ವಾಹನ ಹೆಚ್ಚಳ- ಈ ರೀತಿ ಕ್ರಮ ಕೈಗೊಂಡು ಅಲ್ಲಿ ಮಾಲಿನ್ಯ ನಿಯಂತ್ರಣ ಮಾಡಲಾಗಿದೆ. ದಿಲ್ಲಿ ಕೂಡ ಇದನ್ನೇ ಅನುಸರಿಸಲಿ’ ಎಂದು ಸಲಹೆ ನೀಡಿದ್ದಾರೆ.

2026ರ ಅಂತ್ಯಕ್ಕೆ ಉಪಗ್ರಹ ಆಧರಿತ ಟೋಲ್‌ ಸಂಗ್ರಹ: ಸಚಿವ ಗಡ್ಕರಿ ಘೋಷಣೆ

ನವದೆಹಲಿ: ‘ಟೋಲ್‌ ಪ್ಲಾಜಾಗಳಲ್ಲಿ ಸುದೀರ್ಘ ಕಾಯುವಿಕೆಯನ್ನು ತಪ್ಪಿಸಲು 2026ರ ಅಂತ್ಯದ ವೇಳೆಗೆ ಉಪಗ್ರಹ ಆಧರಿತ, ಎಐ ಬೆಂಬಲಿತ ಟೋಲ್‌ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಘೋಷಿಸಿದ್ದಾರೆ. ಇದರಿಂದ ಸರ್ಕಾರದ ಆದಾಯವೂ ಹೆಚ್ಚಲಿದೆ ಎಂದು ಹೇಳಿದ್ದಾರೆ. 

ರಾಜ್ಯಸಭೆಯ ಶೂನ್ಯ ಸಭೆಯಲ್ಲಿ ಮಾತನಾಡಿ, ‘ಎಐ ಹಾಗೂ ಫಾಸ್ಟ್‌ಟ್ಯಾಗ್‌ ಸಹಾಯದೊಂದಿಗೆ ಉಪಗ್ರಹವನ್ನು ಬಳಸಿ ವಾಹನಗಳ ನಂಬರ್‌ ಪ್ಲೇಟ್‌ ಪರಿಶೀಲಿಸಲಾಗುವುದು. ಇದರಿಂದ ಟೋಲ್‌ನಲ್ಲಿ ಕಾಯುವಿಕೆ ಅವಧಿಯನ್ನು ಶೂನ್ಯಕ್ಕೆ ಇಳಿಯಲಿದೆ. ಈ ಹೊಸ ವ್ಯವಸ್ಥೆಯಿಂದ 1,500 ಕೋಟಿ ರು. ಮೌಲ್ಯದ ಇಂಧನ ಉಳಿತಾಯವಾಗಲಿದೆ. ಜತೆಗೆ, ಸರ್ಕಾರದ ಬೊಕ್ಕಸಕ್ಕೆ 6,000 ಕೋಟಿ ರು. ಹರಿದುಬರಲಿದೆ’ ಎಂದರು.ಇದೇ ವೇಳೆ ಗಡ್ಕರಿ, ಮೊದಲಿದ್ದ 3ರಿಂದ 10 ನಿಮಿಷದ ಕಾಯುವಿಕೆ ಅವಧಿಯು ಫಾಸ್ಟ್‌ಟ್ಯಾಗ್‌ನಿಂದಾಗಿ 1 ನಿಮಿಷಕ್ಕೆ ಇಳಿಕೆಯಾಗಿದ್ದನ್ನೂ ಪ್ರಸ್ತಾಪಿಸಿ, ಇದರಿಂದ ಸರ್ಕಾರದ ಆದಾಯ 5,000 ಕೋಟಿ ರು.ನಷ್ಟು ಹೆಚ್ಚಿದೆ ಎಂದರು.

ಬೆಂಗ್ಳೂರಲ್ಲಿ ಬೆಳ್ಳಿ ಬೆಲೆ ₹2.13 ಲಕ್ಷ: ಸಾರ್ವಕಾಲಿಕ ದಾಖಲೆ 

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಪರ್ವ ಮುಂದುವರಿದಿದ್ದು, ಬುಧವಾರ ಬೆಳ್ಳಿ ಬೆಲೆ ಕೆಜಿಗೆ ದಾಖಲೆಯ 2.13 ಲಕ್ಷ ರು. ತಲುಪಿದೆ. ಮಂಗಳವಾರ ಇದು 2.09 ಲಕ್ಷ ರು. ಇತ್ತು. ಒಂದೇ ದಿನ 4,000 ರು. ಏರಿಕೆಯಾಗಿ ಬುಧವಾರ ಸಾರ್ವಕಾಲಿಕ ದಾಖಲೆ ತಲುಪಿದೆ.ಇನ್ನು ಮಂಗಳವಾರ 10 ಗ್ರಾಂಗೆ 1,26,380 ರು. ಇದ್ದ ಆಭರಣ ಚಿನ್ನದ (22 ಕ್ಯಾರಟ್‌) ಬೆಲೆ ಬುಧವಾರ 1,27,000 ರು.ಗೆ ಏರಿಕೆಯಾಗಿದೆ. 1,37,870 ರು. ಇದ್ದ ಶುದ್ಧ ಚಿನ್ನದ (24 ಕ್ಯಾರಟ್‌) ಬೆಲೆ 1,38,550 ರು.ಗೆ ತಲುಪಿದೆ.