ಭಾರತ ಸಾಧು ಸಂತರ ಭವ್ಯ ಪರಂಪರೆಯನ್ನು ಹೊಂದಿರುವ, ಆಧ್ಯಾತ್ಮಿಕತೆ ತುಂಬಿರುವ ದೇಶವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ತಿಳಿಸಿದರು.

ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 110ನೇ ಜಯಂತಿ ಮಹೋತ್ಸವದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅಭಿಮತ । ಸಮಾಜಕ್ಕೆ ಕೊಡುಗೆ ನೀಡುವಂತರಾಗಿ

ಕನ್ನಡಪ್ರಭ ವಾರ್ತೆ, ಹನೂರು

ಭಾರತ ಸಾಧು ಸಂತರ ಭವ್ಯ ಪರಂಪರೆಯನ್ನು ಹೊಂದಿರುವ, ಆಧ್ಯಾತ್ಮಿಕತೆ ತುಂಬಿರುವ ದೇಶವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾoಗಣದಲ್ಲಿ ಹಮ್ಮಿಕೊಂಡಿದ್ದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ಮಾತನಾಡಿದರು.

ಈ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಸಹ ಧಾರ್ಮಿಕತೆ ತುಂಬಿ ತುಳುಕುತ್ತಿದೆ. ಜಗತ್ತನ್ನು ಸೃಷ್ಟಿ ಮಾಡಿದ ಭಗವಂತನ ಮೇಲೆ ಅಪಾರವಾದ ಭಕ್ತಿ ಇದೆ. ಇಡೀ ದೇಶದಲ್ಲಿ ಕಣ್ಣಿಗೆ ಕಾಣುವ ಅನೇಕ ವೈಜ್ಞಾನಿಕ ಸಂಶೋಧನೆಗಳನ್ನು ವಿಜ್ಞಾನಿಗಳು ಮಾಡಿದರೆ ಅಂತರಂಗದ ಸಂಶೋಧನೆಯನ್ನು ಸಾಧು ಸಂತರು ಮಾಡಿದ್ದಾರೆ.

ರಾಜೇಂದ್ರ ಶ್ರೀಗಳು ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಆಯಾಯ ಕಾಲಮಾನಕ್ಕೆ ಬೇಕಾದಂತಹ ವ್ಯವಸ್ಥೆಗಳನ್ನು ನಾಡಿನುದ್ದಕ್ಕೂ ಮಠಮಾನ್ಯಗಳು ಮಾಡುತ್ತಲೇ ಬಂದಿವೆ. ಸುತ್ತೂರು ಮಠ, ಸಿದ್ದಗಂಗಾ ಮಠ ಹಾಗೂ ಇನ್ನಿತರ ಮಠಗಳು ಸಮಾಜದ ಉನ್ನತಿಗಾಗಿ ಮೀಸಲಿರುವಂತಹ ಮಠಮಾನ್ಯಗಳಾಗಿವೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪಟ್ಟಾಭಿಷೇಕ ಪಡೆದ ರಾಜೇಂದ್ರ ಶ್ರೀಗಳು. ಮೂಲ ಸೌಲಭ್ಯಗಳೆ ಇಲ್ಲದಂತಹ ದಿನಮಾನಗಳಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣವನ್ನ ಕೊಟ್ಟಂತಹ ಮಹಾನ್ ತ್ಯಾಗಿ ಎಂದರು.

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಮಹಾತ್ಮರ ನೀಡಿರುವ ಮಾರ್ಗ ನಮ್ಮ ಬದುಕಿಗೆ ಯಾವಾಗಲು ಬೆಳಕಾಗಿದೆ ಎಂದರೆ ತಪ್ಪಾಗಲಾರದು. ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ರಾಂತಿ ಉಂಟು ಮಾಡಿದ ಸಂಸ್ಥೆ ಗಳಲ್ಲಿ ಜೆ ಎಸ್ ಎಸ್ ಸಂಸ್ಥೆ ಮೊದಲ ಸಾಲಿನಲ್ಲಿ ಇರುತ್ತದೆ.ಡಾ ರಾಜೇಂದ್ರ ಮಹಾಸ್ವಾಮಿಗಳು ಅತ್ಯಂತ ಮೃದು ಸ್ವಭಾವಿ ಈ ನಾಡಿಗೆ ಕಷ್ಟದ ಹಾದಿಯಲ್ಲಿ ಬೆಳಕನ್ನು ಕೊಟ್ಟವರು ಸುತ್ತೂರು ಶ್ರೀ ಗಳು. ಮಹಾತ್ಮರು ಪರೋಪಕಾರಕ್ಕಾಗಿ ಹುಟ್ಟಿದವರು. ಇವರು ಹಾಕಿ ಕೊಟ್ಟಂತಹ ಮಾರ್ಗದಲ್ಲಿ ನಾವೆಲ್ಲರೂ ಸಹ ನಡೆದುಕೊಂಡು ಹೋಗಬೇಕಾಗಿದೆ ಎಂದರು.

ಶಾಸಕ ಎಂ. ಆರ್‌. ಮಂಜುನಾಥ್ ಮಾತನಾಡಿ, ಇಡೀ ಸಮಾಜದಲ್ಲೇ ಜೆ ಎಸ್ ಎಸ್ ಸಂಸ್ಥೆಗಳಿಗೆ ಸರಿಸಾಟಿ ಯಾವುದು ಇಲ್ಲ ಕಾರಣ ಇಷ್ಟೇ ಇಡೀ ಜಗತ್ತಿನಲ್ಲಿ ಇವರು ಶಿಕ್ಷಣ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ಅದರಲ್ಲೂ ನಮ್ಮ ಹನೂರು ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಉಂಟು ಮಾಡುವ ಮೂಲಕ ನಮ್ಮ ಹನೂರು ತಾಲೂಕಿನ ಜನರು ಪ್ರಜ್ಞಾವಂತರಾಗಲು ಸಾಧ್ಯವಾಗಿದೆ.ಇದೆ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದು ಇಂದು ನೌಕರರಾಗಿರುವ ಎಲ್ಲರೂ ಸಹ ಸಮಾಜಕ್ಕೆ ಒಂದೊಂದು ಕೊಡುಗೆಯನ್ನು ನೀಡಬೇಕು.

ಬಹಳ ಮುಖ್ಯವಾಗಿ ಹನೂರು ತಾಲೂಕಿನ ಜೀವನಾಡಿ ಕಾವೇರಿ ನದಿಯಿಂದ ನೀರು ತರಲು ನಾನು ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ರೈತರು ನಡೆಸುತ್ತಿರುವ ಧರಣಿ ಕೈಬಿಡಬೇಕು ಎಂದರು. ಮಾಜಿ ಶಾಸಕ ನರೇಂದ್ರ ಮಾತನಾಡಿ, ತಾಲೂಕಿನಲ್ಲಿ ರಾಜೇಂದ್ರ ಮಹಾಸ್ವಾಮಿಗಳ ನೂರತ್ತನೆ ದಶಮಾನೋತ್ಸವ ಕಾರ್ಯಕ್ರಮ ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಸಮಾಜದ ಸೇವೆಗೆ ತಮ್ಮನ್ನು ತಾವು ಮುಡಿಪಾಗಿದ್ದರು. ಈ ಸಮಾಜಕ್ಕೆ ಉತ್ತಮ ಸೇವೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕಿ ಪರಿಮಳ ನಾಗಪ್ಪ, ಗುರುಮಲ್ಲೇಶ್ವರ ಮಠದ ಮಹಾಂತಸ್ವಾಮಿ, ಸಾಲೂರು ಮಠದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಭಗೀರಥ ಮಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮುಮ್ಮಡಿ ಶಿವರುದ್ರ ಸ್ವಾಮೀಜಿ, ಮಾಜಿ ಶಾಸಕರಾದ ಬಾಲರಾಜು, ಎನ್. ಮಹೇಶ್, ನಿರಂಜನ್ ಕುಮಾರ್, ನರೇಂದ್ರ, ಪರಿಮಳ ನಾಗಪ್ಪ, ಸಮಾಜ ಸೇವಕರಾದ ನಿಶಾಂತ್, ದತ್ತೇಶ್ ಕುಮಾರ್, ಜನಧ್ವನಿ ವೆಂಕಟೇಶ್, ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು,ಸಾರ್ವಜನಿಕರು ಇದ್ದರು.

-----

13ಸಿಎಚ್ಎನ್‌12

ಹನೂರಿನಲ್ಲಿ ಶಿವರಾತ್ರಿ ರಾಜೇಂದ್ರ ಶ್ರೀ ದಶಮಾನೋತ್ಸವ ಕಾರ್ಯಕ್ರಮವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ ಸೇರಿದಂತೆ ಗಣ್ಯರು ಉದ್ಘಾಟನೆ ಮಾಡಿದರು.