ಜಗತ್ತಿನ ಅತಿದೊಡ್ಡ ರೈಲ್ವೆ ಸುಧಾರಣೆಗೆ ಮೋದಿ ಚಾಲನೆ

KannadaprabhaNewsNetwork |  
Published : Feb 27, 2024, 01:31 AM ISTUpdated : Feb 27, 2024, 07:59 AM IST
ಮೋದಿ ಚಾಲನೆ | Kannada Prabha

ಸಾರಾಂಶ

ಕರ್ನಾಟಕದ 34, ದೇಶದ 554 ನಿಲ್ದಾಣಗಳ ಅಭಿವೃದ್ಧಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. 41000 ಕೋಟಿ ಮೌಲ್ಯದ 2000 ರೈಲ್ವೆ ಕಾಮಗಾರಿಗಳನ್ನು ಶುರು ಮಾಡಲಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶ್ವದ ಅತಿದೊಡ್ಡ ರೈಲ್ವೆ ಸುಧಾರಣೆ (ರೈಲ್ವೆ ಮರುನಿರ್ಮಾಣ) ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಪ್ರಕಾರ, ಕರ್ನಾಟಕದ 34 ಸೇರಿದಂತೆ ದೇಶಾದ್ಯಂತ 554 ರೈಲ್ವೆ ನಿಲ್ದಾಣಗಳು ಮರು ಅಭಿವೃದ್ಧಿ ಹೊಂದಲಿದ್ದು, 1500 ರೈಲ್ವೆ ಮೇಲ್ಸೇತುವೆ-ಕೆಳಸೇತುವೆಗಳ ನಿರ್ಮಾಣ ಹಾಗೂ ಮರು ಅಭಿವೃದ್ಧಿ ಕಾರ್ಯ ನಡೆಯಲಿದೆ. 

ಒಟ್ಟಾರೆ ಸುಮಾರು 41 ಸಾವಿರ ಕೋಟಿ ರು. ಮೌಲ್ಯದ 2000 ರೈಲ್ವೆ ಯೋಜನೆಗಳಿಗೆ ಅವರು ಶ್ರೀಕಾರ ಹಾಕಿದ್ದಾರೆ.ಯೋಜನೆಗಳಿಗೆ ವರ್ಚುವಲ್‌ ವಿಧಾನದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಕಳೆದ 10 ವರ್ಷಗಳಲ್ಲಿ ರಾಷ್ಟ್ರ ಅಭಿವೃದ್ಧಿ ಹೊಂದುತ್ತಿರುವ ವೇಗವನ್ನು ಕಂಡು ಸ್ವತಃ ಭಾರತೀಯರೇ ಅಚ್ಚರಿಗೊಳಗಾಗಿದ್ದಾರೆ. 

ಅಲ್ಲದೆ ಜೂನ್‌ ತಿಂಗಳಿನಿಂದ ನಮ್ಮ ಸರ್ಕಾರದ ಮೂರನೇ ಅವಧಿ ಆರಂಭವಾಗಲಿದೆ’ ಎನ್ನುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅಗಾಧ ಬದಲಾವಣೆ:‘ಕಳೆದ 10 ವರ್ಷಗಳಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಗಾಧ ಬದಲಾವಣೆಯಾಗಿದೆ. 

ರಾಷ್ಟ್ರದ ಜನರು ರೈಲುಗಳ ಮೂಲಕ ಆರಾಮ ಮತ್ತು ಸುಖಕರ ಪ್ರಯಾಣ ಮಾಡಲು ಸಾಧ್ಯವಾಗಿದೆ. ರೈಲ್ವೆ ಇಲಾಖೆಯನ್ನು ರಾಜಕಾರಣಿಗಳಿಂದ ಮುಕ್ತಗೊಳಿಸಿ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. 

ಈ ಅವಧಿಯಲ್ಲಿ ರಾಷ್ಟ್ರದ ಜನರು ಕಟ್ಟುತ್ತಿರುವ ಪ್ರತಿಯೊಂದು ಪೈಸೆಯೂ ಪೋಲಾಗದೆ ಅಭಿವೃದ್ಧಿ ಯೋಜನೆಗೆ ಬಳಸುತ್ತಿರುವುದೇ ಭಾರತ ಇಷ್ಟು ಅಗಾಧ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ’ ಎಂದು ತಿಳಿಸಿದರು.

ಅಲ್ಲದೆ, ‘ನಮ್ಮ ಯೋಜನೆಗಳು ಮುಂದಿನ ದಿನಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಗೆ ನೆರವಾಗಲಿವೆ. ಇದರಿಂದಾಗಿ ಈಗ ಶಾಲೆ-ಕಾಲೇಜುಗಳಲ್ಲಿ ಓದುವವರಿಗೆ ರೈಲ್ವೆಯಲ್ಲಿ ಉದ್ಯೋಗ ಪರ್ವವೇ ಸೃಷ್ಟಿಯಾಗಲಿದೆ’ ಎಂದರು.

ವಿಶ್ವದ ಅತಿದೊಡ್ಡ ಯೋಜನೆ ಹೇಗೆ?
‘ದೇಶಾದ್ಯಂತ 554 ರೈಲ್ವೆ ನಿಲ್ದಾಣ ಮತ್ತು 1500 ಮೇಲ್ಸೇತುವೆ-ಕೆಳಸೇತುವೆಗಳ ಪುನರಭಿವೃದ್ಧಿಗೆ ಮೋದಿ ಚಾಲನೆ ನೀಡಿದ್ದಾರೆ. ಇದು ವಿಶ್ವದಲ್ಲೇ ಅತಿದೊಡ್ಡ ರೈಲ್ವೆ ಅಭಿವೃದ್ಧಿ ಯೋಜನೆಯಾಗಿದೆ. 

ಕಾಂಗ್ರೆಸ್‌ ಅವಧಿಯಲ್ಲಿ ದಿನಕ್ಕೆ ಸರಾಸರಿ 4 ಕಿ.ಮೀ ರೈಲ್ವೆ ಹಳಿ ಮತ್ತು ವರ್ಷಕ್ಕೆ 400 ಸೇತುವೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಿನಕ್ಕೆ ಸರಾಸರಿ 15 ಕಿ.ಮೀ ರೈಲ್ವೆ ಹಳಿ ಮತ್ತು ವರ್ಷಕ್ಕೆ 1000 ಸೇತುವೆಗಳನ್ನು ನಿರ್ಮಿಸಿ ಕಾಂಗ್ರೆಸ್‌ ಸರ್ಕಾರ 60 ವರ್ಷದಲ್ಲಿ ಮಾಡಿದ್ದನ್ನು ಬಿಜೆಪಿ 10 ವರ್ಷದಲ್ಲಿ ಮಾಡಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ