ನವದೆಹಲಿ: ಮುಂಬೈ ಮತ್ತು ಅಹಮದಾಬಾದ್ ನಡುವೆ ನಿರ್ಮಾಣವಾಗುತ್ತಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ದೇಶದಲ್ಲೇ ಮೊದಲ ಬಾರಿ ಅತ್ಯಾಧುನಿಕ ಜೆ-ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಹಳಿ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.
ಸಾಮಾನ್ಯ ರೈಲ್ವೆ ಹಳಿಯಲ್ಲಿರುವಂತೆ ಜಲ್ಲಿಕಲ್ಲು ಹಾಗೂ ಅಡ್ಡಕಂಬಗಳ ಮೇಲೆ ಕಬ್ಬಿಣದ ಹಳಿಯನ್ನು ಅಳವಡಿಸುವ ಬದಲು ಈ ವ್ಯವಸ್ಥೆಯಲ್ಲಿ ರೆಡಿಮೇಡ್ ಕಾಂಕ್ರೀಟ್ ಸ್ಲ್ಯಾಬ್ ಮೇಲೆ ಹಳಿ ಅಳವಡಿಸಲಾಗುತ್ತದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ದೇಶದ ಮೊದಲ ಬ್ಯಾಲೆಸ್ಟ್‌ಲೆಸ್ ಹಳಿಯ ವಿಡಿಯೋ ಹಂಚಿಕೊಂಡಿದ್ದಾರೆ. ‘ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ರೈಲು ಸಾಗಿದರೆ ಅದರ ಒತ್ತಡ ತಡೆದುಕೊಳ್ಳುವ ರೀತಿಯಲ್ಲಿ ಈ ಹಳಿ ನಿರ್ಮಿಸಲಾಗುತ್ತಿದೆ.
ಈಗಾಗಲೇ 295.5 ಕಿ.ಮೀ. ಮಾರ್ಗ ಸಿದ್ಧವಾಗಿದೆ. 153 ಕಿ.ಮೀ. ಉದ್ದದ ವಯಾಡಕ್ಟ್‌ಗಳ ನಿರ್ಮಾಣ ಪೂರ್ಣಗೊಂಡಿದೆ’ ಎಂದು ‘ಎಕ್ಸ್’ನಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬ್ಯಾಲೆಸ್ಟ್‌ಲೆಸ್ ಹಳಿ ಅಥವಾ ಸ್ಲ್ಯಾಬ್ ಹಳಿ ಜನಪ್ರಿಯತೆ ಪಡೆಯುತ್ತಿದೆ. ಅಲ್ಲಿ ಹೈಸ್ಪೀಡ್ ರೈಲಿಗೆ ಈ ಹಳಿಯನ್ನೇ ಅಳವಡಿಸಲಾಗುತ್ತಿದೆ. ಭಾರತದಲ್ಲಿ ಮೊದಲ ಬಾರಿ ಈ ರೀತಿಯ ಜೆ-ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಹಳಿಯನ್ನು ಬುಲೆಟ್ ರೈಲ್ವೆ ಯೋಜನೆಯಲ್ಲಿ ನಿರ್ಮಿಸಲಾಗುತ್ತಿದೆ.
ಪ್ರಿ-ಕಾಸ್ಟ್ ಸ್ಲ್ಯಾಬ್‌ಗಳನ್ನು ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿರುವ ಎರಡು ಘಟಕಗಳಲ್ಲಿ ನಿರ್ಮಾಣ ಮಾಡಿ, ಹಳಿಗೆ ಅಳವಡಿಸಲಾಗುತ್ತಿದೆ ಎಂದು ಹೈಸ್ಪೀಡ್ ರೈಲ್ವೆ ನಿಗಮ ತಿಳಿಸಿದೆ.
ದೇಶದ ಮೊದಲ 508 ಕಿ.ಮೀ. ಉದ್ದದ ಬುಲೆಟ್ ರೈಲು ಯೋಜನೆಯನ್ನು ಮಹಾರಾಷ್ಟ್ರದ ಮುಂಬೈ ಹಾಗೂ ಗುಜರಾತ್‌ನ ಅಹಮದಾಬಾದ್ ನಡುವೆ 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರ ಇದಕ್ಕೆ 10,000 ಕೋಟಿ ರು. ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರ ಸರ್ಕಾರ ತಲಾ 5000 ಕೋಟಿ ರು.ಗಳನ್ನು ನೀಡಿವೆ. ಉಳಿದ ಹಣವನ್ನು ಜಪಾನ್‌ನಿಂದ ಶೇ.0.1ರಷ್ಟು ಬಡ್ಡಿಗೆ ಸಾಲದ ರೂಪದಲ್ಲಿ ತರಲಾಗಿದೆ.