ಭಾರತ ವಿರೋಧಿ ಅಮೆರಿಕ ಉದ್ಯಮಿ ಜಾರ್ಜ್‌ ಸೊರೋಸ್ ವಿವಾದ : ಮತ್ತೆ ಸಂಸತ್‌ ಕಲಾಪ ಭಂಗ

KannadaprabhaNewsNetwork |  
Published : Dec 10, 2024, 12:31 AM ISTUpdated : Dec 10, 2024, 07:56 AM IST
ಸಂಸತ್ತು | Kannada Prabha

ಸಾರಾಂಶ

ಆಡಳಿತ ಪಕ್ಷ -  ಪ್ರತಿಪಕ್ಷಗಳ ಸದಸ್ಯರ ಆರೋಪ-ಪ್ರತ್ಯಾರೋಪ ಸೋಮವಾರ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ಆಪೋಶನ ಪಡೆಯಿತು.

ನವದೆಹಲಿ: ಭಾರತ ವಿರೋಧಿ ಅಮೆರಿಕ ಉದ್ಯಮಿ ಜಾರ್ಜ್‌ ಸೊರೋಸ್ ಅವರಿಗೂ ಹಾಗೂ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರಿಗೂ ನಂಟು ಇದೆ ಎಂದು ಬಿಜೆಪಿ ಸದಸ್ಯರು ಮಾಡಿದ ಆರೋಪ ಹಾಗೂ ಹಗರಣ ಆರೋಪ ಹೊತ್ತಿರುವ ಉದ್ಯಮಿ ಗೌತಮ ಅದಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸ್ನೇಹವಿದೆ ಎಂಬ ಪ್ರತಿಪಕ್ಷಗಳ ಸದಸ್ಯರ ಆರೋಪ ಸೋಮವಾರ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ಆಪೋಶನ ಪಡೆಯಿತು.

ರಾಜ್ಯಸಭೆಯಲ್ಲಿ ಸಮರ:

ರಾಜ್ಯಸಭೆಯಲ್ಲಿ ಸಭಾನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸೊರೊಸ್ ಮತ್ತು ವಿರೋಧ ಪಕ್ಷದೊಂದಿಗೆ ಆಪಾದಿತ ಸಂಪರ್ಕಗಳನ್ನು ಉಲ್ಲೇಖಿಸಿ ‘ಕಾಂಗ್ರೆಸ್ ವಿದೇಶಿ ಶಕ್ತಿಗಳ ಉಪಕರಣವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಇದು ಸುಳ್ಳು.. ಆಧಾರರಹಿತ ಆರೋಪಗಳನ್ನು ಮಾಡಿ ದೇಶದ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಮರೆಮಾಚುವ ಬಿಜೆಪಿಯ ತಂತ್ರ’ ಎಂದರು.

ಈ ನಡುವೆ, ವಿಪಕ್ಷ ಸದಸ್ಯರು ‘ಮೋದಿ ಅದಾನಿ ಭಾಯಿ ಭಾಯಿ’ ಮತ್ತು ‘ನರೇಂದ್ರ ಮೋದಿ ಮುರ್ದಾಬಾದ್’ ಘೋಷಣೆ ಕೂಗಿದರು. ಇದಕ್ಕೆ ಸಭಾಪತಿ ಜಗದೀಪ್ ಧನಕರ್ ಗರಂ ಆಗಿ, ‘ಸರ್ಕಾರವನ್ನೇ ನಿಯಂತ್ರಿಸಬೇಕು (ಡೀಪ್‌-ಸ್ಟೇಟ್) ಎಂಬ ಮನಸ್ಥಿತಿ ಭಾರತದ ಏಕತೆ, ಸಾರ್ವಭೌಮತೆ ಮತ್ತು ಪ್ರಗತಿಗೆ ಗಂಭೀರ ಬೆದರಿಕೆ.. ಕೋವಿಡ್ ಸಾಂಕ್ರಾಮಿಕ ರೋಗಕ್ಕಿಂತ ಕೆಟ್ಟದ್ದು. ದೇಶ ವಿರೋಧಿಗಳ ವಿರುದ್ಧ ಎಲ್ಲರೂ ಒಂದಾಗಬೇಕು’ ಎಂದು ಛೇಡಿಸಿ ದಿನದ ಮಟ್ಟಿಗೆ ಕಲಾಪ ಮುಂದೂಡಿದರು.

ಲೋಕಸಭೆಯಲ್ಲೂ..:

ಲೋಕಸಭೆಯಲ್ಲೂ ಇದೇ ಪುನರಾವರ್ತನೆ ಆಯಿತು. ಬಿಜೆಪಿ ಸದಸ್ಯರು ಸೋನಿಯಾ ಹಾಗೂ ರಾಹುಲ್‌ ಮೇಲೆ ಆರೋಪ ಮಾಡಿದಾಗ ಕೆಲವು ಕಾಂಗ್ರೆಸ್ ಸದಸ್ಯರು, ಈ ಆರೋಪ ಮಾಡಿದ್ದ ಬಿಜೆಪಿ ಸಂಸದ ನಿಶಿಕಾಂತ ದುಬೆ ಮೇಲೆ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಹೇಳಿದರು. ಆಗ ಕೋಲಾಹಲ ಉಂಟಾಗಿ ಕಲಾಪವನ್ನು ಮುಂದೂಡಲಾಯಿತು.

ಬಿಜೆಪಿ-ಕಾಂಗ್ರೆಸ್ ವಾಕ್ಸಮರ:

ಸದನದ ಹೊರಗೆ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ‘ದೇಶ ವಿರೋಧಿಗಳ ವಿರುದ್ಧ ಎಲ್ಲ ಪಕ್ಷಗಳೂ ಒಂದಾಗಬೇಕು’ ಎಂದರು. ಇದನ್ನು ವಿರೋಧಿಸಿದ ಕಾಂಗ್ರಸ್‌ ನಾಯಕರಾದ ಕಾರ್ತಿ ಚಿದಂಬರಂ ಹಾಗೂ ಪವನ್‌ ಖೇರಾ, ‘ನಾವು ದೇಶಪ್ರೇಮಿಗಳು. ದೇಶದ ವಿರುದ್ಧ ಯಾವುದೇ ಕೆಲಸ ಮಾಡುವುದಿಲ್ಲ. ಆದರೆ ಅಮೆರಿಕದಲ್ಲಿ ಆರೋಪ ಹೊತ್ತ ಅದಾನಿಯನ್ನು ಉಳಿಸಲು ಮೋದಿ ಸರ್ಕಾರ ಈಗ ಅಮೆರಿಕ ಜತೆಗಿನ ಸಂಬಂಧವನ್ನೇ ಪಣಕ್ಕಿಟ್ಟಿದೆ’ ಎಂದು ಕಿಡಿಕಾರಿದರು.

ಇದೇ ಅಧಿವೇಶನದಲ್ಲಿ ಏಕ ಚುನಾವಣೆ ಮಸೂದೆ?

ನವದೆಹಲಿ: ಮೋದಿ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ‘ಒಂದು ದೇಶ ಒಂದು ಚುನಾವಣೆ’ ಮಸೂದೆಯನ್ನು ಸಂಸತ್ತಿನ ಇದೇ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.ಡಿ.20ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಮಂಡನೆ ಮಾತ್ರ ಆಗಲಿದೆ. ಏಕಾಏಕಿ ಇದರ ಅಂಗೀಕಾರ ಮಾಡುವ ಬದಲು, ವ್ಯಾಪಕ ವಿರೋಧ ಇರುವ ಕಾರಣ ಒಮ್ಮತ ಮೂಡಿಸುವುದು ಸರ್ಕಾರದ ಉದ್ದೇಶ. ಹೀಗಾಗಿ ವಕ್ಫ್ ತಿದ್ದುಪಡಿ ಮಸೂದೆ ಮಾದರಿಯಲ್ಲೇ ಇದನ್ನೂ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಬಹುದು ಎಂದು ಮೂಲಗಳು ತಿಳಿಸಿವೆ.

ಈಗಾಗಳೇ ‘ಒಂದು ದೇಶ ಒಂದು ಚುನಾವಣೆ’ ಕುರಿತ ರಾಮ್ ನಾಥ್ ಕೋವಿಂದ್ ಸಮಿತಿಯ ವರದಿಗೆ ಸಂಪುಟ ಅನುಮೋದನೆ ನೀಡಿದೆ. ಮಂಡನೆ ಬಳಿಕ ಜೆಪಿಸಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದೆ. ಈ ಪ್ರಕ್ರಿಯೆಯಲ್ಲಿ ಇತರ ಮಧ್ಯಸ್ಥಗಾರರೂ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶದಾದ್ಯಂತ ಇರುವ ಬುದ್ಧಿಜೀವಿಗಳ ಜೊತೆಗೆ ಎಲ್ಲಾ ರಾಜ್ಯಗಳ ಅಸೆಂಬ್ಲಿಗಳ ಸ್ಪೀಕರ್‌ಗಳನ್ನು ಸಹ ಕರೆಯಬಹುದು. ಸಾಮಾನ್ಯ ಜನರ ಅಭಿಪ್ರಾಯವನ್ನೂ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ