ಕೇರಳ ಬಿಜೆಪಿಗನ ಹತ್ಯೆ ಪ್ರಕರಣ: 15 ಪಿಎಫ್‌ಐ ಸದಸ್ಯರಿಗೆ ಗಲ್ಲು

KannadaprabhaNewsNetwork | Updated : Jan 31 2024, 08:55 AM IST

ಸಾರಾಂಶ

2021ರಲ್ಲಿ ಬರ್ಬರವಾಗಿ ಕೇರಳ ಬಿಜೆಪಿ ನಾಯಕ ರಂಜಿತ್‌ರನ್ನು ಹತ್ಯೆಗೈದಿದ್ದ 15 ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಆಲಪ್ಪುಳ (ಕೇರಳ): ಕೇರಳದ ಬಿಜೆಪಿಯ ಒಬಿಸಿ ಮೋರ್ಚಾ ನಾಯಕ ರಂಜಿತ್‌ ಶ್ರೀನಿವಾಸನ್‌ರನ್ನು ಬರ್ಬರವಾಗಿ ಕೊಂದಿದ್ದ 15 ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಕಾರ್ಯಕರ್ತರಿಗೆ ಆಲಪ್ಪುಳ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. 

ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾ. ಶ್ರೀದೇವಿ, ‘ಇದು ವಿರಳಾತಿವಿರಳ ಪ್ರಕರಣವಾಗಿದ್ದು, ಅಪರಾಧದಲ್ಲಿ ಭಾಗಿಯಾದ ಎಲ್ಲ 15 ಮಂದಿಗೆ ಮರಣದಂಡನೆ ವಿಧಿಸಲಾಗಿದೆ. 

ವ್ಯಕ್ತಿಯ ಮನೆಯಲ್ಲಿ ಆತನ ತಾಯಿ, ಕುಟುಂಬದ ಸದಸ್ಯರೆದುರೇ ಹತ್ಯೆ ಮಾಡುತ್ತಾರೆ ಎಂದರೆ ಇದು ಭೀಕರ ಕೃತ್ಯ’ ಎಂದು ತೀರ್ಪು ಪ್ರಕಟಿಸಿದರು. 

15 ಮಂದಿಯಲ್ಲಿ 8 ಮಂದಿ ನೇರವಾಗಿ, ಉಳಿದವರು ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂದು ಕೋರ್ಟ್‌ ಹೇಳಿತು.

ಇವರನ್ನು ನ್ಯಾಯಾಲಯ ಜ.20ರಂದು ದೋಷಿ ಎಂದು ಪ್ರಕಟಿಸಿತ್ತು. ತೀರ್ಪಿನ ಬಗ್ಗೆ ಬಿಜೆಪಿ ನಾಯಕರು ಹಾಗೂ ಶ್ರೀನಿವಾಸನ್‌ ಆಪ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?
ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮತ್ತು ಎಸ್‌ಡಿಪಿಐ ಸಂಘಟನೆಗಳ 15 ಸದಸ್ಯರು ಡಿ.19, 2021ರಂದು ರಂಜಿತ್‌ ಶ್ರೀನಿವಾಸನ್‌ ಅವರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಅವರ ಕುಟುಂಬದ ಎದುರಿನಲ್ಲೇ ಬರ್ಬರವಾಗಿ ಹತ್ಯೆಗೈದಿದ್ದರು.

Share this article