ಯೂಟ್ಯೂಬರ್ ವಿರುದ್ಧ ಸುಪ್ರೀಂ ಕಿಡಿ
ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಕೀಳು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ರಣವೀರ್ ಅಲಹಬಾದಿಯಾ ಸಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯುಟ್ಯೂಬರ್ ವಿರುದ್ಧ ಚಾಟಿ ಬೀಸಿದೆ. ರಣವೀರ್‌ರ ಹೇಳಿಕೆಯನ್ನು ಸ್ವೀಕಾರಾರ್ಹವಲ್ಲ ಎಂದಿರುವ ನ್ಯಾ। ಸೂರ್ಯಕಾಂತ್ ಹಾಗೂ ಎನ್. ಕೋಟೇಶ್ವರ್ ಅವರ ಪೀಠ, ‘ಇದು ವಿಕೃತ ಮನಸ್ಸನ್ನು ತೋರಿಸುತ್ತದೆ. ಅವರು ತಮ್ಮ ಮನಸ್ಸಿನಲ್ಲಿದ್ದ ಕಲ್ಮಶವನ್ನು ಕಾರ್ಯಕ್ರಮದಲ್ಲಿ ಕಾರಿದ್ದಾರೆ. ನೀವಾಡಿದ ಮಾತು ನಿಮ್ಮ ಮಗಳು, ಸಹೋದರಿ, ಪೋಷಕರು ಹಾಗೂ ಇಡೀ ಸಮಾಜಕ್ಕೇ ಮುಜುಗರವನ್ನುಂಟುಮಾಡುವಂಥದ್ದು. ಇದು ಅಶ್ಲೀಲತೆಯಲ್ಲದಿದ್ದರೆ ಇನ್ನೇನು?’ ಎಂದು ಖಾರವಾಗಿ ಪ್ರಶ್ನಿಸಿದೆ. ಜೊತೆಗೆ, ಇಂತಹ ಕೆಲಸ ಮಾಡಿ ಜನಪ್ರಿಯತೆ ಪಡೆದುಕೊಳ್ಳಬಹುದಾದರೆ ನಾಳೆ ಅನ್ಯರೂ ಅದನ್ನೇ ಮಾಡಬಹುದು ಎಂದಿದೆ.ರಣವೀರ್ ಪರ ವಾದ ಮಂಡಿಸಿದ ವಕೀಲ ಅಭಿನವ್ ಚಂದ್ರಚೂಡ್ ಅವರು, ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ದಾಖಲಾಗಿರುವುದು ಹಾಗೂ ಅಲಹಬಾದಿಯಾಗೆ ಜೀವ ಬೆದರಿಕೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಬಂಧಿಸದಂತೆ ಮನವಿ ಮಾಡಿದ್ದು, ಕೋರ್ಟ್ ಅವರಿಗೆ ಅಸ್ಸಾಂ ಹಾಗೂ ಮಹಾರಾಷ್ಟ್ರಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಈ ವೇಳೆ, ‘ತೀರ್ಪು ನಿಮ್ಮ ಪರವಾಗಿದೆ ಎಂಬ ಮಾತ್ರಕ್ಕೆ ಅಶ್ಲೀಲವಾಗಿ ಮಾತಾಡಲು ಪರವಾನಗಿ ಸಿಕ್ಕಿತು ಎಂದಲ್ಲ’ ಎಂದು ಎಚ್ಚರಿಕೆಯನ್ನೂ ನೀಡಿರುವ ಕೋರ್ಟ್, ತಮ್ಮ ಪಾಸ್‌ಪೋರ್ಟ್ ಅನ್ನು ಥಾಣೆಯ ಪೊಲೀಸ್ ಠಾಣೆಯ ವಶಕ್ಕೆ ನೀಡಿ, ತನ್ನ ಅನುಮತಿಯಿಲ್ಲದೆ ದೇಶದಿಂದ ಹೊರಹೋಗುವಂತಿಲ್ಲ ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದೆ. ಜೊತೆಗೆ, ಮುಂದಿನ ಆದೇಶದ ವರೆಗೆ ಯೂಟ್ಯೂಬ್ ಸೇರಿದಂತೆ ಯಾವುದೇ ಮಾಧ್ಯಮದಲ್ಲೂ ವಿಡಿಯೋ ಅಥವಾ ಆಡಿಯೋ ಸಂದೇಶಗಳನ್ನು ಹರಿಬಿಡುವುದರಿಂದ ನಿರ್ಬಂಧಿಸಿದೆ.