ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ತನ್ನ ದ್ವೈಮಾಸಿಕ ಸಾಲ ನೀತಿ ಪ್ರಕಟಿಸಿದ್ದು, ರೆಪೋ ದರವನ್ನು ಶೇ.6.5ರಲ್ಲೇ ಕಾಯ್ದುಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಗೃಹ, ವಾಹನ ಸೇರಿದಂತೆ ಇತರೆ ಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರ ಹಾಲಿ ದರದಲ್ಲೇ ಮುಂದುವರೆಯಲಿದೆ.
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ತನ್ನ ದ್ವೈಮಾಸಿಕ ಸಾಲ ನೀತಿ ಪ್ರಕಟಿಸಿದ್ದು, ರೆಪೋ ದರವನ್ನು ಶೇ.6.5ರಲ್ಲೇ ಕಾಯ್ದುಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಗೃಹ, ವಾಹನ ಸೇರಿದಂತೆ ಇತರೆ ಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರ ಹಾಲಿ ದರದಲ್ಲೇ ಮುಂದುವರೆಯಲಿದೆ.
ಆದರೆ ಮುಂದಿನ ದಿನಗಳಲ್ಲಿ ಬಡ್ಡಿದರ ಇಳಿಕೆಗೆ ನೆರವಾಗುವ ಕಡೆಗೆ ಮೊದಲ ಹೆಜ್ಜೆಯನ್ನೂ ಆರ್‌ಬಿಐ ಇಟ್ಟಿದೆ. ಭವಿಷ್ಯದ ದೃಷ್ಟಿಕೋನ ಕುರಿತ ತನ್ನ ನಿಲುವನ್ನು ‘ಕಠಿಣ ಹಣಕಾಸು ನೀತಿ’ಯನ್ನು ಆರ್‌ಬಿಐ ‘ತಟಸ್ಥ’ಕ್ಕೆ ಇಳಿಸಿದೆ. ಇಂಥ ಬದಲಾವಣೆ 2019ರ ಬಳಿಕ ಮೊದಲನೆಯದ್ದು ಎಂಬುದು ವಿಶೇಷ.
ಕಠಿಣ ಹಣಕಾಸು ನೀತಿಯಡಿ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿವು ನಿಯಂತ್ರಿಸಲು ಆರ್‌ಬಿಐ ಬಡ್ಡಿದರ ಹೆಚ್ಚಿಸುತ್ತದೆ. ಆರ್ಥಿಕತೆ ಕುಸಿತ ಮೊದಲಾದ ಸಂದರ್ಭದಲ್ಲಿ ಇದನ್ನು ತಟಸ್ಥ ಸ್ಥಿತಿಗೆ ಇಳಿಸಿ ಬಡ್ಡಿದರ ಬದಲಾವಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಹೀಗಾಗಿ ಈ ನಿಲುವು ಮುಂಬರುವ ದ್ವೈಮಾಸಿಕ ಸಾಲ ನೀತಿಯಲ್ಲಿ ಆರ್‌ಬಿಐ ಬಡ್ಡಿದರ ಇಳಿಕೆ ಮಾಡಬಹುದು ಎಂಬ ಆಶಾಭಾವನೆಗೆ ಕಾರಣವಾಗಿದೆ.
ಕಳೆದ ಮೂರು ದಿನಗಳಿಂದ ಸಭೆ ನಡೆಸಿದ್ದ ಆರ್‌ಬಿಐನ ಮಂಡಳಿಯ 6 ಸದಸ್ಯರ ಪೈಕಿ 5 ಜನರು ರೆಪೋ ದರವನ್ನು ಸತತ 10ನೇ ಸಾಲ ನೀತಿಯಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳುವ ಪರ ಮತ ಚಲಾಯಿಸಿದರು.
ಇದೇ ವೇಳೆ 2024-25ನೇ ಸಾಲಿನಲ್ಲೂ ಹಣದುಬ್ಬರ ಶೇ.4.5ರಷ್ಟು ಇರುವ ಸಾಧ್ಯತೆ ಇದೆ. ಜೊತೆಗೆ ದೇಶ ಶೇ.7.2ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿದೆ.
ಭವಿಷ್ಯದ ಕುರಿತ ನಿಲುವಿನಲ್ಲಿ ನಾವು ಬದಲಾವಣೆ ಮಾಡಿದ್ದೇವೆ. ಆದರೆ ಆರ್ಥಿಕತೆಗೆ ಬೆಳವಣಿಗೆ ಪೂರಕ ಕ್ರಮ ಕೈಗೊಳ್ಳುತ್ತಲೇ ಹಣದುಬ್ಬರ ನಿಯಂತ್ರಣದ ಮೇಲೂ ತೀವ್ರ ನಿಗಾ ಇಡುತ್ತೇವೆ. ಮುಂದಿನ ದಿನಗಳಲ್ಲಿ ಆಹಾರ ಹಣದುಬ್ಬರ ಪ್ರಮಾಣ ಇಳಿಯುವ ನಿರೀಕ್ಷೆ ಇದೆ- ಶಕ್ತಿಕಾಂತ್ ದಾಸ್, ಆರ್‌ಬಿಐ ಗವರ್ನರ್
ಮೋದಿ ‘ನೈಸ್’ ಮನುಷ್ಯ, ನನ್ನ ಸ್ನೇಹಿತ: ಟ್ರಂಪ್
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಹಾಡಿ ಹೊಗಳಿರುವ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ‘ಮೋದಿ ಒಬ್ಬ ನೈಸ್ ಮನುಷ್ಯ. ನನ್ನ ಫ್ರೆಂಡ್’ ಎಂದಿದ್ದಾರೆ. ಸಂವಾದವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಮೋದ ನನ್ನ ಫ್ರೆಂಡ್. ಅವರು ಗ್ರೇಟ್. ಅವರಿಗಿಂತ ಮೊದಲು ಭಾರತದ ಅಧಿಕಾರದಲ್ಲಿ ಪದೇ ಪದೇ ಬದಲಾವಣೆ ಆಗುತ್ತಿತ್ತು. ಅಸ್ಥಿರತೆ ಇತ್ತು. ಆದರೆ ಮೋದಿ ಬಂದ ನಂತರ ಎಲ್ಲ ಬದಲಾಗಿದೆ. ಅವರೊಬ್ಬ ನೈಸ್ ಮನುಷ್ಯ’ ಎಂದರು.
ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್ ಖರೀದಿ
ನವದೆಹಲಿ: ಭಾರತ ಸರ್ಕಾರವು ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್ ಖರೀದಿಸಲು ಹಾಗೂ ಅಮೆರಿಕ ಸಹಯೋಗದಲ್ಲಿ ಭಾರತದಲ್ಲೇ 2 ಪರಮಾಣು ಜಲಾಂತರ್ಗಾಮಿಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಈ ಒಪ್ಪಂದದ ಬಗ್ಗೆ ಅಲ್ಲಿನ ಅಧ್ಯಕ್ಷ ಜೋ ಬೈಡೆನ್ ಜತೆ ಚರ್ಚಿಸಿದ್ದರು. 2 ಜಲಾಂತರ್ಗಾಮಿಗಳನ್ನು ವಿಶಾಖಪಟ್ಟಣದಲ್ಲಿ 45 ಸಾವಿರ ಕೋಟಿ ರು ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಭಾರತದ ಎಲ್ ಆ್ಯಂಡ್ ಟಿಯಂಥ ಖಾಸಗಿ ಕಂಪನಿಗಳೂ ಇದರಲ್ಲಿ ಪಾಲ್ಗೊಳ್ಳಲಿವೆ. ಡ್ರೋನ್‌ಗಳನ್ನು ವಾಯುಪಡೆ ಹಾಗೂ ನೌಕಾಪಡೆಗಳು ಹಂಚಿಕೊಳ್ಳಲಿವೆ.
ಸೆಕ್ಸ್ ಹಗರಣ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಡ್ರಗ್ಸ್ ಕಂಟಕ
ಕೊಚ್ಚಿ: ನಾಯಕ ನಟರು, ನಿರ್ದೇಶಕರು, ನಿರ್ಮಾಪಕರು, ಮಹಿಳಾ ನಟಿಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣದಲ್ಲಿ ಮಲಯಾಳಂ ಚಿತ್ರರಂಗದ ನಟರಿಬ್ಬರ ಹೆಸರು ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ನಟ ಶ್ರೀನಾಥ್ ಭಾಸಿ ಮತ್ತು ನಟಿ ಪ್ರಯಾಗಾ ಮಾರ್ಟಿನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಈ ಕುರಿತು ಮರಡು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪ್ರಕರಣ ಹಿನ್ನೆಲೆ:
ಇತ್ತೀಚೆಗೆ ಕುಖ್ಯಾತ ಗ್ಯಾಂಗ್‌ಸ್ಟರ್ ಪ್ರಕಾಶ್ ಮತ್ತು ಆತನ ಸಹಚರರನ್ನು ಪೊಲೀಸರು ಐಷಾರಾಮಿ ಹೋಟೆಲ್‌ನಲ್ಲಿ ಬಂಧಿಸಿದ್ದರು. ಅಲ್ಲಿ ಶಂಕಿತ ಮಾದಕ ವಸ್ತು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಚ್ಚಿ ಸೇರಿ ಹಲವು ನಗರಗಳಲ್ಲಿ ಆಯೋಜಿಸುತ್ತಿದ್ದ ಗಣ್ಯರ ಪಾರ್ಟಿಗಳಿಗೆ ಕೊಕೇನ್ ಪೂರೈಕೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಶ್ರೀನಾಥ್ ಭಾಸಿ ಮತ್ತು ಪ್ರಯಾಗ ಹೆಸರು ಕೂಡಾ ಪ್ರಸ್ತಾಪಿಸಿದ್ದಾರೆ. ಈ ಇಬ್ಬರು ಪ್ರಕಾಶ್ ಇದ್ದ ಹೋಟೆಲ್‌ಗೆ ಭೇಟಿ ನೀಡಿದ್ದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.