ಮೊದಲ ಸಲ ಆರ್‌ಬಿಐ ರಹಸ್ಯ ಚಿನ್ನದ ಖಜಾನೆ ಅನಾವರಣ!

KannadaprabhaNewsNetwork |  
Published : Jun 30, 2025, 01:47 AM ISTUpdated : Jun 30, 2025, 04:40 AM IST
ಆರ್‌ಬಿಐ | Kannada Prabha

ಸಾರಾಂಶ

 ಇದೇ ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದರ ಮೂಲಕ ಭಾರತದ ಕೇಂದ್ರೀಯ ಬ್ಯಾಂಕ್‌ ಆರ್‌ಬಿಐ  ಚಿನ್ನ ಸಂಗ್ರಹಗಾರದ ಆಳ-ಅಗಲ ಬಹಿರಂಗವಾಗಿದೆ.

 ಮುಂಬೈ: ಭಾರತದ ಕೇಂದ್ರೀಯ ಬ್ಯಾಂಕ್‌ ಆರ್‌ಬಿಐ ದೇಶದ ಸಂಪತ್ತನ್ನು ನಗದು ರೂಪದಲ್ಲಿ ಮಾತ್ರವಲ್ಲದೆ ಚಿನ್ನದ ರೂಪದಲ್ಲೂ ಇಟ್ಟುಕೊಂಡಿರುತ್ತದೆ ಎಂಬುದಷ್ಟೇ ಇಲ್ಲಿಯವರೆಗೆ ಸಾರ್ವಜನಿಕರಿಗೆ ತಿಳಿದ ವಿಷಯವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದರ ಮೂಲಕ ಆರ್‌ಬಿಐನ ಚಿನ್ನ ಸಂಗ್ರಹಗಾರದ ಆಳ-ಅಗಲ ಬಹಿರಂಗವಾಗಿದೆ.

ಜಿಯೋ ಹಾಟ್‌ಸ್ಟಾರ್‌ನಲ್ಲಿ 5 ಭಾಗಗಳಲ್ಲಿ ಪ್ರಸಾರವಾಗುತ್ತಿರುವ ‘ಆರ್‌ಬಿಐ ಅನ್‌ಲಾಕ್ಡ್‌: ಬಿಯಾಂಡ್‌ ದ ರುಪಿ’ ಡಾಕ್ಯುಮೆಂಟರಿಯಲ್ಲಿ ಕೇಂದ್ರ ಬ್ಯಾಂಕ್‌ ಬಳಿ ಇರುವ ಅಗಾಧ ಸಂಪತ್ತಿನ ಅನಾವರಣ ಮಾಡಲಾಗಿದೆ. ಆರ್‌ಬಿಐ ಸ್ಥಾಪನೆಯಾಗಿ 90 ವರ್ಷ ತುಂಬಿರುವ ಹೊತ್ತಿನಲ್ಲೇ ಈ ಡಾಕ್ಯುಮೆಂಟರಿ ಹೊರಬಂದಿದೆ.

ಸಾಕ್ಷ್ಯಚಿತ್ರದಲ್ಲೇನಿದೆ?:

ಚಾಕ್‌ಬೋರ್ಡ್‌ ಎಂಟರ್‌ಟೇನ್‌ಮೆಂಟ್‌ ನಿರ್ಮಿಸಿರುವ ಈ ಡಾಕ್ಯುಮೆಂಟರಿಯಲ್ಲಿ, ಕಳೆದ 90 ವರ್ಷಗಳಲ್ಲಿ ಆರ್‌ಬಿಐನ ಕಾರ್ಯವೈಖರಿಯನ್ನು ವಿವರಿಸಲಾಗಿದೆ. ಇದರಲ್ಲಿ, ತಲಾ 12.5 ಕೆ.ಜಿ. ತೂಗುವ ಚಿನ್ನದ ಗಟ್ಟಿಗಳ ಅಟ್ಟಿಯನ್ನು ಬಿಗಿ ಭದ್ರತೆಯಲ್ಲಿ ಇರಿಸಿರುವುದನ್ನು ತೋರಿಸಲಾಗಿದೆ. ಇವುಗಳ ಮೌಲ್ಯ ಕೋಟಿಯಷ್ಟಿದ್ದು, ಭಾರತದಲ್ಲಿ ಒಟ್ಟು 870 ಟನ್‌ ಚಿನ್ನದ ಸಂಗ್ರಹವಿದೆ ಎಂಬುದು ಬಹಿರಂಗವಾಗಿದೆ.

ವಿದೇಶಿ ವ್ಯಾಪಾರ ಸಮತೋಲನವನ್ನು ಕಾಯ್ದುಕೊಳ್ಳುವ ಸಲುವಾಗಿ 1991ರ ಬಳಿಕ ದೇಶದ ಚಿನ್ನವನ್ನು ವಿದೇಶಗಳಿಗೆ ನೀಡಬೇಕಾಗಿತ್ತು. ಇದರ ಹೊರತಾಗಿಯೂ ಆರ್‌ಬಿಐ ತನ್ನ ಚಿನ್ನದ ಸಂಗ್ರಹ ಕುಗ್ಗಲು ಬಿಟ್ಟಿಲ್ಲ. ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ 7.2 ಲಕ್ಷ ಕೋಟಿ ರು. ಮೌಲ್ಯದ ಸ್ವರ್ಣಸಂಗ್ರಹವಿದೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ‘ದೇಶ ಹಾಗೂ ಆರ್ಥಿಕತೆಗಳು ಏರಿಳಿತಗಳನ್ನು ಕಾಣುತ್ತಿರುತ್ತವೆ. ಆದರೆ ಚಿನ್ನ ಯಾವಾಗಲೂ ತನ್ನ ಮೌಲ್ಯವನ್ನು ಕಾಯ್ದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.

ಈ ಡಾಕ್ಯುಮೆಂಟರಿ ಮೂಲಕ, ತನ್ನ ಕಾರ್ಯನಿರ್ವಹಣೆ, ಭದ್ರತೆಯನ್ನು ಅನಾವರಣಗೊಳಿಸುವ ಮೂಲಕ ಜನರಲ್ಲಿ ಅರಿವು ಮತ್ತು ನಂಬಿಕೆ ಮೂಡಿಸುವುದು ಆರ್‌ಬಿಐನ ಉದ್ದೇಶವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ವಿದೇಶಿ ಸಂಗ್ರಹದಿಂದ 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ವಿದೇಶಿ ಸಂಗ್ರಹದಿಂದ 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ. ಇದು 2024-25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿನ ಒಟ್ಟು ಭೌತಿಕ ಚಿನ್ನದ ಹಿಡುವಳಿಯನ್ನು 200.06 ಮೆಟ್ರಿಕ್ ಟನ್‌ಗಳಿಗೆ ತಲುಪಿಸಿದೆ. ಈ ಕ್ರಮವು ಆರ್ಥಿಕ ಬಿಕ್ಕಟ್ಟುಗಳ ಸಮಯದಲ್ಲಿ ದೇಶದ ಚಿನ್ನದ ನಿಕ್ಷೇಪಗಳನ್ನು ಸುರಕ್ಷಿತವಾಗಿರಿಸಲು ಮತ್ತು ಆರ್ಥಿಕ ಸ್ವಾಯತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಇದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಸುಮಾರು ಅರ್ಧದಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ವಿದೇಶಿ ಚಿನ್ನದ ಹಿಡುವಳಿ 2024 ರ ಆರ್ಥಿಕ ವರ್ಷಾಂತ್ಯ ಅಂದ್ರೆ ಮಾರ್ಚ್​ 31ರ ವೇಳೆಗೆ 413.79 ಮೆಟ್ರಿಕ್ ಟನ್‌ಗಳಿಂದ 2025 ರ ವೇಳೆಗೆ 367.60 ಮೆಟ್ರಿಕ್ ಟನ್‌ಗಳಿಗೆ ಇಳಿದಿದೆ. ಈ ಹಿಂದೆ, ಈ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಸಂಗ್ರಹಿಸಲಾಗಿತ್ತು. ಈಗ ಆರ್‌ಬಿಐ ತನ್ನ ಸ್ವದೇಶಿ ಭಂಡಾರಕ್ಕೆ ಸ್ಥಳಾಂತರಿಸಿದೆ. ಈ ಕ್ರಮವು ಭಾರತದ ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಆರ್ಥಿಕತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!
ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು