ಕೇಂದ್ರದ ವಿರುದ್ಧ ಸ್ಟಾಲಿನ್‌ ಕ್ಷೇತ್ರ ಮರುವಿಂಗಡಣೆ ಯುದ್ಧ

KannadaprabhaNewsNetwork |  
Published : Feb 26, 2025, 01:01 AM IST
ಸ್ಟಾಲಿನ್ | Kannada Prabha

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ ಎಂದು ಆರೋಪ ಮಾಡಿದ ಬೆನ್ನಲ್ಲೇ ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಾ.5 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.

ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ ಎಂದು ಆರೋಪ ಮಾಡಿದ ಬೆನ್ನಲ್ಲೇ ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಾ.5 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮಗಳ ಕುರಿತು ಚರ್ಚಿಸಲು ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ 40 ರಾಜಕೀಯ ಪಕ್ಷಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಕ್ಷೇತ್ರ ಮರುವಿಂಗಡಣೆಯು ’ತಮಿಳುನಾಡಿನ ಮೇಲೆ ನೇತಾಡುವ ಕತ್ತಿಯಾಗಿದೆ. ಏಕೆಂದರೆ ತಮಿಳುನಾಡು ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿ ಆಗಿರುವ ಕಾರಣ, ಜನಸಂಖ್ಯೆ ಆಧರಿಸಿ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯಲ್ಲಿ 8 ಲೋಕಸಭಾ ಸೀಟು ಕಳೆದುಕೊಳ್ಳುವ ಆತಂಕವಿದೆ’ ಎಂದಿದ್ದಾರೆ.

ಅಲ್ಲದೆ, ‘ಜನಸಂಖ್ಯೆ ನಿಯಂತ್ರಿಸುವಲ್ಲಿ ಯಶ ಕಂಡಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸುವ ಬದಲು ಈ ರೀತಿ ಸೀಟು ಖೋತಾ ಸರಿಯೇ? ಇದರಿಂದ ಸದನಸಲ್ಲಿ ತಮಿಳುನಾಡಿನ ದನಿ ತಗ್ಗುತ್ತದೆ ಅಲ್ಲವೆ?’ ಎಂದು ಪ್ರಶ್ನಿಸಿದ್ದಾರೆ.

ತಮಿಳುನಾಡು ಪ್ರಸಕ್ತ 39 ಲೋಕಸಭಾ ಸ್ಥಾನ ಹೊಂದಿದೆ.

ಇತ್ತೀಚೆಗೆ ಸ್ಟಾಲಿನ್‌ ಅವರು ತಮಿಳುನಾಡಲ್ಲಿ ಜನಸಂಖ್ಯೆ ಕುಸಿತದ ವಿರುದ್ಧ ಎಚ್ಚರಿಕೆ ನೀಡಿ, 16 ಸಂಪತ್ತುಗಳ ಸಂಕೇತವಾಗಿ ಎಲ್ಲರೂ 16 ಮಕ್ಕಳನ್ನು ಹೆರಬೇಕು ಎಂದು ಕರೆ ನೀಡಿದ್ದರು.

==

ಕೇಂದ್ರದಿಂದ ಭಾಷಾ ಯುದ್ಧದ ಬೀಜ ಬಿತ್ತನೆ: ಸ್ಟಾಲಿನ್ ಕಿಡಿ

ಚೆನ್ನೈ: ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಹಿಂದಿಯನ್ನು ಹೇರುವ ಮೂಲಕ ಭಾಷಾ ಯುದ್ಧದ ಬೀಜಗಳನ್ನು ಬಿತ್ತುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಆರೋಪಿಸಿದ್ದಾರೆ.‘ತಮಿಳುನಾಡು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ. ಪರಭಾಷೆಯನ್ನು ಕಲಿಯಲು ಬಯಸುವವರಿಗೆ ಅಡ್ಡಿ ಮಾಡುವುದೂ ಇಲ್ಲ. ಆದರೆ ಮಾತೃಭಾಷೆ ತಮಿಳಿನ ಮೇಲೆ ಪ್ರಾಬಲ್ಯ ಸಾಧಿಸಲು ಮತ್ತು ನಾಶಮಾಡಲು ಬೇರೆ ಯಾವುದೇ ಭಾಷೆಗೆ ಅವಕಾಶ ನೀಡದಿರಲು ದೃಢನಿಶ್ಚಯ ಮಾಡಲಾಗಿದೆ. ಇದಕ್ಕಾಗಿಯೇ ನಾವು ದ್ವಿಭಾಷಾ ನೀತಿಯನ್ನು (ತಮಿಳು ಮತ್ತು ಇಂಗ್ಲಿಷ್) ಪಾಲಿಸುತ್ತಿದ್ದೇವೆ’ ಎಂದು ಸ್ಟಾಲಿನ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

==

ಹಿಂದಿ ಹೇರಿಕೆ ವಿರುದ್ಧ ಬಿಜೆಪಿಗೆ ನಟಿ ರಂಜನಾ ರಾಜೀನಾಮೆ

ಚೆನ್ನೈ: ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಹಿಂದಿ ಹೇರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಆರೋಪಿಸುತ್ತಿರುವ ನಡುವೆಯೇ. ತ್ರಿಭಾಷಾ ನೀತಿಯನ್ನು ಹೇರುವ ಪ್ರಯತ್ನಗಳನ್ನು ವಿರೋಧಿಸಿ ನಟಿ-ರಾಜಕಾರಣಿ ರಂಜನಾ ನಾಚಿಯಾರ್ ಮಂಗಳವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಬಿಜೆಪಿ ತ್ರಿಭಾಷಾ ಸೂತ್ರದ ಪರ ಇರುವುದು ಭ್ರಮನಿರಸನಕ್ಕೆ ಕಾರಣವಾಗಿದೆ. ದ್ರಾವಿಡ ಸಿದ್ಧಾಂತ ಹಾಗೂ ತಮಿಳುನಾಡಿನ ಬಗ್ಗೆ ಬಿಜೆಪಿ ದ್ವೇಷ ಭಾವನೆ ಹೊಂದಿದೆ’ ಎಂದು ಆರೋಪಿಸಿದ್ದಾರೆ.

‘ರಾಷ್ಟ್ರವು ಸುರಕ್ಷಿತವಾಗಿರಬೇಕಾದರೆ, ತಮಿಳುನಾಡು ಸಮೃದ್ಧವಾಗಿರಬೇಕು ಎಂದಿರುವ ಅವರು, ‘ಪಕ್ಷದೊಳಗೆ ನನ್ನ ಬೆಳವಣಿಗೆಗೆ ಬಿಜೆಪಿ ಅನುಕೂಲಕರ ವಾತಾವರಣವನ್ನು ಒದಗಿಸಲಿಲ್ಲ’ ಎಂದು ಆರೋಪಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ