ನವದೆಹಲಿ: ‘ಮತದಾರರ ಪಟ್ಟಿಯ ತಯಾರಿಕೆಯ ಎಲ್ಲಾ ಹಂತಗಳಲ್ಲಿ ರಾಜಕೀಯ ಪಕ್ಷಗಳು ಭಾಗಿಯಾಗಿರುತ್ತವೆ. ಆಕ್ಷೇಪಗಳನ್ನು ಸಲ್ಲಿಸಲೂ ಅವುಗಳಿಗೆ ಪಟ್ಟಿ ತಯಾರಿಕೆ ಹಂತದಲ್ಲಿ ಅವಕಾಶವಿರುತ್ತದೆ. ಈ ರೀತಿ ಪಾರದರ್ಶಕತೆ ಕಾಪಾಡಿಕೊಂಡೇ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ’ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೆ, ‘ಮತದಾರರ ಪಟ್ಟಿ ಪರಿಷ್ಕರಣೆಗೆ ಈಗಲೂ ಸ್ವಾಗತವಿದೆ’ ಎಂದಿದೆ.
ಚುನಾವಣಾ ಆಯೋಗ ಭಾನುವಾರ ಸುದ್ದಿಗೋಷ್ಠಿ ಕರೆದಿದ್ದು, ಅದಕ್ಕೆ ಪೂರ್ವಭಾವಿಯಾಗಿ 10 ಅಂಶಗಳ ಸ್ಪಷ್ಟನೆ ನೀಡಿದೆ.
‘ಪಟ್ಟಿ ಸಿದ್ಧಪಡಿಸುವ ವೇಳೆ ಕರಡು ಮತದಾರರ ಪಟ್ಟಿಯ ಭೌತಿಕ ಮತ್ತು ಡಿಜಿಟಲ್ ಪ್ರತಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ಎಲ್ಲರಿಗೂ ನೋಡಲು ಆಯೋಗದ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ನಂತರ ಆಕ್ಷೇಪಣೆಗಳನ್ನು ಸಲ್ಲಿಸಲು 1 ತಿಂಗಳ ಅವಧಿ ನೀಡಲಾಗುತ್ತದೆ’ ಎಂದಿದೆ.‘ಬಳಿಕ ಮತದಾರರ ಅಂತಿಮ ಪ್ರಕಟಿತ ಪಟ್ಟಿಯನ್ನು ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು 2 ಹಂತದ ಮೇಲ್ಮನವಿ ಪ್ರಕ್ರಿಯೆಯನ್ನು ಸಲ್ಲಿಸಲೂ ಅವಕಾಶ ನೀಡಲಾಗುತ್ತದೆ. ಮೊದಲನೆಯ ಹಂತದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. 2ನೇ ಹಂತದಲ್ಲಿ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಬಹುದು. ಈ ರೀತಿ ಪಾರದರ್ಶಕತೆ ಕಾಪಾಡಲಾಗುತ್ತದೆ’ ಎಂದು ಹೇಳಿದೆ.
‘ಆದರೆ ಕೆಲವು ರಾಜಕೀಯ ಪಕ್ಷಗಳು ಹಾಗೂ ಬೂತ್ ಏಜೆಂಟರು ಸಾಕಷ್ಟು ಕಾಲಾವಕಾಶ ನೀಡಿದ್ದರೂ ಸೂಕ್ತ ಸಮಯದಲ್ಲಿ ದೋಷವನ್ನು ಗುರುತಿಸಿಲ್ಲ. ನಿಗದಿತ ಸಮಯದಲ್ಲಿ ದೋಷ ಗುರುತಿಸಿದ್ದರೆ, ಅವುಗಳನ್ನು ಪರಿಶೀಲಿಸಬಹುದಿತ್ತು ಮತ್ತು ದೋಷ ನಿಜವಾಗಿಯೂ ಆಗಿದ್ದರೆ, ಚುನಾವಣೆಗೂ ಮೊದಲು ಚುನಾವಣಾಧಿಕಾರಿಗಳು ಸರಿಪಡಿಸಬಹುದಿತ್ತು’ ಎಂದು ಸ್ಪಷ್ಟಪಡಿಸಿದೆ.‘ಆದರೆ ಇದೀಗ ಎಲ್ಲ ಆದ ನಂತರ ಕೆಲವು ಪಕ್ಷಗಳು ಆಕ್ಷೇಪ ಎತ್ತಿ ಅಕ್ರಮದ ಆರೋಪ ಹೊರಿಸುತ್ತಿವೆ. ಇದು ಸಲ್ಲದು’ ಎಂದು ಅದು ಕಿಡಿಕಾರಿದೆ.
‘ಆದಾಗ್ಯೂ ರಾಜಕೀಯ ಪಕ್ಷಗಳು ಮತ್ತು ಯಾವುದೇ ಮತದಾರರಿಂದ ಮತದಾರರ ಪಟ್ಟಿ ಪರಿಶೀಲನೆಯನ್ನು ಈಗಲೂ ನಾವು ಸ್ವಾಗತಿಸುತ್ತೇವೆ. ಇದು ಚುನಾವಣಾಧಿಕಾರಿಗಳಿಗೆ ತಪ್ಪುಗಳನ್ನು ಸರಿಪಡಿಸಲು ಅವಕಾಶ ನೀಡುತ್ತದೆ ಹಾಗೂ ಮತದಾರರ ಪಟ್ಟಿಯ ಶುದ್ಧಿಗೆ ಅನುವು ಮಾಡಿಕೊಡುತ್ತದೆ. ಇದು ಚುನಾವಣಾ ಆಯೋಗದ ಉದ್ದೇಶವೂ ಆಗಿದೆ’ ಎಂದು ಹೇಳಿದೆ.