ಉಪರಾಷ್ಟ್ರಪತಿಗಳ ದಿಢೀರ್‌ ರಾಜೀನಾಮೆಗೆ 4 ಕಾರಣ?

KannadaprabhaNewsNetwork |  
Published : Jul 23, 2025, 01:45 AM ISTUpdated : Jul 23, 2025, 05:58 AM IST
jagdeep dhankar

ಸಾರಾಂಶ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ದಿನವೇ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ಅನಾರೋಗ್ಯದ ಕಾರಣ ನೀಡಿ ದಿಢೀರ್‌ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ದಿನವೇ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ಅನಾರೋಗ್ಯದ ಕಾರಣ ನೀಡಿ ದಿಢೀರ್‌ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅನಾರೋಗ್ಯಕ್ಕಿಂತ ಬೇರೆಯ ಕಾರಣಗಳೇ ಇವೆ ಎಂದು ವಿಪಕ್ಷಗಳು ಹಾಗೂ ತಜ್ಞರು ಅಂದಾಜಿಸಿದ್ದು, 4 ಪ್ರಮುಖ ಸಂಭಾವ್ಯ ಕಾರಣಗಳ ಪಟ್ಟಿ ಮಾಡಿದ್ದಾರೆ,

ರಾಜೀನಾಮೆಯ ಹಿಂದೆ, ಸೋಮವಾರ ರಾಜ್ಯಸಭೆಯಲ್ಲಿ ನ್ಯಾ.ವರ್ಮಾ ವಿರುದ್ಧ ವಿಪಕ್ಷಗಳು ನೀಡಿದ್ದ ವಾಗ್ದಂಡನೆ ನೋಟಿಸ್‌ಗೆ ಧನಕರ್‌ ಒಪ್ಪಿಗೆ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ವಿರುದ್ಧ ರಾಜ್ಯಸಭೆಯ ಒಳಗೆ ಮತ್ತು ಹೊರಗೆ ನೇರಾನೇರಾ ಸಮರ ಸಾರಿದ್ದು, ಮುಂದಿನ ಬಿಹಾರ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಮತ್ತು ಸೋಮವಾರ ಸಂಸತ್ತಿನ ಕಲಾಪ ಸಮಿತಿಯಲ್ಲಿ ಕೆಲ ಕೇಂದ್ರ ಸಚಿವರು ಧನಕರ್‌ಗೆ ಮಾಡಿದ ಅವಮಾನದ ಘಟನೆಗಳು ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಇದೆಲ್ಲದರ ಜೊತೆಗೆ ಅವರ ಅನಾರೋಗ್ಯದ ಸಮಸ್ಯೆಯೂ ಮೇಲ್ಕಂಡ ಘಟನೆಗಳಿಗೆ ಬಲತುಂಬಿ ಅವರು ಸೋಮವಾರ ಸಂಜೆ ವೇಳೆ ಸರ್ಕಾರಕ್ಕೂ ಶಾಕ್‌ ನೀಡುವಂತೆ ರಾಜೀನಾಮೆ ಸಲ್ಲಿಸಿದರು ಎಂದು ದೆಹಲಿ ರಾಜಕೀಯ ವಲಯದಲ್ಲಿ ಭಾರೀ ಗುಲ್ಲೆದಿದ್ದಿದೆ. ಜೊತೆಗೆ ರಾಜೀನಾಮೆ ಬಳಿಕವೂ ಅವರಿಗೆ ರಾಜ್ಯಸಭೆಯಲ್ಲಾಗಲೀ ಅಥವಾ ಹೊರಗಾಗಲೀ ಸರ್ಕಾರದಿಂದ ಯಾವುದೇ ಗೌರವಪೂರ್ಣ ವಿದಾಯದ ಕಾರ್ಯಕ್ರಮ ನಡೆಯದೇ ಇರುವುದು, ಸರ್ಕಾರ ಕೂಡಾ ಅವರ ನಿರ್ಗಮನ ಬಯಸಿತ್ತೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.

ಕಾರಣ 1

ನ್ಯಾ. ವರ್ಮಾ ವಾಗ್ದಂಡನೆ ಪ್ರಕರಣ

ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾ. ವರ್ಮಾಗೆ ವಾಗ್ದಂಡನೆ ವಿಧಿಸುವ ಸಂಬಂಧ ಸೋಮವಾರ ಲೋಕಸಭೆಯ ಸ್ಪೀಕರ್‌ಗೆ ಆಡಳಿತದ ಪಕ್ಷದ ಸದಸ್ಯರು ನೋಟಿಸ್‌ ನೀಡಿದ್ದರು. ಮತ್ತೊಂದೆಡೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರ ನೇತೃತ್ವದಲ್ಲಿ ಸದಸ್ಯರು ಸಭಾಧ್ಯಕ್ಷ ಧನಕರ್‌ಗೆ ನೋಟಿಸ್‌ ನೀಡಿದ್ದರು.

ಸರ್ಕಾರ ನ್ಯಾ. ವರ್ಮಾ ಪ್ರಕರಣದ ಮುಂದಿಟ್ಟುಕೊಂಡು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಲು ಮುಂದಾಗಿತ್ತು. ಅದಕ್ಕೆ ಈ ಪ್ರಕರಣವನ್ನು ಅಸ್ತ್ರವಾಗಿ ಬಳಸಲು ಯೋಜಿಸಿತ್ತು. ಆದರೆ ಲೋಕಸಭೆಯ ಸ್ಪೀಕರ್‌ಗೆ ಮುನ್ನವೇ, ರಾಜ್ಯಸಭೆಯಲ್ಲಿ ಧನಕರ್‌ ಅವರು ನೋಟಿಸ್‌ ಕುರಿತು ಮುಂದಿನ ಕ್ರಮ ಕೈಗೊಳ್ಳುವಂತೆ ರಾಜ್ಯಸಭೆಯ ಕಾರ್ಯದರ್ಶಿಗೆ ಸೂಚಿಸುವ ಮೂಲಕ ಸರ್ಕಾರದ ಅಸ್ತ್ರವನ್ನು ಕಸಿದುಕೊಂಡರು ಎಂಬುದು ಸರ್ಕಾರ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು

ಕಾರಣ 2

ನ್ಯಾಯಾಂಗದ ವಿರುದ್ಧ ಸತತ ಟೀಕೆ 

ಉಪರಾಷ್ಟ್ರಪತಿ ಹುದ್ದೆಗೇರಿದಾಗಿನಿಂದಲೂ ಧನಕರ್‌ ಅವರು ನ್ಯಾಯಾಂಗದೊಂದಿಗೆ ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದರು. ರಾಜ್ಯಸಭೆಯ ಒಳಗೂ, ಹೊರಗೂ ಸತತವಾಗಿ ಸರ್ಕಾರದ ವಿಷಯದಲ್ಲಿ ನ್ಯಾಯಾಂಗದ ಮಧ್ಯಪ್ರವೇಶವನ್ನು ಕಟುನುಡಿಗಳಲ್ಲಿ ಟೀಕಿಸಿದ್ದರು. ನ್ಯಾಯಾಂಗದಲ್ಲಿ ಹೊಣೆಗಾರಿಕೆಯ ಕೊರತೆ ಇದೆ ಎಂದು ಹಲವು ಬಾರಿ ಟೀಕಿಸಿದ್ದರು. ನ್ಯಾಯಾಲಯಗಳ ತೀರ್ಪಿನ ಬಗ್ಗ ಸಂಸದರು ಧ್ವನಿ ಎತ್ತದೇ ಇರುವ ಬಗ್ಗೆಯೂ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಇಂತಹ ನಡವಳಿಕೆಗಳು ಕೇಂದ್ರ ಸರ್ಕಾರದ ನಿಲುವೆಂದು ಪರಿಗಣಿಸಲ್ಪಡುವ ಕಾರಣ, ಅವರ ಈ ನಿಲುವುಗಳು ಸರ್ಕಾರದ ವಲಯದಲ್ಲೇ ಭಾರೀ ಆಕ್ಷೇಪಕ್ಕೆ ಕಾರಣವಾಗಿತ್ತು.

ಕಾರಣ 3

ಬಿಹಾರ ಪ್ರಯೋಗದ ಉದ್ದೇಶ

ವರ್ಷಾಂತ್ಯದಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ತನ್ನ ನೆಲೆಯನ್ನು ಭದ್ರವಾಗಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಎನ್‌ಡಿಎ ಕೂಟದ ಭಾಗವಾಗಿರುವ ಜೆಡಿಯು ಬೆಂಬಲ ಉಳಿಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ, ಸಿಎಂ ನಿತೀಶ್‌ ಕುಮಾರ್ ಅವರನ್ನು ಅವರ ಬಿಹಾರ ಮೂಲದ ಯಾವುದಾದರೂ ಹಿರಿಯ ರಾಜಕೀಯ ನಾಯಕನನ್ನು ಉಪರಾಷ್ಟ್ರಪತಿ ಮಾಡಲು, ಧನಕರ್‌ ಅವರನ್ನು ಆ ಸ್ಥಾನದಿಂದ ಇಳಿಸಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ, ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್, ‘ನಿತೀಶ್‌ರನ್ನು ವಿಪಿ ಮಾಡಿದರೆ ಬಿಹಾರಕ್ಕೆ ಒಳ್ಳೆಯದು’ ಎಂದು ಹೇಳಿದ್ದಾರೆ.

ಕಾರಣ 4

ಹಿರಿಯ ಸಚಿವರಿಂದ ಅವಮಾನ

ಮುಂಗಾರು ಅಧಿವೇಶನದ ಮೊದಲ ದಿನ ಸಂಜೆ ಧನಕರ್‌ ದಿಢೀರ್‌ ರಾಜೀನಾಮೆ ನೀಡಿರುವುದಕ್ಕೆ, ಕೆಲ ಸಚಿವರ ನಡೆಯಿಂದ ಅವರಿಗಾದ ಅವಮಾನವೇ ಕಾರಣ ಎನ್ನಲಾಗುತ್ತಿದೆ. ನ್ಯಾ। ವರ್ಮಾ ಅವರ ವಾಗ್ದಂಡನೆ ವಿಷಯದ ಬಗ್ಗೆ ಕಲಾಪ ಸಲಹಾ ಸಮಿತಿಯಲ್ಲಿ ಅಂತಿಮ ನಿರ್ಧಾರಕ್ಕೆ ಧನಕರ್‌ ಒಲವು ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ಒಲವು ಹೊಂದಿರದ ಸರ್ಕಾರ ಬೆಳಗ್ಗೆ ಈ ಕುರಿತು ನಡೆದ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಹೀಗಾಗಿ ಸಂಜೆ ವೇಳೆ ನಡೆವ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಧನಕರ್‌ ಸರ್ಕಾರದ ಹಿರಿಯ ಸಚಿವರಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಆದರ ಸಂಜೆ ನಡೆದ ಸಭೆಗೆ ಹಿರಿಯ ಸಚಿವರಾದ ಜೆ.ಪಿ.ನಡ್ಡಾ, ಕಿರಣ್‌ ರಿಜಿಜು ಸೇರಿದಂತೆ ಹಲವು ಸಚಿವರೇ ಗೈರಾಗುವ ಮೂಲಕ ಧನಕರ್‌ ಅವರನ್ನು ಸುಮ್ಮನಾಗಿಸುವ ಯತ್ನ ಮಾಡಿದ್ದರು. ಇದರಿಂದ ಬೇಸತ್ತ ಧನಕರ್‌, ಸಂಜೆಯವರೆಗೂ ನಡೆದ ರಾಜ್ಯಸಭೆಯ ಕಲಾಪದಲ್ಲಿ ಭಾಗವಾಗಿಸಿ ಬಳಿಕ ದಿಢೀರ್‌ ರಾಜೀನಾಮೆ ಪ್ರಕಟಿಸಿದರು ಎನ್ನಲಾಗಿದೆ.

ಸಂಭಾವ್ಯ ಕಾರಣ

- ಸರ್ಕಾರಕ್ಕೆ ಮಾಹಿತಿ ನೀಡದೇ ನ್ಯಾ। ವರ್ಮಾ ವಾಗ್ದಂಡನೆ ನಿರ್ಣಯಕ್ಕೆ ಒಪ್ಪಿಗೆ

- ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವಿರುದ್ಧ ನೇರಾನೇರ ಸಮರ, ಹೇಳಿಕೆಗಳು

- ಬಿಹಾರ ಚುನಾವಣೆ ನಿಮಿತ್ತ ಬಿಹಾರಿ ವ್ಯಕ್ತಿ ಉಪರಾಷ್ಟ್ರಪತಿ ಮಾಡಲು ಕೇಂದ್ರ ಪ್ಲಾನ್‌

- ಕೆಲ ಕೇಂದ್ರ ಸಚಿವರಿಂದ ಪದೇ ಪದೇ ಅವಮಾನ, ಇದರಿಂದ ನೊಂದಿದ್ದ ಧನಕರ್‌

PREV
Read more Articles on

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ನಿತೀಶ್‌, ತರೂರ್‌, ಹರಿವಂಶ್‌
ದೇಹದೊಳಗೆ ಅಡಗಿಸಿಟ್ಟು ದುಬೈನಿಂದ 28 ಕೆಜಿ ಚಿನ್ನದ ಪೇಸ್ಟ್‌ ತಂದಿದ್ದ ದಂಪತಿ ಸೆರೆ