ಗೋವಾದಲ್ಲಿ ಬೆಂಗಳೂರಿಗನಿಂದ ದಾಖಲೆ ಪ್ರಮಾಣದ ಡ್ರಗ್ಸ್‌ ವಶ - ಯುವಕ ಗೌತಮ್‌ ಬಂಧನ

ಸಾರಾಂಶ

11.67 ಕೋಟಿ ರು. ಮೌಲ್ಯದ 11 ಕೇಜಿ ಗಾಂಜಾ ಸಾಗಿಸುತ್ತಿದ್ದ ಬೆಂಗಳೂರು ಮೂಲದ ಗೌತಮ್ (23) ಎಂಬಾತನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಗೋವಾದ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್​ ಜಪ್ತಿ ಮಾಡಿದ್ದು ಇದೇ ಮೊದಲು ಎಂದು ಪೊಲೀಸರು ತಿಳಿಸಿದ್ದಾರೆ.

 ಪಣಜಿ: 11.67 ಕೋಟಿ ರು. ಮೌಲ್ಯದ 11 ಕೇಜಿ ಗಾಂಜಾ ಸಾಗಿಸುತ್ತಿದ್ದ ಬೆಂಗಳೂರು ಮೂಲದ ಗೌತಮ್ (23) ಎಂಬಾತನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಗೋವಾದ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್​ ಜಪ್ತಿ ಮಾಡಿದ್ದು ಇದೇ ಮೊದಲು ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ನೇಪಾಳದಿಂದ ಭಾರತಕ್ಕೆ ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದ. ಈತನ ಚಲನವಲನದ ಮೇಲೆ ರಾಜ್ಯ ಗುಪ್ತಚರ ಇಲಾಖೆ ಕಳೆದೊಂದು ತಿಂಗಳಿನಿಂದ ನಿಗಾ ಇಟ್ಟಿತ್ತು. ಮಾದಕ ದ್ಯವ್ಯ ತೆಗೆದುಕೊಂಡು ಗೋವಾಕ್ಕೆ ಬಂದ ಖಚಿತ ಮಾಹಿತಿ ಆಧರಿಸಿ, ಗುಯಿರಿಮ್‌ನಲ್ಲಿ ಯುವಕನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಎಂ ಸಾವಂತ್‌ ಹರ್ಷ:

ಈ ಕುರಿತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, ‘ಗೋವಾ ಸರ್ಕಾರ ಮಾದಕ ವಸ್ತುಗಳ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಗೆ ಬದ್ಧವಾಗಿದೆ. ಮಾದಕ ವಸ್ತು ಕಳ್ಳಸಾಗಣೆದಾರರ ವಿರುದ್ಧ ಎನ್​ಡಿಪಿಎಸ್​ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ. ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಗೋವಾ ಪೊಲೀಸರು ಹಾಗೂ ಅಪರಾಧ ವಿಭಾಗದ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

2 ತಿಂಗಳಲ್ಲಿ 18 ಮಂದಿ ಬಂಧನ:

ರಾಜ್ಯದಲ್ಲಿ ಮಾದಕ ದ್ರವ್ಯ ಸಾಗಾಟವನ್ನು ಮಟ್ಟಹಾಕಲು ಗೋವಾ ಪೊಲೀಸರು ‘ಆಪರೇಷನ್ ಪ್ರಹಾರ್’ ಅನ್ನು ಪ್ರಾರಂಭಿಸಿದ್ದಾರೆ. 2025ರ ಮೊದಲ 2 ತಿಂಗಳಲ್ಲಿ ಉತ್ತರ ಗೋವಾದಲ್ಲಿ 18 ಜನರನ್ನು ಬಂಧಿಸಿ 40 ಲಕ್ಷ ರು. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Share this article