ಸರ್ಕಾರಿ ನೇಮಕಾತಿ ಪ್ರಕ್ರಿಯೆ ಆರಂಭದ ಬಳಿಕ ಅರ್ಹತಾ ನಿಯಮ ಬದಲಿಸುವಂತಿಲ್ಲ: ಸುಪ್ರೀಂ

KannadaprabhaNewsNetwork |  
Published : Nov 07, 2024, 11:48 PM ISTUpdated : Nov 08, 2024, 05:18 AM IST
Supreme Court

ಸಾರಾಂಶ

‘ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅದರ ಅರ್ಹತಾ ನಿಯಮಗಳನ್ನು ಬದಲಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

 ನವದೆಹಲಿ : ‘ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅದರ ಅರ್ಹತಾ ನಿಯಮಗಳನ್ನು ಬದಲಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ‘ಆದರೆ ಒಂದು ವೇಳೆ ನೇಮಕಾತಿ ಸಂಬಂಧದ ಚಾಲ್ತಿ ನಿಯಮಗಳಲ್ಲಿ ಮತ್ತು ನೇಮಕಾತಿ ಕುರಿತ ಜಾಹೀರಾತಲ್ಲಿ, ಯಾವುದೇ ಹಂತದಲ್ಲಿ ಅರ್ಹತಾ ನಿಯಮ ಬದಲಿಸಬಹುದು ಎಂದು ಮೊದಲೇ ನಮೂದಿಸಿದ್ದರೆ ಆಗ ಅಂಥ ಬದಲಾವಣೆಗೆ ಅವಕಾಶ ಇದೆ’ ಎಂದು ನ್ಯಾಯಾಲಯ ಸ್ಪಷ್ಟನೆ ನೀಡಿದೆ.

ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ನಿಯಮಗಳ ಬದಲಾವಣೆಗೆ ಅವಕಾಶ ಕುರಿತು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಪ್ರತ್ಯೇಕ ಹೈಕೋರ್ಟ್‌ಗಳು ಭಿನ್ನ ತೀರ್ಪು ನೀಡಿದ್ದವು. ಹೀಗಾಗಿ 2013ರಲ್ಲಿ ಸುಪ್ರೀಂಕೋರ್ಟ್‌ನ ಮೂವರು ಸದಸ್ಯರ ನ್ಯಾಯಪೀಠ, ಪ್ರಕರಣವನ್ನು ಪಂಚ ಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು.

ಈ ಕುರಿತು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ‘ನೇಮಕಾತಿ ಪ್ರಕ್ರಿಯೆಯು ಅರ್ಜಿ ಆಹ್ವಾನಕ್ಕೆ ಜಾಹೀರಾತು ನೀಡುವುದರಿಂದ ಆರಂಭವಾಗಿ, ಹುದ್ದೆಗಳನ್ನು ತುಂಬುವುದರೊಂದಿಗೆ ಅಂತಿಮವಾಗುತ್ತದೆ. ನೇಮಕಾತಿ ಸಂಬಂಧ ಜಾಹೀರಾತಿನಲ್ಲಿ ನೀಡಿದ್ದ ಅರ್ಹತಾ ನಿಯಮಗಳನ್ನು ಒಮ್ಮೆ ಪ್ರಕ್ರಿಯೆ ಆರಂಭವಾದ ಬಳಿಕ ಬದಲಾವಣೆ ಮಾಡುವಂತಿಲ್ಲ’ ಎಂದಿತು.

‘ಆದರೆ, ಒಂದು ವೇಳೆ ಇಂಥ ಬದಲಾವಣೆಗೆ ಅವಕಾಶ ಇದೆ ಎಂದು ಚಾಲ್ತಿ ನಿಯಮಗಳಲ್ಲಿ ಪ್ರಸ್ತಾಪಿಸಿದ್ದರೆ ಅಥವಾ ಈ ಬಗ್ಗೆ ಜಾಹೀರಾತಿನಲ್ಲೇ ನಮೂದು ಮಾಡಿದ್ದರೆ ಆಗ ಅರ್ಹತಾ ನಿಯಮಗಳನ್ನು ಬದಲಾವಣೆ ಮಾಡಬಹುದು. ಜೊತೆಗೆ ಇಂಥ ನಿಯಮಗಳು ಕೂಡಾ ಸಂವಿಧಾನದ 14ನೇ ವಿಧಿಯಲ್ಲಿ ಪ್ರಸ್ತಾಪಿಸಿರುವ ಸಮಾನತೆಯ ಹಕ್ಕಿನ ಅರ್ಹತೆಗಳನ್ನು ಪೂರೈಸಿರಬೇಕು’ ಎಂದು ಸ್ಪಷ್ಟಪಡಿಸಿತು.

ಇದೇ ವೇಳೆ, ’ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರಿದೆ ಎನ್ನುವ ಏಕೈಕ ವಿಷಯ ಯಾವುದೇ ಅಭ್ಯರ್ಥಿಗೆ ನೇಮಕದ ಹಕ್ಕನ್ನು ನೀಡುವುದಿಲ್ಲ. ಖಾಲಿ ಇರುವ ಹುದ್ದೆಯನ್ನು ತುಂಬದೇ ಬಿಡುವ ಅಧಿಕಾರ ಸರ್ಕಾರಗಳಿಗೆ ಇರುತ್ತದೆ. ಆದರೆ ಹಾಗೆಂದು ಹುದ್ದೆ ಖಾಲಿ ಇದ್ದ ಹೊರತಾಗಿಯೂ ಸರ್ಕಾರಗಳು, ಏಕಪಕ್ಷೀಯವಾಗಿ ಯಾವುದೇ ವ್ಯಕ್ತಿಗೆ ನೇಮಕಾತಿಯನ್ನು ನಿರಾಕರಿಸುವಂತಿಲ್ಲ’ ಎಂದು ನ್ಯಾಯಾಲಯ ಹೇಳಿತು.

ಈ ಮೂಲಕ ಸರ್ಕಾರಿ ನೇಮಕಾತಿಯಲ್ಲಿ ಅರ್ಹತೆಗಳನ್ನು ಬದಲಾವಣೆ ಮಾಡುವ ಕುರಿತು ಇದ್ದ ಗೊಂದಲಗಳಿಗೆ ಪರಿಹಾರ ನೀಡುವ ಕೆಲಸ ಮಾಡಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ