;Resize=(412,232))
ವಾಷಿಂಗ್ಟನ್: ರಾತ್ರಿ ಹೊತ್ತಿನಲ್ಲೂ ಭೂಮಿಗೆ ಸೂರ್ಯನ ಬೆಳಕನ್ನು ನೀಡುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಅಮೆರಿಕ ಮೂಲದ ರಿಫ್ಲೆಕ್ಟ್ ಆರ್ಬಿಟಲ್ ಕಂಪನಿ ರೂಪಿಸಿದೆ. ಗಂಟೆ, ದಿನದ ಲೆಕ್ಕದಲ್ಲಿ ಸೂರ್ಯನ ಬೆಳಕನ್ನು ಬಾಡಿಗೆ ನೀಡುವ ಈ ಯೋಜನೆಗೆ ಅಗತ್ಯವಾದ ಉಪಗ್ರಹ ಹಾರಿಸುವ ಹಕ್ಕನ್ನು ಅಮೆರಿಕ ಕಂಪನಿ ಹೈದರಾಬಾದ್ ಮೂಲದ ಸ್ಕೈರೂಟ್ ಕಂಪನಿಗೆ ವಹಿಸಿದೆ.
ಕ್ಯಾಲಿಫೋರ್ನಿಯಾ ಮೂಲದ ರಿಫ್ಲೆಕ್ಟ್ ಆರ್ಬಿಟಲ್, ಕಂಪನಿಯು ಭೂಕಕ್ಷೆಯಲ್ಲಿ ಹಲವು ಉಪಗ್ರಹಗಳನ್ನು ಹಾರಿಬಿಟ್ಟು ಬೃಹತ್ ಪ್ರತಿಫಲಿಸುವ ಫಲಕಗಳ ಮೂಲಕ ಸೂರ್ಯನ ಬೆಳಕನ್ನು ಬಳಸಿಕೊಂಡು ಬೇಡಿಕೆ ಆಧಾರದ ಮೇಲೆ ರಾತ್ರಿ ಹೊತ್ತಲ್ಲೂ ಸೂರ್ಯನ ಬೆಳಕು ಒದಗಿಸಲಿದೆ. ರಾತ್ರಿ ವೇಳೆ ಸಂಭವಿಸುವ ದುರಂತ, ಪ್ರಾಕೃತಿಕ ವಿಕೋಪಗಳಂಥ ಸಂದರ್ಭದಲ್ಲಿ ಹುಡುಕಾಟ ಕಾರ್ಯಾಚರಣೆ ಸೇರಿ ಹಲವು ಉದ್ದೇಶಗಳಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಕಂಪನಿ ತಿಳಿಸಿದೆ.
ಈ ಸಂಬಂಧ ಭಾರತದಲ್ಲಿ ಮೊದಲ ಬಾರಿ ಖಾಸಗಿ ರಾಕೆಟ್ನ ಯಶಸ್ವಿ ಪ್ರಯೋಗ ನಡೆಸಿರುವ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಜತೆಗೆ ಕಂಪನಿಯು ಒಪ್ಪಂದ ಮಾಡಿಕೊಂಡಿದೆ. ಸ್ಕೈರೂಟ್ನ ವಿಕ್ರಂ ರಾಕೆಟ್ ಬಳಸಿಕೊಂಡು ಕಂಪನಿಯು ಎರಡು ಉಪಗ್ರಹಗಳನ್ನು ನಭದಲ್ಲಿ ಕೂರಿಸಲಿದೆ.
ಬಾಹ್ಯಾಕಾಶ ತಂತ್ರಜ್ಞಾನವನ್ನು ವಿನೂತನ ರೀತಿಯಲ್ಲಿ ಬಳಸಿಕೊಂಡು ಭೂಮಿಯಲ್ಲಿ ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯುತ್ತಿರುವ ರಿಫ್ಲೆಕ್ಟ್ ಆರ್ಬಿಟಲ್ ಸಂಸ್ಥೆ ಜತೆ ಒಪ್ಪಂದಕ್ಕೆ ನಾವು ತೀವ್ರ ಉತ್ಸುಕರಾಗಿದ್ದೇವೆ ಎಂದು ಸ್ಕೈರೂಟ್ ಏರೋಸ್ಪೇಸ್ ಸಿಇಒ ಪವನ್ ಚಂದನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐದು ಕಿ.ಮೀ. ವ್ಯಾಪ್ತಿಯಲ್ಲಿ ಯಾವಾಗ ಬೇಕಿದ್ದರೂ ಸೂರ್ಯನ ಬೆಳಕನ್ನು ಎಷ್ಟು ಬೇಕೋ, ಅಷ್ಟು ಪ್ರತಿಫಲಿಸುವ ರೀತಿ ಸೇವೆಯನ್ನು ಕಂಪನಿ ನೀಡಲಿದೆ. ರಕ್ಷಣಾ ಕಾರ್ಯಾಚರಣೆ, ಕೈಗಾರಿಕಾ ವಲಯಗಳಲ್ಲಿನ ಕೆಲಸದ ಅವಧಿ ವಿಸ್ತರಣೆ, ಸಾರ್ವಜನಿಕ ಕಾರ್ಯಕ್ರಮಗಳು, ರಾತ್ರಿ ಹೊತ್ತಲ್ಲೂ ರಕ್ಷಣಾ ಕಾರ್ಯಕ್ಕೆ ನೆರವು, ಸೋಲಾರ್ ಪಾರ್ಕ್ಗಳಿಂದ ರಾತ್ರಿ ಹೊತ್ತೂ ವಿದ್ಯುತ್ ಉತ್ಪಾದನೆಗೆ ಈ ಸೇವೆ ಬಳಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಉದ್ದೇಶ ಏನು?
- ಸೂರ್ಯನ ಬೆಳಕು ಪ್ರತಿಫಲಿಸಲು ಹಲವು ವಿಶೇಷ ಉಪಗ್ರಹಗಳ ಉಡಾವಣೆ
- ಸೂರ್ಯನ ಬೆಳಕನ್ನು ಬಳಸಿ ರಾತ್ರಿ ಹೊತ್ತಿನಲ್ಲಿ ಇವುಗಳಿಂದ ಪ್ರಖರ ಪ್ರತಿಫಲನ
- ರಾತ್ರಿ ವೇಳೆ ದುರಂತ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಬೆಳಕು ಬಳಕೆ
- ಹುಡುಕಾಟ ಕಾರ್ಯಾಚರಣೆ ಸೇರಿ ಹಲವು ಉದ್ದೇಶಗಳಿಗೆ ಇದರಿಂದ ಅನುಕೂಲ
- 5 ಕಿ.ಮೀ. ವ್ಯಾಪ್ತಿಯಲ್ಲಿ ರಾತ್ರಿ ಬೀಳುವ ಬೆಳಕಿನಿಂದ ಶೋಧ ಕಾರ್ಯ ಸರಾಗ
- ಸೌರ ಪಾರ್ಕ್ಗಳು ರಾತ್ರಿ ವಿದ್ಯುತ್ ಉತ್ಪಾದನೆಗೂ ಇದನ್ನು ಬಳಸಬಹುದು