ಬೆಂಗಳೂರು : ಕಳೆದ ವರ್ಷ ಜೂನ್‌ನಲ್ಲಿ ನಡೆದಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ, ಹಲ್ಲೆ, ಕೊಲೆ ಮತ್ತು ಸಾಕ್ಷ್ಯನಾಶ ಆರೋಪ ಸಂಬಂಧ ನಟ ದರ್ಶನ್ ಮತ್ತು ಗೆಳತಿ ಪವಿತ್ರಾಗೌಡ ಸೇರಿ ಒಟ್ಟು 17 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಪ್ರಕ್ರಿಯೆಯನ್ನು ಸೋಮವಾರ ಪೂರ್ಣಗೊಳಿಸಿರುವ ನ್ಯಾಯಾಲಯ, ಪ್ರಕರಣದ ಮುಖ್ಯ ವಿಚಾರಣೆಯನ್ನು ಶೀಘ್ರದಲ್ಲೇ ಆರಂಭಿಸಲಿದೆ.
ಪ್ರಕರಣ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಐ.ಪಿ.ನಾಯಕ್ ಅವರು, ಪವಿತ್ರಾಗೌಡ, ದರ್ಶನ್ ಮತ್ತವರ ಗ್ಯಾಂಗಿನ ಎಲ್ಲಾ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದನ್ನು ಪರಿಗಣಿಸಿ ದೋಷಾರೋಪ ನಿಗದಿಪಡಿಸಿ ಟ್ರಯಲ್ (ವಿಚಾರಣೆ) ನಡೆಸಲು ತೀರ್ಮಾನಿಸಿ ಆದೇಶಿಸಿತು.
ಇದರಿಂದ ಈವರೆಗೆ ಪ್ರಕರಣ ಕುರಿತು ಆರೋಪಿಗಳ ನ್ಯಾಯಾಂಗ ಬಂಧನ, ಜಾಮೀನು ಮಂಜೂರಾತಿ, ಜೈಲಿನಿಂದ ಆರೋಪಿಗಳ ವರ್ಗಾವಣೆ, ಜೈಲಿನಲ್ಲಿ ಸೌಲಭ್ಯ ಕಲ್ಪಿಸುವ ಮತ್ತು ಆರೋಪಗಳನ್ನು ಕೈ ಬಿಡುವ ವಿಚಾರಗಳ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.
ಅಂದರೆ ಇನ್ನು ನ.10ರಿಂದ ತನಿಖಾಧಿಕಾರಿಗಳು ಈಗಾಗಲೇ ಸಲ್ಲಿಸಿರುವ 5 ಸಾವಿರಕ್ಕೂ ಹೆಚ್ಚಿನ ಪುಟಗಳ ದೋಷಾರೋಪ ಪಟ್ಟಿ, ಅದರಲ್ಲಿ ಉಲ್ಲೇಖಿಸಿರುವ 200ಕ್ಕೂ ಅಧಿಕ ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ವಾದ ಮತ್ತು ಪ್ರಾಸಿಕ್ಯೂಷನ್ (ಸರ್ಕಾರಿ ಅಭಿಯೋಜಕರ) ಪ್ರತಿವಾದವನ್ನು ಕೋರ್ಟ್ ಆಲಿಸಲಿದೆ.ಪವಿತ್ರಾಗೌಡ, ದರ್ಶನ್, ಪ್ರದೋಷ್ ಸೇರಿ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಆ.4ರಂದು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕಾನೂನು ಪ್ರಕಾರ ತೀರ್ಪು ಹೊರಡಿಸಬೇಕು ಎಂದು ನಗರದ ಸೆಷನ್ಸ್ ಕೋರ್ಟ್‌ಗೆ ನಿರ್ದಿಷ್ಟ ನಿರ್ದೇಶನ ನೀಡಿತ್ತು. ಇದೀಗ ಸೋಮವಾರ ದೋಷಾರೋಪ ನಿಗದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರಿಂದ ಕಡಿಮೆ ಅವಧಿಯಲ್ಲೇ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ಪೂರ್ಣಗೊಳಿಸಿ ಆದೇಶ ಪ್ರಕಟಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಪ್ರಕರಣದ ಕುರಿತು ಅ.31ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ನ.3ರಂದು ದೋಷಾರೋಪಗಳನ್ನು ನಿಗದಿಪಡಿಸಲಾಗುವುದು. ಇದರಿಂದ ಎಲ್ಲಾ ಆರೋಪಿಗಳು ನ.3ರಂದು ವಿಚಾರಣೆಗೆ ಖುದ್ದು ಹಾಜರಿರಬೇಕು. ತನಿಖಾಧಿಕಾರಿಗಳು ಜೈಲಿನಲ್ಲಿರುವ ಏಳು ಆರೋಪಿಗಳನ್ನು ಹಾಜರುಪಡಿಸಬೇಕು. ಜಾಮೀನು ಮೇಲಿರುವ ಉಳಿದ ಆರೋಪಿಗಳು ತಪ್ಪದೇ ಖುದ್ದು ವಿಚಾರಣೆಗೆ ಹಾಜರಾಗಬೇಕು. ತಪ್ಪಿದರೆ ಬಂಧನ ವಾರೆಂಟ್ ಜಾರಿಗೊಳಿಸಲಾಗುವುದು ಎಂದು ಕಟು ಎಚ್ಚರಿಕೆ ನೀಡಿತ್ತು.
ಅದರಂತೆ ಜೈಲಿನಲ್ಲಿದ್ದ ಪವಿತ್ರಾ ಗೌಡ, ದರ್ಶನ್ ಸೇರಿ 7 ಮಂದಿ ಆರೋಪಿಗಳನ್ನು ಪೊಲೀಸರು ಹಾಜರುಪಡಿಸಿದ್ದರು. ಜಾಮೀನು ಮೇಲಿದ್ದ 10 ಮಂದಿ ಆರೋಪಿಗಳೂ ವಿಚಾರಣೆಗೆ ಖುದ್ದು ಹಾಜರಾಗಿದ್ದರು.
ನಂತರ 2024ರ ಜೂ.8ರಂದು ಮೃತ ರೇಣುಕಾಸ್ವಾಮಿ ಆರೋಪಿ ಪವಿತ್ರಗೌಡಗೆ (ಎ-1) ಕಳುಹಿಸಿದ ಮೆಸೇಜ್‌ಗೆ ಸಂಬಂಧಿಸಿ ಆರೋಪಿಗಳೆಲ್ಲರೂ ಒಳಸಂಚು, ಸಾಕ್ಷ್ಯನಾಶ, ಮಾರಣಾಂತಿಕ ಕೊಲೆ ಹಾಗೂ ಅಕ್ರಮಕೂಟದಲ್ಲಿ ಭಾಗಿಯಾಗಿದ್ದೀರಿ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಆರ್.ಆರ್.ನಗರದ ಪಟ್ಟಣಗೆರೆ ಶೆಡ್ ವೊಂದಕ್ಕೆ ಕರೆತಂದು ಮರದ ದಿಮ್ಮಿಯಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಚಪ್ಪಲಿಯಿಂದ ಪವಿತ್ರಗೌಡ ಹೊಡೆದು ಹಲ್ಲೆ ಮಾಡಿದರೆ, ಪ್ರಕರಣದ ಎರಡನೇ ಆರೋಪಿ ದರ್ಶನ್, ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿ ಹಲ್ಲೆ ನಡೆಸಿದ್ದಾರೆ. ಕೆಲ ಅರೋಪಿಗಳಿಗೆ ಹಣದ ಆಸೆ ತೋರಿಸಿ ಸಂಚಿನಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ. ಕೃತ್ಯದ ವೇಳೆ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಫೋಟೊವನ್ನು ಡಿಲೀಟ್ ಮಾಡಿ ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ಓದಿ ಹೇಳಿದ ನ್ಯಾಯಾಧೀಶರು, ಹತ್ಯೆ ಪ್ರಕರಣದಲ್ಲಿ ನಿಮ್ಮ ಮೇಲಿನ ಆರೋಪಗಳಿಗೆ ಏನು ಹೇಳುವಿರಿ ಎಂದು 10ರಿಂದ 15 ನಿಮಿಷಗಳ ಕಾಲ ಆರೋಪಿಗಳಿಗೆ 12 ಪುಟಗಳಲ್ಲಿದ್ದ ದೋಷಾರೋಪಗಳ ಸಾರಾಂಶ ಓದಿ ತಿಳಿಸಿದರು.
ಬಳಿಕ ನಿಮ್ಮ ಮೇಲಿನ ದೋಷಾರೋಪ ಪಟ್ಟಿಯಲ್ಲಿ ನೀವು ಮಾಡಿರುವ ಅಪರಾಧದ ಬಗ್ಗೆ ವಿವರಣೆ ಕನ್ನಡದಲ್ಲಿ ಓದಿ ಹೇಳಿದ್ದು ಅರ್ಥವಾಯಿತೇ? ಎಂದು ಕೇಳಿದರು. ಅದಕ್ಕೆ ಆರೋಪಿಗಳು, ಹೌದು ಅರ್ಥವಾಯಿತು ಎಂದು ಉತ್ತರಿಸಿದರು. ನಂತರ ಈ ಅಪರಾಧವನ್ನು ನೀವು ಒಪ್ಪುತ್ತೀರಾ ಅಥವಾ ವಿಚಾರಣೆ ಆಗಬೇಕೇ? ಎಂದು ಎರಡನೇ ಪ್ರಶ್ನೆ ಕೇಳಿದರು.
ಅದಕ್ಕೆ 17 ಆರೋಪಿಗಳು, ನಮಗೂ ಮತ್ತು ಕೊಲೆಗೆ ಯಾವುದೇ ಸಂಬಂಧವಿಲ್ಲ. ನಮ್ಮ ಮೇಲಿನ ಆರೋಪಗಳು ಸುಳ್ಳು. ಹೀಗಾಗಿ ಪ್ರಕರಣದ ವಿಚಾರಣೆ ಎದುರಿಸಲು ಸಿದ್ಧ ಎಂದು ಉತ್ತರಿಸಿದರು. ಆ ಮೂಲಕ ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು.
ಈ ಅಂಶ ದಾಖಲಿಸಿದ ನ್ಯಾಯಾಧೀಶರು, ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವುದರಿಂದ ಪ್ರಕರಣದ ವಿಚಾರಣೆ (ಟ್ರಯಲ್) ನಡೆಸಲಾಗುತ್ತದೆ ಎಂದು ತಿಳಿಸಿ ವಿಚಾರಣೆಯನ್ನು ನ.10ಕ್ಕೆ ಮುಂದೂಡಿದರು. ಅಲ್ಲಿಗೆ ದೋಷಾರೋಪ ಹೊರಿಸುವ ಪ್ರಕ್ರಿಯೆ ಪೂರ್ಣಗೊಂಡಿತು.
ಪ್ರಕರಣದ 14ನೇ ಆರೋಪಿ ಎಸ್.ಪ್ರದೂಷ್ ತಂದೆ ನಿಧನ ಹಿನ್ನೆಲೆಯಲ್ಲಿ 57ನೇ ಸಿಸಿಎಚ್ ನ್ಯಾಯಾಲಯ ಒಂದು ತಿಂಗಳ ಮಧ್ಯಂತರ ಜಾಮೀನು ನೀಡಿತ್ತು. ಸೋಮವಾರ 11ನೇ ದಿನದ ತಿಥಿ ಕಾರ್ಯ ಮಾಡಬೇಕಿತ್ತು. ಆದರೆ, ಕೋರ್ಟ್ ದೋಷಾರೋಪ ನಿಗದಿಪಡಿಸಿ ಎಲ್ಲಾ ಆರೋಪಿಗಳು ಖುದ್ದು ಹಾಜರಾಗುವಂತೆ ಆದೇಶಿಸಿದ್ದರಿಂದ ಅನಿವಾರ್ಯವಾಗಿ ಪ್ರದೂಷ್ ನ್ಯಾಯಾಲಯಕ್ಕೆ ಹಾಜರಾದರು.
ವಿಚಾರಣೆ ದಿನಾಂಕ
10ಕ್ಕೆ ಪ್ರಕಟ: ವಕೀಲರು
ವಿಚಾರಣೆ ಮುಗಿದ ಬಳಿಕ ಪವಿತ್ರಾಗೌಡ, ದರ್ಶನ್ ಪರ ವಕೀಲರು ಮಾಧ್ಯಮಗಳೊಂದಿಗೆ ಮಾತನಾಡಿ, ಆರೋಪಿಗಳ ದೋಷಾರೋಪ ನಿಗದಿ ಪ್ರಕ್ರಿಯೆ ಮುಕ್ತಾಯವಾಗಿದೆ. ಟ್ರಯಲ್ ದಿನಾಂಕವನ್ನು ನ್ಯಾಯಾಲಯ ನ.10ರಂದು ತಿಳಿಸಲಿದೆ. ಪೊಲೀಸರು ಗ್ರಂಥಗಳಂತೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಆರೋಪಿಗಳು ವಿಚಾರಣೆ ಎದುರಿಸಲಿದ್ದಾರೆ ಎಂದು ತಿಳಿಸಿದರು.
ಕೋರ್ಟ್‌ನಲ್ಲಿ ಜನಸಾಗರ
ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮಾಹಿತಿ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಕಾಣಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದರು. ಈ ವೇಳೆ ಅಭಿಮಾನಿಗಳು ಜೈಕಾರ ಕೂಗಿದರು. ಅಭಿಮಾನಿಗಳ ಘೋಷಣೆಗೆ ನಗುತ್ತಲೇ ದರ್ಶನ್ ಸಲ್ಯೂಟ್ ಮಾಡಿದರು.