ಭಾರತದ ದಿಟ್ಟೆಯರ ಹಿಂದಿದೆ ರೋಚಕ ಕಹಾನಿ

KannadaprabhaNewsNetwork |  
Published : Nov 04, 2025, 01:02 AM ISTUpdated : Nov 04, 2025, 05:53 AM IST
Indian Women's Cricket Team

ಸಾರಾಂಶ

ಭಾರತ ಮಹಿಳಾ ತಂಡ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದು ಮೆರೆದಾಡಿದೆ. ದೇಶವೇ ಈಗ ನಾರಿ ಶಕ್ತಿಯನ್ನು ಕೊಂಡಾಡುತ್ತಿದೆ. ಅಭಿನಂದನೆ, ಬಹುಮಾನಗಳ ಮಹಾಪೂರವೇ ಹರಿದುಬರುತ್ತಿದೆ. ಇದು ತೆರೆಯ ಮೇಲಿನ ವೈಭವದ ಕತೆಯಾದರೆ, ಪ್ರತಿ ಆಟಗಾರ್ತಿಯರ ತೆರೆಯ ಹಿಂದಿನ ಸ್ಟೋರಿಯೇ ಭಿನ್ನ. 

ಭಾರತ ಮಹಿಳಾ ತಂಡ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದು ಮೆರೆದಾಡಿದೆ. ದೇಶವೇ ಈಗ ನಾರಿ ಶಕ್ತಿಯನ್ನು ಕೊಂಡಾಡುತ್ತಿದೆ. ಅಭಿನಂದನೆ, ಬಹುಮಾನಗಳ ಮಹಾಪೂರವೇ ಹರಿದುಬರುತ್ತಿದೆ. ಇದು ತೆರೆಯ ಮೇಲಿನ ವೈಭವದ ಕತೆಯಾದರೆ, ಪ್ರತಿ ಆಟಗಾರ್ತಿಯರ ತೆರೆಯ ಹಿಂದಿನ ಸ್ಟೋರಿಯೇ ಭಿನ್ನ. ಅಲ್ಲಿ ಬೆಟ್ಟದಷ್ಟು ನೋವಿದೆ. ಕುಗ್ಗಿಸಿ ಬಿಡುವಷ್ಟು ಅವಮಾನದ ಕತೆಯಿದೆ. ತಮ್ಮ ಸಾಮರ್ಥ್ಯ, ಪ್ರತಿಭೆಗಳನ್ನು ಅನುಮಾನಿಸಿ, ಚುಚ್ಚು ಮಾತುಗಳನ್ನಾಡಿದವರ ಮುಂದೆಯೇ ದಿಟ್ಟತನದಿಂದ ನಿಂತು ವಿಶ್ವಕಪ್‌ ಗೆದ್ದ ವೀರ ವನಿತೆಯರ ಚರಿತ್ರೆಯಿದೆ.

12 ವಿಶ್ವಕಪ್‌ನಲ್ಲಿ ಸೋತರೂ

13ನೇ ಸಲ ಕೌರ್‌ಗೆ ಯಶಸ್ಸು

ಭಾರತಕ್ಕೆ ಕಪ್‌ ತಂದುಕೊಟ್ಟ ನಾಯಕಿ ಹರ್ಮನ್‌ಪ್ರೀತ್‌ ಕೌರ್‌. ಅವರನ್ನು ಈಗ ಕ್ರಿಕೆಟ್ ಜಗತ್ತು ಕಪಿಲ್‌ ದೇವ್‌, ಎಂ.ಎಸ್‌.ಧೋನಿಯ ಸಾಲಿನಲ್ಲಿಟ್ಟು ನೋಡುತ್ತಿದೆ. ಭಾರತದ ಯಶಸ್ವಿ ನಾಯಕಿಯಾಗಿ ಹರ್ಮನ್‌ ಛಾಪು ಮೂಡಿಸಿದ್ದಾರೆ. ಆದರೆ ಈ ಯಶಸ್ಸಿನ ಮೆಟ್ಟಿಲು ಏರುವ ಮೊದಲು 12 ಬಾರಿ ಮುಗ್ಗರಿಸಿ ಬಿದ್ದಿದ್ದರು. ಹೌದು. ಹರ್ಮನ್‌ಗಿದು 13ನೇ ವಿಶ್ವಕಪ್‌. ಏಕದಿನ ವಿಶ್ವಕಪ್‌ನಲ್ಲಿ 4, ಟಿ20 ವಿಶ್ವಕಪ್‌ನಲ್ಲಿ 8 ಬಾರಿ ಭಾರತವನ್ನು ಪ್ರತಿನಿಧಿಸಿದ್ದರೂ ಹರ್ಮನ್‌ಗೆ ಟ್ರೋಫಿ ಸಿಕ್ಕಿರಲಿಲ್ಲ. 13ನೇ ಪ್ರಯತ್ನದಲ್ಲಿ, ತಮ್ಮ 36ನೇ ವರ್ಷದಲ್ಲಿ ಕಪ್‌ ಗೆದ್ದಿದ್ದಾರೆ ಪಂಜಾಬ್‌ನ ಸ್ಟೈಲಿಶ್‌ ಬ್ಯಾಟರ್‌. ಈ ಮೂಲಕ ತಮ್ಮ ನಾಯಕತ್ವ, ಆಟವನ್ನು ಪ್ರಶ್ನಿಸಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅಂದಹಾಗೆ ಹರ್ಮನ್‌ ಭಾರತದ ಪರ 161 ಏಕದಿನ, 182 ಟಿ20, 6 ಟೆಸ್ಟ್‌ ಆಡಿದ್ದಾರೆ.

ಕಟು ಟೀಕೆಗಳಿಂದಲೇ ನೊಂದು

ಬೆಂದಿದ್ದ ಜೆಮಿಮಾ ರೋಡ್ರಿಗ್ಸ್‌

ಜೆಮಿಮಾ ರೋಡ್ರಿಗ್ಸ್‌. ಭಾರತ ಈಗ ಚಾಂಪಿಯನ್‌ ಆಗಿದ್ದರೆ, ಅದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ತಂಡವನ್ನು ತಮ್ಮ ಕೆಚ್ಚೆದೆಯ ಹೋರಾಟದಿಂದ ಗೆಲ್ಲಿಸಿದ ಸ್ಟಾರ್‌ ಆಟಗಾರ್ತಿ. ಯಾವುದೇ ಆಟಗಾರ್ತಿಯರ ಪಾಲಿಗೆ ಹಾಸ್ಯಗಾರ್ತಿಯಾಗಿ, ಉತ್ಸಾಹದ ಚಿಲುಮೆಯಾಗಿ, ತಂಡ ಗೆದ್ದಾಗ ವಿಶಿಷ್ಟ ಸಂಭ್ರಮಾಚರಣೆ, ವಿಶೇಷ ಸೆಲ್ಫಿಗಳ ಮೂಲಕವೇ ಗುರುತಿಸಿಕೊಳ್ಳುವ ಜೆಮಿಮಾ ಕೂಡಾ ಕಟು ಟೀಕೆ, ಅವಮಾನಗಳಿಗೆ ಹೊರತಾಗಿಲ್ಲ. ಹಾಕಿಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿ, ಬಳಿಕ ತಮ್ಮ 17ನೇ ವರ್ಷದಲ್ಲೇ ಭಾರತ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜೆಮಿಮಾ ತಮ್ಮ ಧರ್ಮದ ಕಾರಣಕ್ಕೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಧಾರ್ಮಿಕ ವಿಚಾರದಲ್ಲಿ ತಂದೆಯ ಮೇಲೆ ಕೇಳಿಬಂದ ಆರೋಪದಿಂದ ಸಂಪೂರ್ಣ ಕುಗ್ಗಿಹೋಗಿದ್ದ ಜೆಮಿಮಾ, ಈಗ ದೇಶದ ವಿಶ್ವಕಪ್ ಗೆಲುವಿನ ರೂವಾರಿಗಳಲ್ಲೊಬ್ಬರು.

ಮಹಿಳಾ ಕ್ರಿಕೆಟ್‌ನ ‘ವಿರಾಟ್‌’

ಸ್ಮೃತಿಗೆ ಕೊನೆಗೂ ಸಿಕ್ತು ಕಪ್

ಪುರುಷರ ಕ್ರಿಕೆಟ್‌ನ ಐಕಾನ್‌ ವಿರಾಟ್‌ ಕೊಹ್ಲಿ ಆಗಿದ್ದರೆ, ಮಹಿಳಾ ಕ್ರಿಕೆಟ್‌ ಪಾಲಿಗೆ ಅದು ಸ್ಮೃತಿ ಮಂಧನಾ. ಕ್ರಿಕೆಟ್‌ ಲೋಕದಲ್ಲಿ ಅವರು ಕ್ರಷ್‌ ಎಂದೇ ಹೆಸರುವಾಸಿ. ಮಹಾರಾಷ್ಟ್ರದ ಸಾಂಗ್ಲಿಯ ಸ್ಮೃತಿ ತಮ್ಮ ಸಹೋದರ ಕ್ರಿಕೆಟ್‌ ಆಡುವುದನ್ನು ನೋಡುತ್ತಾ ತಾವೂ ಬ್ಯಾಟ್, ಬಾಲ್‌ ಹಿಡಿದು ಮೈದಾನಕ್ಕೆ ಇಳಿದವರು. 2013ರಲ್ಲಿ ತಮ್ಮ 16ನೇ ವರ್ಷದಲ್ಲೇ ಭಾರತ ಪರ ಆಡಲು ಶುರುವಿಟ್ಟ ಸ್ಮೃತಿ ಈಗ ವಿಶ್ವ ಕ್ರಿಕೆಟ್‌ನಲ್ಲೇ ಪ್ರಮುಖ ಬ್ಯಾಟರ್‌. ಈ ವಿಶ್ವಕಪ್‌ ಗೆಲುವಿನಲ್ಲಿ ಸ್ಮೃತಿ ಕೊಡುಗೆ ಅತ್ಯಮೂಲ್ಯ. 9 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕ ಸೇರಿ 434 ರನ್‌ ಗಳಿಸಿರುವ ಸ್ಮೃತಿ ಟೂರ್ನಿಯ 2ನೇ ಗರಿಷ್ಠ ಸ್ಕೋರರ್‌. 2017ರ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ ಸೋತಾಗ ಕುಗ್ಗಿಹೋಗಿದ್ದ ಸ್ಮೃತಿ ಈಗ ಖುಷಿಯಲ್ಲಿ ತೇಲಾಡುತ್ತಿದ್ದಾರೆ.

-ಆ ಒಂದು ಶಾರ್ಪ್‌ ಶೂಟ್‌

ದೀಪ್ತಿಯ ಬದುಕು ಬದಲಿಸಿತ್ತು

ಯಾರ ಬದುಕು ಯಾವ ಕ್ಷಣದಲ್ಲಿ, ಹೇಗಾದರೂ ಬದಲಾಗಬಹುದು ಎಂಬುದಕ್ಕೆ ಈ ವಿಶ್ವಕಪ್‌ನ ಸರಣಿ ಶ್ರೇಷ್ಠ ಪ್ರಶಸ್ತಿ ವಿಜೇತೆ ದೀಪ್ತಿ ಶರ್ಮಾ ಉದಾಹರಣೆ. ಬಾಲ್ಯದಲ್ಲಿ ದೀಪ್ತಿ ತನ್ನ ಸಹೋದರ ಸುಮಿತ್‌ ಜೊತೆ ಕ್ರಿಕೆಟ್‌ ಮೈದಾನಕ್ಕೆ ಹೋಗುತ್ತಿದ್ದರು. ಅವರು ಅಭ್ಯಾಸ ನಡೆಸುತ್ತಿದ್ದರೆ ದೀಪ್ತಿ ಕ್ಷೇತ್ರರಕ್ಷಕಿ. ಒಂದಿನ ಬೌಂಡರಿ ಲೈನ್‌ ಕಡೆಯಿಂದ ದೀಪ್ತಿ ಎಸೆದ ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿದಿತ್ತು. ಅದು ಭಾರತದ ಮಾಜಿ ಕ್ರಿಕೆಟರ್‌ ಹೇಮಲತಾ ಕಲಾ ಅವರ ಕಣ್ಣಿಗೆ ಬೀಳುತ್ತದೆ. ಈ ಹುಡುಗಿಯಲ್ಲಿ ಅಸಾಮಾನ್ಯ ಪ್ರತಿಭೆಯಿದೆ ಎಂದು ಅರಿತ ಅವರು, ದೀಪ್ತಿಯನ್ನು ತಮ್ಮ ಗರಡಿಗೆ ಸೇರಿಸಿಕೊಳ್ಳುತ್ತಾರೆ. ದೀಪ್ತಿಯ ಕ್ರಿಕೆಟ್‌ ಪ್ರೇಮಕ್ಕೆ ಆಕೆಯ ಸುಮಿತ್‌ ಬೆಂಬಲವಾಗಿ ನಿಲ್ಲುತ್ತಾರೆ. ಜೊತೆಗೆ ಸಹೋದರಿಗಾಗಿ ತನ್ನ ಕ್ರಿಕೆಟ್‌ ಕನಸನ್ನೇ ತ್ಯಾಗ ಮಾಡುತ್ತಾರೆ. ಆ ಬಳಿಕ ನಡೆದಿದ್ದೆಲ್ಲವೂ ಇತಿಹಾಸ.

ಬಡಗಿ ತಂದೆಯ ತ್ಯಾಗಕ್ಕೆ ಕಪ್‌

ಗಿಫ್ಟ್‌ ಕೊಟ್ಟ ಅಮನ್‌ಜೋತ್‌

ಚಂಡೀಗಢದ ಕ್ರಿಕೆಟರ್‌ ಅಮನ್‌ಜೋತ್‌ರ ಸಾಧನೆ ಬಗ್ಗೆ ಹೇಳುವಾಗ ಅವರ ತಂದೆ ಭೂಪಿಂದರ್‌ ಸಿಂಗ್‌ರನ್ನು ಮರೆಯಲು ಸಾಧ್ಯವೇ ಇಲ್ಲ. ವೃತ್ತಿಯಲ್ಲಿ ಬಡಗಿಯಾಗಿರುವ ಭೂಪಿಂದರ್‌ ತಮ್ಮ ಮಗಳಲ್ಲಿ ಕ್ರಿಕೆಟ್‌ ಪ್ರೀತಿಯನ್ನು ಬಾಲ್ಯದಲ್ಲೇ ಕಂಡಿದ್ದರು. ಆದರೆ ಅಮನ್‌ರನ್ನು ಅಕ್ಕಪಕ್ಕದ ಮನೆಯ ಬಾಲಕರು ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಮಧ್ಯರಾತ್ರಿವರೆಗೆ ಕುಳಿತು ತಾವೇ ಕೆತ್ತಿದ ಮರದ ಬ್ಯಾಟ್‌ಅನ್ನು ಅಮನ್‌ಜೋತ್‌ಗೆ ನೀಡುತ್ತಾರೆ. ಅದು ಅಮನ್‌ಜೋತ್‌ರ ಮೊದಲ ಬ್ಯಾಟ್‌. ಊರವರು ಅಪಹಾಸ್ಯ ಮಾಡಿದರೂ ಎದೆಗುಂದದ ಭೂಪಿಂದರ್‌, ತಮ್ಮ ಮಗಳನ್ನು ಕೋಚ್‌ ನಾಗೇಶ್‌ ಅವರ ಬಳಿ ಸೇರಿಸುತ್ತಾರೆ. ಅಲ್ಲಿಂದ ಮೇಲೇರುತ್ತಲೇ ಬಂದ ಅಮನ್‌, 2024ರಲ್ಲಿ ಡಬ್ಲ್ಯುಪಿಎಲ್‌ ಮೂಲಕ ಕ್ರಿಕೆಟ್‌ ಜಗತ್ತಿಗೆ ಪರಿಚಯವಾಗಿದ್ದರು. ತಂದೆ ಅನುಭವಿಸಿದ್ದ ಕಷ್ಟ, ಅಪಹಾಸ್ಯ, ತ್ಯಾಗಕ್ಕೆ ಅಮನ್‌ಜೋತ್‌ ಈಗ ವಿಶ್ವಕಪ್‌ ಉಡುಗೊರೆಯಾಗಿ ನೀಡಿದ್ದಾರೆ.

ಬಾಲ್ಯದಲ್ಲೇ ಕಳಕೊಂಡ ಅಪ್ಪನ

ಕನಸು ನನಸು ಮಾಡಿದ ರೇಣುಕಾ

ಹಿಮಾಚಲ ಪ್ರದೇಶದ ವೇಗಿ ರೇಣುಕಾ ಸಿಂಗ್‌ ತಮ್ಮ 3ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ಆದರೆ ಕ್ರಿಕೆಟ್‌ ಪ್ರೇಮಿ ತಂದೆಯ ಕನಸನ್ನು ಸಮಾಧಿ ಮಾಡಲು ರೇಣುಕಾ ತಯಾರಿರಲಿಲ್ಲ. ತನ್ನ ಸಹೋದರನಿಗೆ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಅವರ ಹೆಸರಿಟ್ಟಿದ್ದ ತಂದೆಯ ಬಗ್ಗೆ ರೇಣುಕಾಗೆ ಅಭಿಮಾನ. ಹೀಗಾಗಿ ಬಾಲ್ಯದಲ್ಲೇ ಕೋಲು ಅಥವಾ ಪ್ಲಾಸ್ಟಿಕ್ ಬ್ಯಾಟ್‌ ಹಿಡಿದು ರೇಣುಕಾ ಆಡಲು ಹೊರಡುತ್ತಿದ್ದರು. ಆದರೆ ಹುಡುಗರು ಸೇರಿಸುತ್ತಿರಲಿಲ್ಲ. ಬಳಿಕ ತನ್ನ ಸಹೋದರ, ತಾಯಿ, ಚಿಕ್ಕಪ್ಪರ ನೆರವಿನಿಂದ ಧರ್ಮಶಾಲಾದ ಮಹಿಳಾ ಕ್ರಿಕೆಟ್‌ ಅಕಾಡೆಮಿ ಸೇರ್ಪಡೆಗೊಂಡ ರೇಣುಕಾ, ವೇಗದ ಬೌಲಿಂಗ್‌ ಮೂಲಕ ಬಲುಬೇಗನೇ ಎಲ್ಲರ ಗಮನ ಸೆಳೆಯುತ್ತಾರೆ. 2021ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ್ದ ರೇಣುಕಾ, ಈಗ ವಿಶ್ವಕಪ್‌ ಗೆಲ್ಲುವ ಮೂಲಕ ತಮ್ಮ ತಂದೆಯ ಕನಸು ನನಸು ಮಾಡಿದ ಖುಷಿಯಲ್ಲಿದ್ದಾರೆ.

ಟೆನಿಸ್‌ ಬಾಲ್‌ ಟು ವಿಶ್ವಕಪ್‌

ವಿನ್ನರ್‌: ಇದು ಗೌಡ್‌ರ ಕ್ರಾಂತಿ

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲಾ ಕೇಂದ್ರದಿಂದ ಎರಡು ಗಂಟೆ ದೂರದಲ್ಲಿರುವ ಘುವಾರ ಎಂಬಲ್ಲಿ ಕ್ರಿಕೆಟ್ ತರಬೇತಿಗೆ ಸೌಲಭ್ಯವಿಲ್ಲ. ಆದರೆ ಮಾಜಿ ಪೊಲೀಸ್ ಕಾನ್‌ಸ್ಟೆಬಲ್‌ನ ಮಗಳು ಕ್ರಾಂತಿ ಗೌಡ್‌ಗೆ ಅದ್ಯಾವುದೂ ಅಡ್ಡಿಯಾಗಿರಲಿಲ್ಲ. ಪರಿಶಿಷ್ಟ ಬುಡಕಟ್ಟು ಕುಟುಂಬದಲ್ಲಿ 6ನೇ ಮಗಳಾಗಿ ಹುಟ್ಟಿದ್ದ ಕ್ರಾಂತಿ ಟೆನಿಸ್‌ ಬಾಲ್‌ನಲ್ಲಿ ಕ್ರಿಕೆಟ್‌ ಆಡಲು ಹೋಗುತ್ತಿದ್ದರು. ಆದರೆ ಹುಡುಗರ ಜೊತೆ ಹುಡುಗಿ ಕ್ರಿಕೆಟ್‌ ಆಡುವುದೇ ಎಂಬ ಊರವರ ಅಪಹಾಸ್ಯ, ಪೂರ್ವಾಗ್ರಹ ಪೀಡಿತ ಹೇಳಿಕೆಗಳು ಕುಟುಂಬಕ್ಕೆ ಎದುರಾಗಿದ್ದವು. ಆದರೂ ಇದಕ್ಕೆ ಕುಟುಂಬ ತಲೆಕೆಡಿಸಿಕೊಳ್ಳಲಿಲ್ಲ. ಛತ್ತರ್‌ಪುರ ಮೂಲದ ತರಬೇತುದಾರ ರಾಜೀವ್ ಬಿಲ್ದಾರೆ ಅವರ ಬಳಿ ತರಬೇತಿಗೆ ಸೇರಿಕೊಂಡ ಕ್ರಾಂತಿ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಡಬ್ಲ್ಯುಪಿಎಲ್‌ನಲ್ಲಿ ಅಬ್ಬರಿಸಿದ್ದ ಅವರು ಈಗ ವಿಶ್ವಕಪ್‌ ವಿಜೇತೆಯಾಗಿದ್ದು, ತಮ್ಮನ್ನು ಅಪಹಾಸ್ಯಗೈದ ಊರ ಜನರನ್ನೇ ಸಂಭ್ರಮಿಸುವಂತೆ ಮಾಡಿದ್ದಾರೆ.

ದೇವರೇ ನನ್ನನ್ನು ಕಳ್ಸಿದ್ದಾರೆ

ಎಂದ ಮ್ಯಾಚ್‌ ವಿನ್ನರ್‌ ಶಫಾಲಿ

ಈ ವಿಶ್ವಕಪ್‌ನಲ್ಲಿ ಶಫಾಲಿ ವರ್ಮಾ ಪಯಣವೇ ಒಂದು ರೋಚಕ ಕತೆ. ಭಾರತದ ಪ್ರಮುಖ ಆರಂಭಿಕ ಆಟಗಾರ್ತಿಯಾಗಿದ್ದರೂ ಕಳೆದೊಂದು ವರ್ಷದಿಂದ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದ್ದೇ ಅಪರೂಪ. ವಿಶ್ವಕಪ್‌ಗೂ ಆಯ್ಕೆಯಾಗಿರಲಿಲ್ಲ. ಆದರೆ ಸೆಮಿಫೈನಲ್‌ಗೂ ಮುನ್ನ ಪ್ರತೀಕಾ ರಾವಲ್‌ ಗಾಯಗೊಂಡಿದ್ದರಿಂದ ಶಫಾಲಿಯ ಅದೃಷ್ಟ ಖುಲಾಯಿಸಿತು. ಮತ್ತೆ ತಂಡಕ್ಕೆ ಬಂದರು. ಫೈನಲ್‌ನಲ್ಲಿ ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ಮಿಂಚಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದಾರೆ. ತಮಗಿನ್ನು ಅವಕಾಶ ಸಿಗಲಿದೆಯೇ ಎಂಬಂತಿದ್ದ ಶಫಾಲಿ ಈಗ ಮ್ಯಾಚ್‌ ವಿನ್ನರ್‌. ಈ ಬಗ್ಗೆ ಶಫಾಲಿಯೇ ಹೇಳುವ ಪ್ರಕಾರ, ತಂಡಕ್ಕೆ ಏನಾದರೂ ಒಳ್ಳೆಯದನ್ನು ಮಾಡಲು ಅವರನ್ನು ದೇವರೇ ಕರೆತಂದಿದ್ದಾರಂತೆ.--ಭಾರತಕ್ಕೆ ಆಡುವ ಭಾಗ್ಯ ಸಿಗದ

ಅಮೋಲ್‌ ಕಪ್‌ ಗೆಲ್ಲಿಸಿಕೊಟ್ಟರು

PREV
Read more Articles on

Recommended Stories

ಎನ್‌ಡಿಎ ಅಂದ್ರೆ ವಿಕಾಸ, ಆರ್‌ಜೆಡಿ ಅಂದ್ರೆ ವಿನಾಶ: ಮೋದಿ
ಇನ್ನೂ ಮಾನಸಿಕ ಹಿಂಸೆ ಆಗುತ್ತಿದೆ: ಏರಿಂಡಿಯಾ ಸಂತ್ರಸ್ತ